ಕರ್ನಾಟಕದಲ್ಲಿ ರಾಮಜನ್ಮಭೂಮಿ ಹೋರಾಟ

Team Udayavani, Nov 9, 2019, 7:48 PM IST

-ಕರ್ನಾಟಕದಲ್ಲಿ 35 ವರ್ಷಗಳ ಹಿಂದೆಯೇ ಶುರುವಾಗಿತ್ತು ರಾಮಜನ್ಮಭೂಮಿ ಆಂದೋಲನ
-ರಾಮಮಂದಿರ್‌ ವಹಿ ಬನಾಯೇಂಗೇ ಘೋಷವಾಕ್ಯದಡಿ ಅಯೋಧ್ಯೆ ತಲುಪಿದ್ದರು ಲಕ್ಷ ಕರಸೇವಕರು
– ಅಡ್ವಾಣಿ ರಥಯಾತ್ರೆ ರಾಜ್ಯದಲ್ಲೂ ಸಂಚರಿಸಿತ್ತು

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಕರ್ನಾಟಕದಲ್ಲಿ ಮೂವತ್ತೈದು ವರ್ಷಗಳ ಹಿಂದೆಯೇ ದೊಡ್ಡ ಪ್ರಮಾಣದಲ್ಲೇ ಪ್ರಾರಂಭವಾಗಿತ್ತು.
1984 ಡಿಸೆಂಬರ್‌ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್‌ ಎರಡನೇ ಮಹಾ ಸಮ್ಮೇಳನ ಉಜಿರೆಯಲ್ಲಿ ನಡೆದಾಗ ರಾಮಜನ್ಮ ಭೂಮಿ ಜಾಗೃತಿ ರಥಯಾತ್ರೆಯೂ ಆರಂಭವಾಗಿತ್ತು, ರಾಮಜನ್ಮಭೂಮಿ ಮುಕ್ತಿಗಾಗಿ ಕರೆ ನೀಡಲಾಗಿತ್ತು.

1990 ರಲ್ಲಿ ಆದಿಚುಂಚನಗಿರಿ, ಧರ್ಮಸ್ಥಳ, ಕೂಡಲಸಂಗಮ ಸೇರಿ ರಾಜ್ಯದ ಏಳು ಭಾಗಗಳಿಂದ ರಾಮಶಿಲಾ ರಥಯಾತ್ರೆ ಹೆಸರಿನಲ್ಲಿ ಏಳು ರಥಗಳು ಬೀದರ್‌ನಲ್ಲಿ ಸಮಾವೇಶಗೊಂಡು ಬೃಹತ್‌ ಸಮಾವೇಶದ ಮೂಲಕ ಸುಮಾರು 60 ರಿಂದ 70 ಸಾವಿರ ಕರಸೇವಕರು ಅಯೋಧ್ಯೆ ತಲುಪಿದರು.

ಆಗ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂಸಿಂಗ್‌ ಯಾದವ್‌ ಅವರು ಕರಸೇವಕರನ್ನು ಉತ್ತರಪ್ರದೇಶ ಪ್ರವೇಶದಲ್ಲೇ ತಡೆಯಲು ಸೂಚಿಸಿದಾಗ ಪೊಲೀಸರು ಬಂಧಿಸಿದರು. ಆಗ ಕೆಲವರ ಪ್ರಾಣತ್ಯಾಗ ಸಹ ಯಿತು. ಸ್ವಾತಂತ್ರಾéನಂತರ ಭಾರತದಲ್ಲಿ ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಬಲಿದಾನ ಎಂದೇ ಆಗ ಕರಸೇವಕರು ಹೇಳಿಕೊಂಡರು.

ಆ ನಂತರ 1992 ರಲ್ಲಿ ಮತ್ತೆ ರಾಜ್ಯದ ದಕ್ಷಿಣ ಭಾಗದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಾಮಜನ್ಮಭೂಮಿ ಆಂದೋಲನ ಪ್ರಾರಂಭವಾಯಿತು. ಉತ್ತರ ಕರ್ನಾಟಕ ಭಾಗದ ನೇತೃತ್ವ ವಾದಿರಾಜ ಪಂಚಮುಖೀ ಅವರು ವಹಿಸಿಕೊಂಡಿದ್ದರು. (ಪ್ರಸ್ತುತ ಅವರು ಅಲಹಾಬಾದ್‌ನಲ್ಲಿ ಶ್ರೀಗಳಾಗಿದ್ದಾರೆ) ಆಗ ರಾಜ್ಯದಿಂದ 1 ಲಕ್ಷ ಕರಸೇವಕರು ಅಯೋಧ್ಯೆಗೆ ತೆರಳಿ ಅಶೋಕ್‌ ಸಿಂಘಾಲ್‌ ಅವರ ನೇತೃತ್ವದಲ್ಲಿ ಡಿಸೆಂಬರ್‌ 6 ರ ಘಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ 28 ಸಾವಿರ ಗ್ರಾಮಗಳಿಂದ ಒಂದು ಗ್ರಾಮದಿಂದ ಒಂದು ಇಟ್ಟಿಗೆ, ಒಬ್ಬ ಹಿಂದೂನಿಂದ 1.25 ರೂ. ಸಂಗ್ರಹ ಮಾಡಲಾಗಿತ್ತು. ರಾಜ್ಯದ ಪ್ರತಿ ಹಳ್ಳಿಯಿಂದಲೂ ಇಟ್ಟಿಗೆಗಳನ್ನು ಪೂಜಿಸಿ ರಾಮಮಂದಿರ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಿತರಾಗಿ ಜನತೆ ಕಳುಹಿಸಿಕೊಟ್ಟಿದ್ದರು.

ವಹಿ ಬನಾಯೆಂಗೇ
ರಾಜ್ಯದಲ್ಲಿ ರಾಮಜನ್ಮಭೂಮಿ ಆಂದೋಲನ ಕುರಿತು ಆಗ ಕೂಡಲಸಂಗಮ ಭಾಗದಿಂದ ಹೊರಟ ರಥದ ಸಾರಥ್ಯ ವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಮಂತ್ರಿ ಆಗಿರುವ ಜಗದೀಶ್‌ ಕಾರಂತ್‌ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, 500 ವರ್ಷಗಳ ಕಾಲ ರಾಮಜನ್ಮಭೂಮಿಯ ಮುಕ್ತಿಗಾಗಿ ನಡೆದ ಹೋರಾಟ 73 ಬಾರಿಯ ವಿಫ‌ಲ ಯತ್ನದ ನಂತರ 1992 ರಲ್ಲಿ ನಾವು ಯಶಸ್ವಿಯಾಗಿದ್ದೆವು. ಅಲ್ಲಿಂದ “ಮಂದಿರ್‌ ವಹಿ ಬನಾಯೆಂಗೇ’ ಘೋಷವಾಕ್ಯ ಮೊಳಗಿತು. ಆ ಜಾಗವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಖಾತರಿಯಾಯಿತು.

ರಾಮಜನ್ಮಭೂಮಿ ಆಂದೋಲನವು ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಹಿಂದೂಗಳ ಭಾವನೆ ಭಾರತಕ್ಕಷ್ಟೇ ಅಲ್ಲದೆ ವಿಶ್ವಕ್ಕೆ ಗೊತ್ತಾಯಿತು. ಆದರೆ, ಈ ಸತ್ಯ ಅರ್ಥ ಮಾಡಿಕೊಳ್ಳದ ಸೆಕ್ಯುಲರ್‌ ವಾದಿಗಳ ರಾಜಕೀಯ ಭವಿಷ್ಯಕ್ಕೆ ನೆಲಕಚ್ಚಿತು. ಎಡವಾದಿಗಳಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು.

1980-85 ರಲ್ಲಿ ಏನೇನೂ ಅಲ್ಲದ ಬಿಜೆಪಿ ಕೋಟಿ ಕೋಟಿ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದರಿಂದ ಇಂದು ದೊಡ್ಡ ಮಟ್ಟದಲ್ಲಿ ಬಳೆದಿದೆ. ಕೇಂದ್ರದಲ್ಲಿ ಆಡಳಿತ ಮಾಡಿದ ಸರ್ಕಾìಗಳಿಗೆ ನಾವು ಕಾನೂನಾತ್ಮಕವಾಗಿಯೇ ರಾಮಜನ್ಮಭೂಮಿ ಹಿಂದೂಗಳಿಗೆ ಬಿಟ್ಟುಕೊಡಲು ಬೇಡಿಕೆ ಇಟ್ಟಿದ್ದೆವು. ಅಂತಿಮವಾಗಿ ಅದು ನ್ಯಾಯಾಲಯದ ಅಂಗಳಕ್ಕೆ ಹೋಗಿತ್ತು.

ಇದೀಗ 500 ವರ್ಷಗಳ ಸುದೀರ್ಘ‌ವಾದ ಸಂಘರ್ಷಕ್ಕೆ ಪುರಸ್ಕಾರ, ಗೌರವ ಸಂದಿದೆ. ರಾಮಜನ್ಮಭೂಮಿ ವಿಚಾರದಲ್ಲಿ ತುಷ್ಠಿಕರಣ ನೀತಿ ಅನುರಿಸಿದ ಸೋಗಲಾಡಿ ಸೆಕ್ಯುಲರ್‌ವಾದಿಗಳು, ನಕಲಿ ಜಾತ್ಯತೀತವಾದಿಗಳಿಗೆ ಪಾಠವಾಗಿದೆ ಎಂದು ಹೇಳಿದ್ದಾರೆ.

ಅಡ್ವಾಣಿ ರಥಯಾತ್ರೆ
ರಾಮಮಂದಿರ ನಿರ್ಮಾಣಕ್ಕಾಗಿ ಎಲ್‌.ಕೆ.ಅಡ್ವಾಣಿಯವರು ನಡೆಸಿದ ರಥಯಾತ್ರೆ ಕರ್ನಾಟಕದಲ್ಲೂ ಐದು ದಿನ ಸಂಚರಿಸಿತ್ತು. ಬೆಂಗಳೂರಿಗೆ ಆಗಮಿಸಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಭೆಯ ನಂತರ ತುಮಕೂರು, ಶಿವಮೊಗ್ಗ, ಹರಿಹರ, ಹೊಸಪೇಟೆ, ಗಂಗಾಗವತಿ, ರಾಯಚೂರು ಮೂಲಕ ಸಾಗಿ ನಂತರ ಆಂಧ್ರಪ್ರದೇಶಕ್ಕೆ ಹೊರಟಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ