ವಿಶ್ವಸಂಸ್ಥೆ ಕಾರ್ಯದರ್ಶಿ ಭೇಟಿ ವೇಳೆಯಲ್ಲೇ ರಷ್ಯಾ ದಾಳಿ
ಗುಟೆರಸ್, ಮತ್ತವರ ತಂಡ ಸೇಫ್: ವಿಶ್ವಸಂಸ್ಥೆ
Team Udayavani, Apr 30, 2022, 7:20 AM IST
ಕೀವ್: ಕಳೆದೆರಡು ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ, ಶುಕ್ರವಾರದಂದು ಉಕ್ರೇನ್ ರಾಜಧಾನಿಯ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಕೀವ್‌ಗೆ ಭೇಟಿ ನೀಡಿದ್ದು, ಇದೇ ಸಂದರ್ಭ ದಲ್ಲಿ ಆ ನಗರದ ಮೇಲೆ ರಷ್ಯಾ ದಾಳಿ ನಡೆಸುವ ಮೂಲಕ ತನ್ನ ಉದ್ಧಟತನ ಪ್ರದರ್ಶಿಸಿದೆ.
“ರಷ್ಯಾದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಹಾಗೂ ಗುಟೆರಸ್ ಅವರ ನಡುವಿನ ಸಭೆ ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಕೀವ್ ನಗರದ ಮೇಲೆ ದಾಳಿ ನಡೆಸಲಾಗಿದೆ. ಸಭೆ ನಡೆದ ಪ್ರಾಂತದಲ್ಲಿ ಯಾವುದೇ ದಾಳಿ ಆಗಿಲ್ಲ. ಹೀಗಾಗಿ ಗುಟೆರಸ್ ಹಾಗೂ ಅವರೊಂದಿಗಿದ್ದ ವಿಶ್ವಸಂಸ್ಥೆಯ ಕೆಲವು ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ’ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ.
“ನನ್ನನ್ನು ಸೆರೆಹಿಡಿಯಲು ರಷ್ಯಾ ಪ್ರಯತ್ನ’: ತಾವು ಅಡಗಿರುವ ಪ್ರಾಂತದ ಸನಿಹಕ್ಕೆ ರಷ್ಯಾ ಸೇನೆಯು ಆಗಮಿಸಿದ್ದು, ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸೆರೆ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿ ಮಿರ್ ಝೆಲೆನ್ಸ್‌ಕಿ, ತಮ್ಮ ವೀಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ.
ರಷ್ಯಾ ಸೇನೆ ಹಾರಿಸಿದ ಶೆಲ್ ಒಂದು ತಮ್ಮ ಅಡಗುದಾಣದ ಸಮೀಪವೇ ಬಿದ್ದಿದ್ದು ಅದರಿಂದಾಗಿ ರಷ್ಯಾ ಸೇನೆ ನಮ್ಮನ್ನು ಸಮೀಪಿಸುತ್ತಿದೆ ಎಂದೆನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಅಮೆರಿಕದಿಂದ ಸಾಧ್ಯ ವಾಗಿಲ್ಲ’: “ಭಾರತವು ತನ್ನ ಆವಶ್ಯಕತೆಗನುಗುಣವಾಗಿ ರಷ್ಯಾದೊಂದಿಗೆ ಅತ್ಯು ತ್ತಮ ವಾಣಿಜ್ಯ ಸಂಬಂಧವನ್ನು ದಶಕಗಳ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದೆ. ಅಂಥದ್ದೊಂದು ಗಟ್ಟಿಯಾದ ವಾಣಿಜ್ಯ ನಂಟನ್ನು ಈ ಹಿಂದೆ ಸ್ಥಾಪಿಸಲು ಅಮೆರಿಕದಿಂದ ಸಾಧ್ಯವಾಗಿಲ್ಲ” ಎಂದು ಅಮೆರಿಕದ ಗೃಹ ಸಚಿವ ಅಂತೋನಿ ಬ್ಲಿಂಕನ್ ಹೇಳಿದ್ದಾರೆ.
“ಹಲವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿರುವ ರಷ್ಯಾ- ಭಾರತ ಬಾಂಧವ್ಯದಿಂದ ಎರಡೂ ದೇಶಗಳ ಅನಿವಾರ್ಯತೆಗಳು ಪರಸ್ಪರ ಪೂರ್ಣಗೊಂಡಿವೆ. ಇಂಥದ್ದೇ ಒಂದು ಶಾಶ್ವತ ಸಂಬಂಧವನ್ನು ಭಾರತ ದೊಂದಿಗೆ ಸ್ಥಾಪಿಸಲು ಅಮೆರಿಕ ಪ್ರಯ ತ್ನಿಸುತ್ತಿದೆ. ಆ ನಿಟ್ಟಿನಲ್ಲಿ, ಚರ್ಚೆಗಳು ಮುಂದುವರಿದಿವೆ” ಎಂದು ಅವರು ಹೇಳಿದ್ದಾರೆ.
ಝೆಲೆನ್ಸ್‌ಕಿ- ಪುತಿನ್ ಭೇಟಿ? ಇದೇ ವರ್ಷದ ನವೆಂಬರ್‌ನಲ್ಲಿ ಇಂಡೋನೇ ಷ್ಯಾದಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಹಾಗೂ ರಷ್ಯಾ ಅಧ್ಯಕ್ಷ ಪುತಿನ್ ಪರಸ್ಪರ ಭೇಟಿ ಯಾಗುವ ಸಾಧ್ಯತೆಗಳಿವೆ. ಜಿ-20 ಶೃಂಗ ಸಭೆ ಆಯೋಜನೆಯ ಜವಾಬ್ದಾರಿ ಹೊತ್ತಿರುವ ಇಂಡೋನೇಷ್ಯಾ ಸರಕಾರ ಈ ಇಬ್ಬರೂ ನಾಯಕರಿಗೆ ಶೃಂಗಸಭೆಯ ಆಹ್ವಾನ ಕಳುಹಿಸಿತ್ತು. ಇಬ್ಬರೂ ಅದನ್ನು ಒಪ್ಪಿದ್ದಾರೆ. ಹಾಗಾಗಿ ಇಬ್ಬರೂ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು ಅಲ್ಲಿ ಪರಸ್ಪರ ಭೇಟಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ ಎನ್ನಲಾಗಿದೆ.