ಆಗದ ವಿಸ್ತರಣೆ ಹೆಚ್ಚಿದ ಅಸಹನೆ

ಸಂಪುಟ ವಿಸ್ತರಣೆ ದಿನಾಂಕ ಮುಂದೂಡಿಕೆ

Team Udayavani, Jun 6, 2019, 6:00 AM IST

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯಲಿದೆ ಎಂಬ ನಿರೀಕ್ಷೆ ಮತ್ತೆ ಮತ್ತೆ ಹುಸಿಯಾಗುತ್ತಲೇ ಇದೆ. ಇದು ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿ-ಕಿರಿಯ ನಾಯಕರು ನಾಯಕತ್ವದ ವಿರುದ್ಧ ಮುಗಿಬೀಳುತ್ತಿರುವುದಕ್ಕೆ ಕಾರಣವಾಗಿದೆ. ಸಚಿವ ‘ಗಿರಿ’ ನೀಡಲಾಗುವ ದಿನಾಂಕ ಮುಂದುವರಿಯುತ್ತಲೇ ಇದ್ದು, ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಆಕ್ರೋಶ ಹೆಚ್ಚಿಸಿದೆ. ಒಟ್ಟಾರೆಯಾಗಿ ಇದು ಸಮ್ಮಿಶ್ರ ಸರ್ಕಾರಕ್ಕೆ ಆತಂಕದ ಪರಿಸ್ಥಿತಿ ನಿರ್ಮಿಸಿದೆ.

ರಂಜಾನ್‌ ದಿನದಂದು ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸಚಿವಾಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಪುನಾರಚನೆ ಮಾಡಿದರೂ ಕಷ್ಟ ಎಂಬ ಸ್ಥಿತಿ ನಿರ್ಮಾಣವಾದ ಕಾರಣ ಸದ್ಯಕ್ಕೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ, ಸಚಿವರಾಗಲು ಕಾಯುತ್ತಿದ್ದವರು ತಮ್ಮಲ್ಲಿನ ಕೋಪ ಹೊರ ಹಾಕುತ್ತಿದ್ದಾರೆ.

ಒಂದೆಡೆ ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌ ಪಕ್ಷದ ನಾಯಕರು ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತೂಬ್ಬ ಹಿರಿಯ ನಾಯಕ ಎಚ್.ಕೆ.ಪಾಟೀಲ್ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರೇ ಮಧ್ಯಪ್ರವೇಶ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಎಚ್. ವಿಶ್ವನಾಥ್‌ ಅವರು ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿರುವುದು ಹಾಗೂ ಕಾಂಗ್ರೆಸ್‌ ನಾಯಕರು, ಸಿದ್ದರಾಮಯ್ಯ ವಿರುದ್ಧದ ಬಂಡಾಯಕ್ಕೆ ಒತ್ತಾಸೆ ನೀಡುವಂತೆ ಹೇಳಿಕೆ ನೀಡಿರುವುದು ಸಮ್ಮಿಶ್ರ ಸರ್ಕಾರದ ಗಾಯಕ್ಕೆ ಬರೆ ಎಳೆದಂತಾಗಿದೆ. ಆದರೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರದಲ್ಲಿ ಜೆಡಿಎಸ್‌ನಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ. ಆದರೆ, ಕಾಂಗ್ರೆಸ್‌ನ ಆಂತರಿಕ ಸಂಘರ್ಷ ಮುಗಿಯದ ಕಾರಣ ಆ ಪಕ್ಷದಲ್ಲೂ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಹೀಗಾಗಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ಬಿಗಡಾಯಿಸಿದಂತಾಗಿದ್ದು, ಆಗುತ್ತಾ ಇಲ್ಲವಾ ಎಂಬುದು ಖಚಿತಗೊಂಡಿಲ್ಲ. ಲೋಕಸಭೆ ಚುನಾವಣೆ ಸೋಲಿನ ಜವಾಬ್ದಾರಿ ಹೊತ್ತು ಹಿರಿಯ ಸಚಿವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಕೊಡಲಿ ಎಂಬ ಬೇಡಿಕೆ ಇಟ್ಟಿದ್ದವರು ಇದೀಗ ಒಬ್ಬೊಬ್ಬರಾಗಿಯೇ ಅಪಸ್ವರ ಎತ್ತುತ್ತಿದ್ದಾರೆ ಎಂದು ಹೇಳಲಾಗಿದೆ.

ಎಚ್.ಕೆ.ಪಾಟೀಲ್ ವಾದ ಏನು?: ಈಗಿನ ಸ್ಥಿತಿಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆ ನೀಗಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾv‌ಬೇಕು. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು.

ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧವೇ ರೋಷನ್‌ ಬೇಗ್‌ ಸೇರಿದಂತೆ ಅನೇಕ ನಾಯಕರು ಆರೋಪ ಮಾಡಿರುವುದರಿಂದ ರಾಹುಲ್ ಗಾಂಧಿಯೇ ಮಧ್ಯ ಪ್ರವೇಶ ಮಾಡಬೇಕು. ಎಲ್ಲ ಹಿರಿಯ ನಾಯಕರನ್ನು ಕರೆದು ರಾಹುಲ್ ಅವರೇ ಆಂತರಿಕ ಗೊಂದಲ ನಿವಾರಣೆ ಮಾಡಬೇಕು ಎಂಬುದು ಅವರ ವಾದ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ಡಾ.ಸುಧಾಕರ್‌ ಹೇಳಿಕೆಗಳನ್ನು ಗಮನಿಸಿದ್ದೇನೆ. ಹಿರಿಯ ನಾಯಕರು ಅಸಮಾಧಾನ ಹೊರ ಹಾಕುತ್ತಿರುವಾಗ ಹೈ ಕಮಾಂಡ್‌ ಮಧ್ಯ ಪ್ರವೇಶ ಮಾಡಬೇಕು. ಸಂಪುಟ ವಿಸ್ತರಣೆಗೆ ವಿರೋಧ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧವೇ ಕೆಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಶೀಘ್ರವೇ ರಾಹುಲ್ ಗಾಂಧಿ ರಾಜ್ಯ ನಾಯಕರ ಸಭೆ ಕರೆದು ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಹೇಳಿದ್ದಾರೆ.

ಪಕ್ಷ ಎಲ್ಲ ಕಡೆಯೂ ಸೋತಿದೆ. ಈ ಸಂದರ್ಭದಲ್ಲಿ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೋಲಿಗೆ ನಾನು ಯಾರನ್ನೋ ಒಬ್ಬರನ್ನು ಹೊಣೆ ಮಾಡಲು ಹೋಗುವುದಿಲ್ಲ. ಸಿದ್ದರಾಮಯ್ಯ ಪಕ್ಷದ ನಾಯಕರಿದ್ದಾರೆ. ಅವರೊಬ್ಬರನ್ನೇ ದೂಷಿಸುವುದಿಲ್ಲ. ಎಲ್ಲದರ ಬಗ್ಗೆಯೂ ಹೈ ಕಮಾಂಡ್‌ ಚರ್ಚಿಸಬೇಕು ಎಂದು ತಿಳಿಸಿದ್ದಾರೆ.

ರೆಡ್ಡಿಗೆ ಸಚಿವ ಸ್ಥಾನ
ಬಂಡಾಯದ ಬಿಸಿ ಎದುರಿಸಿರುವ ಸಿದ್ದರಾಮಯ್ಯ ಅವರು ಸಿ.ಎಸ್‌. ಶಿವಳ್ಳಿ ನಿಧನದಿಂದ ಖಾಲಿಯಾಗಿರುವ ಸಚಿವ ಸ್ಥಾನವನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡುತ್ತೇವೆ ಎಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗುತ್ತದೆ. ರೋಷನ್‌ ಬೇಗ್‌ ಬಗ್ಗೆ ಮಾತನಾಡಲ್ಲ. ವಿಶ್ವನಾಥ್‌ ಬಗ್ಗೆಯೂ ಮಾತನಾಡುವುದಿಲ್ಲ, ಅವರು ನಮ್ಮ ಪಕ್ಷದವರೂ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ