ಮೈತ್ರಿಗೆ ಸಿದ್ದು ತಣ್ಣೀರು: ಜೆಡಿಎಸ್‌ ಜತೆ ಮೈತ್ರಿಗೆ ನಿರಾಸಕ್ತಿ ತೋರಿದ ಸಿದ್ದರಾಮಯ್ಯ

ಬಿಜೆಪಿಯ ರಾಮಮೂರ್ತಿ ಆಯ್ಕೆ ಬಹುತೇಕ ಖಚಿತ

Team Udayavani, Dec 3, 2019, 6:45 AM IST

ಬೆಂಗಳೂರು: ಹದಿನೈದು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣ ಫ‌ಲಿತಾಂಶದ ಬಳಿಕ ಜೆಡಿಎಸ್‌ ಜತೆಗೆ ಮರುಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರಕಾರ ರಚಿಸಬೇಕು, ಇದಕ್ಕೆ ಪೂರ್ವ ಭಾವಿ ಯಾಗಿ ಒಂದು ಕ್ಷೇತ್ರದ ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸ  ಬೇಕು ಎಂಬ ಮೂಲ ಕಾಂಗ್ರೆಸಿಗರ ಲೆಕ್ಕಾಚಾರ ವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತಲೆಕೆಳಗೆ ಮಾಡಿದ್ದಾರೆ.

ಕೆ.ಸಿ. ರಾಮಮೂರ್ತಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈಗ ಚುನಾವಣೆ ಎದುರಾಗಿದೆ. ಬಿಜೆಪಿಯಿಂದ ರಾಮ ಮೂರ್ತಿಯೇ ಅಭ್ಯರ್ಥಿಯಾಗಿದ್ದು ಅವರನ್ನು ಎದುರಿಸಲು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಮೂಲ ಕಾಂಗ್ರೆಸ್‌ ನಾಯಕರಾದ ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ| ಜಿ. ಪರಮೇಶ್ವರ್‌ ಯತ್ನಿಸಿದ್ದರು. ಆದರೆ ಅವರ ಪ್ರಯತ್ನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ ಎನ್ನಲಾಗುತ್ತಿದೆ.

ಮೈತ್ರಿ ಸಂದೇಶ ರವಾನೆಗೆ ಸಿದ್ಧತೆ
ರಾಜ್ಯಸಭೆ ಚುನಾವಣೆ ಮೂಲಕ ಮೈತ್ರಿ ಸಂದೇಶ ರವಾನೆ ಮಾಡುವುದು ಮೂಲ ಕಾಂಗ್ರೆಸಿಗರ ಉದ್ದೇಶ ವಾಗಿತ್ತು. ರಾಜ್ಯಸಭೆ ಚುನಾವಣೆಗೆ ಒಂದಾದವರು ಉಪ ಚುನಾವಣೆ ಮುಗಿದ ಬಳಿಕವೂ ಒಂದಾಗುತ್ತಾರೆ ಎಂಬ ಸಂದೇಶ ಮತ ದಾರರಿಗೆ ರವಾನೆಯಾದರೆ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗುತ್ತಿತ್ತು ಎಂಬ ಆಲೋಚನೆಯನ್ನು ಮೂಲ ಕಾಂಗ್ರೆಸಿಗರು ಹಾಕಿಕೊಂಡಿದ್ದರು ಎನ್ನಲಾಗಿದೆ.

ಡಿಕೆಶಿ ಯತ್ನ
ಹೇಗಾದರೂ ಮಾಡಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದೆ. ಒಂದು ವೇಳೆ, ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಸಲಾಗದಿದ್ದರೆ, ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಬಗ್ಗೆಯೂ ಚರ್ಚೆ ನಡೆಸಿ, ಸೋಮವಾರ ಮಧ್ಯಾಹ್ನದವರೆಗೂ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ವೇಣುಗೋಪಾಲ್‌ ಸೂಚನೆ
ರಾಜ್ಯಸಭೆಗೆ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕೂಡ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ನೀಡಬಾರದು. ಕೊನೆಗೆ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷದ ಅಭ್ಯರ್ಥಿಯ ನಾಮಪತ್ರ ವಾಪಸ್‌ ಪಡೆದರೂ ಚಿಂತೆಯಿಲ್ಲ. ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಜೆಡಿಎಸ್‌ ಅಭ್ಯರ್ಥಿ: ಅಭ್ಯರ್ಥಿ ಕಣಕ್ಕಿಳಿಸುವ ಸೂಚನೆ ಬಂದ ಮೇಲೆ ಜೆಡಿಎಸ್‌ನವರು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ಮಾಹಿತಿಯನ್ನು ಹೈಕಮಾಂಡ್‌ಗೆ ರವಾನೆ ಮಾಡಲಾಯಿತು ಎನ್ನಲಾಗಿದೆ. ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸಿದರೆ, ಅವರ ಅಭ್ಯರ್ಥಿಗೆ ಬೆಂಬಲ ಕೊಡಬಹುದು ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದರು ಎಂದು ಹೇಳಲಾಗುತ್ತಿದೆ.

ಅವಿರೋಧ ಆಯ್ಕೆ ಸಾಧ್ಯತೆ
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರವೇ ಕೊನೆಯ ದಿನವಾಗಿತ್ತು. ಸದ್ಯ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಹಾಗೂ ಇಬ್ಬರು ಪಕ್ಷೇತರರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿದಿಲ್ಲ. ಪಕ್ಷೇತರರಿಬ್ಬರಿಗೂ ಸೂಚಕರಿಲ್ಲದ ಕಾರಣ ಮಂಗಳವಾರ ನಾಮಪತ್ರ ಪರಿಶೀಲನೆ ವೇಳೆ ಇವು ತಿರಸ್ಕೃತವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ರಾಮಮೂರ್ತಿ ಅವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೆಲುವಿನ ಲೆಕ್ಕಾಚಾರ
ಈಗಿರುವ ವಿಧಾನಭೆಯ ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿ ಪಕ್ಷೇತರ ಶಾಸಕ ಎಚ್‌. ನಾಗೇಶ್‌ ಸೇರಿ 106 ಸಂಖ್ಯಾ ಬಲ ಹೊಂದಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸೇರಿ 100 ಸದಸ್ಯರನ್ನು ಹೊಂದಿದೆ. ಬಿಎಸ್‌ಪಿಯ ಎನ್‌. ಮಹೇಶ್‌ ತಟಸ್ಥರಾಗಿದ್ದಾರೆ. ಅಲ್ಲದೇ ಈಗ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ಡಿ.9ಕ್ಕೆ ಹೊರಬೀಳಲಿದ್ದು ಇದರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ 10ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಒಟ್ಟಾರೆ ಬಲ 110 ಆಗುತ್ತಿತ್ತು. ಅಂಥ ಸನ್ನಿವೇಶದಲ್ಲಿ ಮೈತ್ರಿ ಕೂಟದಿಂದ ಅಭ್ಯರ್ಥಿ ಹಾಕಿದ್ದರೆ ಗೆಲ್ಲಿಸಿಕೊಂಡು ಬರಬಹುದಾಗಿತ್ತು ಎಂಬುದು ಮೂಲ ಕಾಂಗ್ರೆಸಿಗರ ಲೆಕ್ಕಾಚಾರವಾಗಿತ್ತು.

ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ
ರಾಜ್ಯಸಭೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಮೂಲ ಕಾಂಗ್ರೆಸ್‌ ನಾಯಕರು ಕಸರತ್ತು ನಡೆಸಿದ ಬಳಿಕ ಹೈಕಮಾಂಡ್‌ ಸೂಚನೆ ನೀಡಿದ್ದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ ಎನ್ನಲಾಗುತ್ತಿದೆ. ರವಿವಾರ ಮತ್ತು ಸೋಮವಾರ ಸಿದ್ದರಾಮಯ್ಯ ಬೆಂಗಳೂರಿನಲ್ಲಿಯೇ ಇದ್ದರೂ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚುನಾವಣ ಪ್ರಚಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.

ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜೆಡಿಎಸ್‌ ಜತೆಗೆ ಮತ್ತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ಸಂದೇಶ ರವಾನೆಯಾದರೆ ಕೆಲವು ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪರಿ ಣಾಮ ಬೀರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಂದೇಶ ರವಾನೆ ಯಾಗುವುದು ಬೇಡ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ರಾಜ್ಯಸಭೆಗೆ ಒಮ್ಮತದ ಅಭ್ಯರ್ಥಿ ಕಣ ಕ್ಕಿಳಿಸಲು ನಿರಾ ಕರಿಸಿ ದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಅಗತ್ಯ ಸಂಖ್ಯಾಬಲವಿಲ್ಲದೆ ಸ್ಪರ್ಧಿಸಿ ಸೋತರೆ ಬಿಜೆಪಿ ಅದನ್ನೇ ದೊಡ್ಡದಾಗಿ ಬಿಂಬಿಸುವ ಸಾಧ್ಯತೆ ಇದೆ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಚುನಾವಣೆ: ಭಾರೀ ಅಕ್ರಮ
ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಅಂತಿಮ ಘಟ್ಟದಲ್ಲಿದ್ದು, ಇದೇ ವೇಳೆ ಚುನಾವಣ ಅಕ್ರಮ ಕೂಡ ಸಾಕಷ್ಟು ಸದ್ದು ಮಾಡಿದೆ. ಈ 15 ಕ್ಷೇತ್ರಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಡಿ.1ರ ವರೆಗೆ 4.16 ಕೋಟಿ ನಗದು, 4.58 ಕೋಟಿ ರೂ. ಮೊತ್ತದ ಅಕ್ರಮ ಮದ್ಯ, 4 ಸಾವಿರ ರೂ. ಮೌಲ್ಯದ ಮಾದಕವಸ್ತು ಹಾಗೂ 1.95 ಕೋಟಿ ರೂ.ಗಳ ಉಡುಗೊರೆ ವಸ್ತುಗಳು ಸಹಿತ ಒಟ್ಟು 10.70 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಜತೆಗೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 197 ಎಫ್ಐಆರ್‌ ದಾಖಲಾಗಿವೆ.

ಕಾಂಗ್ರೆಸ್‌ಗೆ 4 ಸ್ಥಾನ?
15 ಕ್ಷೇತ್ರಗಳ ಉಪಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಎಐಸಿಸಿ ವೀಕ್ಷಕರು ಹೈಕಮಾಂಡ್‌ಗೆ ನೀಡಿರುವ ವರದಿ ಅನುಸಾರ ಕಾಂಗ್ರೆಸ್‌ 4ರಲ್ಲಿ ಗೆಲ್ಲುತ್ತದೆ, ಇನ್ನು 4ರಲ್ಲಿ ಶೇ. 50-50ರ ಅವಕಾಶವಿದೆ. ಜೆಡಿಎಸ್‌ 2ರಲ್ಲಿ ಗೆಲ್ಲಬಹುದು ಎಂದು ಈ ವರದಿಯೇ ಹೇಳಿದೆ. ಒಂದು ವೇಳೆ ಕಾಂಗ್ರೆಸ್‌ಗೆ 4 ಅಥವಾ ಸಮಬಲ ಇರುವುದರಲ್ಲಿ ಇನ್ನೂ 2 ಸ್ಥಾನ ಬಂದರೂ ಒಟ್ಟಾರೆಯಾಗಿ 6 ಕ್ಷೇತ್ರಗಳಷ್ಟೇ ಸಿಗುತ್ತವೆ. ಜೆಡಿಎಸ್‌ ಅನ್ನು ಜತೆಗೆ ಸೇರಿಸಿಕೊಂಡರೂ 8 ಕ್ಷೇತ್ರಗಳಾಗಬಹುದು. ಉಳಿದ 7 ಸ್ಥಾನ ಬಿಜೆಪಿಗೆ ಹೋದರೆ ಬಿಎಸ್‌ವೈ ಸರಕಾರ ಗಟ್ಟಿ ಎಂದೇ ವಿಶ್ಲೇಷಿಸಲಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ