ಯುವರತ್ನದ ‘ಪಾಠಶಾಲಾ’ ಹಾಡು ರಿಲೀಸ್ : ಹಾಡಿನಲ್ಲಿ ಕಾಣಿಸಿಕೊಂಡ ಅಣ್ಣಾವ್ರು..!
ಪಾಠಶಾಲಾ ಹಾಡು ರಿಲೀಸ್
Team Udayavani, Mar 3, 2021, 6:45 PM IST
ಬೆಂಗಳೂರು : ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರದ ಬಹು ನಿರೀಕ್ಷಿತ ‘ಪಾಠಶಾಲಾ’ ಹಾಡು ರಿಲೀಸ್ ಆಗಿದೆ. ಈ ಹಾಡು ಎಲ್ಲರನ್ನೂ ತಮ್ಮ ಬಾಲ್ಯದ ಹಾಗೂ ಕಾಲೇಜು ದಿನಗಳನ್ನು ನೆನೆಯುವಂತೆ ಮಾಡಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರತ್ನ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದಾರೆ. ಇದೀಗ ರಿಲೀಸ್ ಆಗಿರುವ ಪಾಠಶಾಲಾ ಹಾಡು ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಈ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ ರಾಮ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಈ ಹಾಡಿಗೆ ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಪಾಠಶಾಲಾ ಹಾಡಿನ ವಿಶೇಷ ಏನಂದ್ರೆ ಈ ಹಾಡಿನಲ್ಲಿ ರಾಜ್ ಕುಮಾರ್, ಹಂಸಲೇಖ, ಕಾಶಿನಾಥ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೇರಿದಂತೆ ಅನೇಕ ದಿಗ್ಗಜರು ಕಾಣಿಸಿಕೊಂಡಿದ್ದು, ತಮ್ಮ ತಮ್ಮ ಗುರುಗಳ ಜೊತೆಗಿನ ಫೋಟೋಗಳಲ್ಲಿ ಕಾಣಿಸಿದ್ದಾರೆ.
ಚಿತ್ರದಲ್ಲಿ ಪ್ರಕಾಶ್ ರೈ ಸಹ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಶಿಕ್ಷಕರ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಯುವರತ್ನ ಸಿನಿಮಾದಲ್ಲಿ ಪುನೀತ್ ಜೊತೆ ದಿಗಂತ್, ಧನಂಜಯ್ ಮತ್ತು ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಪುನೀತ್ ಗೆ ನಾಯಕಿಯಾಗಿ ಸಯೇಶಾ ಬಣ್ಣ ಹಚ್ಚಿದ್ದಾರೆ. ಸಿನಿಮಾವು ಇದೇ ಏಪ್ರಿಲ್ 1ಕ್ಕೆ ತೆರೆ ಕಾಣುತ್ತಿದೆ.