10 ಲಕ್ಷ ರೈತರಿಗೆ ಹೊಸ ಸಾಲ

ಈಗಾಗಲೇ 22 ಲಕ್ಷ ಮಂದಿ ರೈತರ ನೋಂದಣಿ

Team Udayavani, Jun 25, 2019, 5:28 AM IST

ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಈ ವರ್ಷ ಹತ್ತು ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡಲು ತೀರ್ಮಾನಿಸಲಾಗಿದೆ. ಕನಿಷ್ಠ ತಲಾ 30 ಸಾವಿರ ರೂ.ಗಳಂತೆ ಸಾಲ ಒದಗಿಸುವುದು ನಮ್ಮ ಗುರಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ.

ರಾಜ್ಯದಲ್ಲಿ 22 ಲಕ್ಷ ರೈತರು ಈಗಾಗಲೇ ಕೃಷಿ ಸಾಲ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಅವರೊಂದಿಗೆ ಇನ್ನೂ 10 ಲಕ್ಷ ರೈತರನ್ನು ಸೇರ್ಪಡೆ ಮಾಡಲಾಗುವುದು. ಒಟ್ಟಾರೆ 32 ಲಕ್ಷ ರೈತರಿಗೆ ಸಾಲ ಸೌಲಭ್ಯ ಒದಗಿಸಿದಂತಾಗುತ್ತದೆ. ಹತ್ತು ಸಾವಿರ ಕೋಟಿ ರೂ.ವರೆಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಹಕಾರ ಸಂಘಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಪ್ರಕ್ರಿಯೆ ಮುಂದಿನ ಒಂದು ವಾರದಲ್ಲಿ ಪೂರ್ಣವಾಗಲಿದೆ. ತಾಂತ್ರಿಕ ಕಾರಣಗಳಿಂದ ಕೆಲವೆಡೆ ರೈತರಿಗೆ ಸಕಾಲಕ್ಕೆ ಸಾಲ ಮನ್ನಾ ಸೌಲಭ್ಯ ಲಭ್ಯವಾಗಿಲ್ಲ. ಆದರೆ ಅವರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಪ್ರತಿ ವರ್ಷ ಸಾಲ ಪಡೆದವರೇ ಮತ್ತೆ ಸಾಲ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರವು ಸತತ ಮೂರು ವರ್ಷ ಸಾಲ ಸೌಲಭ್ಯ ಪಡೆದ ರೈತರಿಗೆ ಮತ್ತೆ ಸಾಲ ನೀಡದೆ ಹೊಸ ರೈತರಿಗೆ ಸಾಲ ನೀಡುವ ನಿಯಮ ಜಾರಿಗೆ ತಂದಿದೆ. ಆ ಬಗ್ಗೆ ರಾಜ್ಯದಲ್ಲೂ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಅಧಿಕಾರಿಗಳು, ಸಹಕಾರ ವಲಯದ ಮುಖಂಡರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಪ್ರಸ್ತುತ ಅವಶ್ಯವಿರುವ ಎಲ್ಲ ರೈತರಿಗೂ ಸಾಲ ಸಿಗುವಂತೆ ವ್ಯವಸ್ಥಿತ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ