“ಸಿದ್ದುಗೆ ಮತ್ತೆ ಸಿಎಂ ಆಗುವ ಹುಚ್ಚು ಆಸೆ’ : ನಳಿನ್ ಕುಮಾರ್ ಕಟೀಲು
Team Udayavani, May 29, 2022, 12:45 AM IST
ಮಂಗಳೂರು: ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಗಾದಿಗೇರುವ ಹುಚ್ಚು ಆಸೆ ಆರಂಭವಾಗಿದೆ. ಅದಕ್ಕಾಗಿ ಬೇಕಾಬಿಟ್ಟಿ ಮಾತನಾಡಿ ರಾಜ್ಯದಲ್ಲಿ ವೈಷಮ್ಯ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ದೇಶ ಕಟ್ಟುವ ಕೆಲಸ ಮಾಡುತ್ತಿರುವ ಆರೆಸ್ಸೆಸ್ ಬಗ್ಗೆ ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ಒಡೆಯುವ, ಜಾತಿ ಸಂಘರ್ಷ, ಗಲಭೆ ಸೃಷ್ಟಿಸುವ ಮನಸ್ಸುಗಳೊಂದಿಗೆ ಕೈಜೋಡಿಸುತ್ತಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್ ಅವನತಿಯ ಅಂಚಿನಲ್ಲಿದೆ. ಒಂದೇ ವರ್ಷದಲ್ಲಿ ಕಾಂಗ್ರೆಸ್‌ನ ಪ್ರಮುಖ 66 ಮುಖಂಡರು ಪಕ್ಷ ತೊರೆದಿದ್ದಾರೆ. ಕಪಿಲ್ ಸಿಬಲ್‌ರಂಥವರೂ ಕಾಂಗ್ರೆಸ್ ಬಿಟ್ಟಿದ್ದಾರೆ. ರಾಜ್ಯದಲ್ಲೂ ಇಂಥದ್ದು ನಡೆಯಲಿದೆ ಎಂದರು.