ಬ್ರಿಟನ್: 30 ಸಾವಿರಕ್ಕೂ ಅಧಿಕ ಪಬ್ ಗಳು ಮುಚ್ಚುವ ಭೀತಿಯಲ್ಲಿ
Team Udayavani, May 23, 2020, 12:20 PM IST
ಲಂಡನ್: ಕೋವಿಡ್‌ನಿಂದಾಗಿ 30,000ಕ್ಕೂ ಅಧಿಕ ಪಬ್‌ಗಳು, ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಖಾಯಂ ಆಗಿ ಮುಚ್ಚುವ ಸಾಧ್ಯತೆಯಿದೆ.
ಕೋವಿಡ್ ಬಿಕ್ಕಟ್ಟು ಆರಂಭವಾಗುವ ಮುನ್ನವೇ 12 ತಿಂಗಳುಗಳಲ್ಲಿ ದೇಶಾದ್ಯಂತ ಸುಮಾರು 2,800 ಬಾರ್‌ಗಳು ಮುಚ್ಚಿದ್ದವು. ಜುಲೈ ಆರಂಭದಲ್ಲಿ ಆತಿಥ್ಯ ಕ್ಷೇತ್ರ ಮರುತೆರೆದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದೆಂದು ಸಮೀಕ್ಷೆಯೊಂದು ತಿಳಿಸಿದೆ.
ಅನೇಕ ಪಬ್ ಮಾಲಕರು ಎರಡು ಮೀಟರ್‌ಗಳ ಅಂತರವಿರಿಸುವ ನಿಯಮವನ್ನು ಸಡಿಲಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಯಮ ರೀತ್ಯಾ ವ್ಯವಹಾರವನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿಲ್ಲವಾದ್ದರಿಂದ ತಾವು ಪಬ್ ಅನ್ನು ಮರು ಆರಂಭಿಸುವುದಿಲ್ಲವೆಂದು ಅವರು ಹೇಳುತ್ತಾರೆ. ಎರಡು ಮೀಟರ್‌ಗಳ ನಿಯಮವೆಂದರೆ ಐದು ಪಬ್‌ಗಳ ಪೈಕಿ ಒಂದನ್ನು ಮಾತ್ರ ಮರು ಆರಂಭಿಸಲು ಸಾಧ್ಯವಾಗಬಹುದು. ಒಂದು ಮೀಟರ್ ಅಂತರದ ನಿಯಮವಿದ್ದರೆ ಹೆಚ್ಚಿನ ಪಬ್‌ಗಳನ್ನು ತೆರೆಯಬಹುದಾಗಿದೆಯೆಂದು ಅವರು ಹೇಳುತ್ತಾರೆ.