ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಗೆ ತಡೆ

ಉದಯವಾಣಿ ವರದಿ ನಂತರ ಎಚ್ಚೆತ್ತ ರಾಜ್ಯ ಸರ್ಕಾರ

Team Udayavani, May 22, 2019, 6:00 AM IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರಿ ಶಾಲೆಗಳ ವಿಲೀನ ಮಾಡದೇ ಕರ್ನಾಟಕ ಪಬ್ಲಿಕ್‌ ಶಾಲೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸರ್ಕಾರಿ ವ್ಯವಸ್ಥೆಯಡಿ 1 ರಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್‌ ಶಾಲೆಗಳ ಪರಿಕಲ್ಪನೆಯನ್ನು 2018-19ನೇ ಸಾಲಿನಿಂದ ಆರಂಭಿಸಲಾಗಿತ್ತು. ಮೊದಲಿಗೆ 176 ಶಾಲೆಗಳನ್ನು ಆರಂಭಿಸಲಾಗಿತ್ತು. ಈಗ ಇವುಗಳ ಸಂಖ್ಯೆ 276ಕ್ಕೆ ಏರಿಕೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳೊಂದಿಗೆ ವಿಲೀನಗೊಳಿಸಿ ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಲಾಗಿತ್ತು. ಈ ಕುರಿತು ಉದಯವಾಣಿ ಮೇ 21ರಂದು ‘ಕರ್ನಾಟಕ ಪಬ್ಲಿಕ್‌ ಶಾಲೆಗಾಗಿ ಸರ್ಕಾರಿ ಶಾಲೆ ವಿಲೀನ’ ಎಂಬ ಶೀರ್ಷಿಕೆಯಡಿ ವಿಸ್ತೃತವಾದ ವರದಿ ಪ್ರಕಟಿಸಿತ್ತು.

ಮಂಗಳವಾರ ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಈ ಕುರಿತು ಚರ್ಚೆ ನಡೆಸಿ ಉದ್ದೇಶಿತ ಯೋಜನೆಯ ರೂಪುರೇಷೆಗಳನ್ನು ಬದಲಿಸಿದ್ದಾರೆ. ಜತೆಗೆ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ಆಗುವ ಯೋಜನೆಯಿಂದ ಉಂಟಾಗಬಹುದಾದ ವಿವಾದವನ್ನು ತಪ್ಪಿಸಿಕೊಳ್ಳಲು ನಿರ್ಧಾರದಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಾಗಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಪ್ರಕ್ರಿಯೆಯನ್ನು ಕೈಬಿಟ್ಟು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳು ಪ್ರತ್ಯೇಕವಾಗಿರುವ ಕಡೆಗಳಲ್ಲೇ ಕರ್ನಾಟಕ ಪಬ್ಲಿಕ್‌ ಶಾಲೆಯ ಹೆಸರಿನಲ್ಲಿ ತರಗತಿ ಮುಂದುವರಿಸಲು ನಿರ್ಧರಿಸಿದೆ.

ಅದರಂತೆ 2019-20ನೇ ಸಾಲಿನಿಂದ ಆರಂಭವಾಗಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ 78 ಶಾಲೆಗಳು ಒಂದೇ ಕ್ಯಾಂಪಸ್‌ (ಆವರಣದಲ್ಲಿ)ಇರುವುದಿಲ್ಲ. ಬಾಗಲಕೋಟೆಯ 6, ಬೆಳಗಾವಿಯ 4, ಚಿಕ್ಕೋಡಿಯ 8, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಸುಮಾರು 15 ಶಾಲೆಗಳು, ಕಲಬುರಗಿ, ಕೊಪ್ಪಳ, ಕೋಲಾರ, ಮೈಸೂರು, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಮಧುಗಿರಿ, ಉತ್ತರ ಕನ್ನಡ, ಶಿರಸಿ, ಉಡುಪಿ, ವಿಜಯಪುರ ಜಿಲ್ಲೆಗಳ ನಾಲ್ಕೈದು ಶಾಲೆಗಳು ಸೇರಿದಂತೆ ಒಟ್ಟು 78 ಶಾಲೆಗಳಲ್ಲಿ ಪಬ್ಲಿಕ್‌ ಶಾಲೆಗಳ ಕ್ಯಾಂಪಸ್‌ ಬೇರೆ ಬೇರೆಯಾಗಿದೆ.

ಇನ್ನು 20 ಕರ್ನಾಟಕ ಪಬ್ಲಿಕ್‌ ಶಾಲೆಯ ಕ್ಯಾಂಪಸ್‌ನಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ, ಬೆಳಗಾವಿ, ಚಿಕ್ಕೋಡಿ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಉಡುಪಿ ಮೊದಲಾದ ಜಿಲ್ಲೆಗಳಲಿರುವ 20 ಕರ್ನಾಟಕ ಪಬ್ಲಿಕ್‌ ಶಾಲೆ ಕ್ಯಾಂಪಸ್‌ನಲ್ಲಿ ಪಿಯು ಕಾಲೇಜು ಇಲ್ಲ. ಬೆಂಗಳೂರು ಉತ್ತರ ಜಿಲ್ಲೆಯ 2 ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಇಲ್ಲ. ಕೇವಲ 1ರಿಂದ 8ನೇ ತರಗತಿ ಮಾತ್ರ ಇದೆ.

ಒಟ್ಟಾರೆಯಾಗಿ ಒಂದೇ ಸೂರಿನಡಿ ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಬೇಕೆಂದಿದ್ದ ಸರ್ಕಾರ ಈಗ ತನ್ನ ನಿಯಮದಲ್ಲಿ ಸಡಿಲ ಮಾಡಿಕೊಂಡಿದೆ. ಅಲ್ಲದೆ, ಕರ್ನಾಟಕ ಪಬ್ಲಿಕ್‌ ಶಾಲೆಗಾಗಿ ಸರ್ಕಾರಿ ಶಾಲೆ ವಿಲೀನ ಮಾಡುವ ಯೋಚನೆಯನ್ನು ಬಹುತೇಕ ಕೈಬಿಟ್ಟಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ