ಆಟ ಮುಗಿಯಿತೇ?

ಇಂದು ಬೆಳಗ್ಗೆ ಮಹತ್ವದ ಸಂಪುಟ ಸಭೆ; ಇನ್ನೆರಡು ವಿಕೆಟ್‌ ಪತನ

Team Udayavani, Jul 11, 2019, 6:00 AM IST

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದ ಫೈನಲ್‌ ಕೌಂಟ್‌ ಡೌನ್‌ ಶುರು…

ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಪಾಲಿಗೆ ಗುರುವಾರವೇ ಫೈನಲ್‌ ದಿನ. ಹೆಚ್ಚು ಕಡಿಮೆ ಬುಧವಾರವೇ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಉಳಿಸುವ ಎಲ್ಲಾ ಯತ್ನಗಳೂ ವಿಫ‌ಲವಾಗಿವೆ. ಅಷ್ಟೇ ಅಲ್ಲ, ಭಾರೀ ನಾಟಕೀಯ ಬೆಳವಣಿಗೆಯಲ್ಲಿ ಇನ್ನೂ ಎರಡು ವಿಕೆಟ್‌ ಬಿದ್ದಿವೆ. ಹೀಗಾಗಿ ಸರ್ಕಾರ ಇನ್ನೂ ಅಲ್ಪಮತಕ್ಕೆ ಜಾರಿರುವುದರಿಂದ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಅಥವಾ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಅಥವಾ ಬಹುಮತ ಸಾಬೀತಿಗೆ ಅವಕಾಶ ಕೋರುವ ಸಾಧ್ಯತೆ ಇದೆ.


ಇದರ ಮಧ್ಯೆಯೇ, ಪ್ರಸಕ್ತ ಘಟನಾವಳಿಗಳ ಬಗ್ಗೆ ಕೈನಾಯಕರು ಚರ್ಚಿಸಿದ್ದು, ದೋಸ್ತಿ ಸರ್ಕಾರ ಮುಂದುವರಿಸಬೇಕಾ? ಅಥವಾ ಮತ್ತಷ್ಟು ಶಾಸಕರು ಆಪರೇಷನ್‌ ಕಮಲಕ್ಕೆ ತುತ್ತಾಗುವುದನ್ನು ತಪ್ಪಿಸಿ ಪಕ್ಷ ಉಳಿಸಿಕೊಳ್ಳಬೇಕಾ ಎಂಬ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಬಿಜೆಪಿಯೇ ಬೇಕಾದರೆ ಸರ್ಕಾರ ರಚಿಸಿಕೊಳ್ಳಲಿ, ನಾವು ಪ್ರತಿಪಕ್ಷದಲ್ಲಿ ಕೂರೋಣ ಎಂದು ಬಹುತೇಕ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜೀನಾಮೆಗೆ ಸಿಎಂ ಸಿದ್ಧತೆ?: ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅವರು, ವಿಧಾನಸಭೆ ವಿಸರ್ಜನೆ ಅಥವಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಇಲ್ಲದಿದ್ದರೆ,ಶುಕ್ರವಾರ ಆರಂಭವಾಗಲಿರುವ ಅಧಿವೇಶನದಲ್ಲಿ ವಿಶ್ವಾಸಮತಕ್ಕೆ ರಾಜ್ಯಪಾಲ ರಲ್ಲಿ ಅವಕಾಶ ಕೋರಿ, ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ರಹಸ್ಯ ಸಭೆ: ಕಾಂಗ್ರೆಸ್‌ ಶಾಸಕರಾದ ಸುಧಾಕರ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ರಾಜೀನಾಮೆ ನಂತರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿದ್ದ ಸಿಎಂ ಕುಮಾರಸ್ವಾಮಿ, ಜೆಪಿ ನಗರದ ನಿವಾಸಕ್ಕೆ ತೆರಳಿ, ಅಲ್ಲಿಂದ ಭದ್ರತಾ ಸಿಬ್ಬಂದಿ ಮತ್ತು ಬೆಂಗಾವಲು ಪಡೆ ಬಿಟ್ಟು ಅಜ್ಞಾತಸ್ಥಳಕ್ಕೆ ತೆರಳಿದ್ದರು. ನಂತರ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ತೆರಳಿ ಚರ್ಚಿಸಿದರು. ಅಲ್ಲಿಂದಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಸೇರಿ ಕೆಲವು ನಾಯ ಕಯೊಂದಿಗೆದೂರವಾಣಿ ಮೂಲಕ ಮಾತನಾಡಿದರು. ಪರಿಸ್ಥಿತಿ ಕೈ ಮೀರಿರುವುದರಿಂದ ಮುಂದೇನು ಮಾಡಬಹುದು ಎಂಬ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

ಕುಮಾರಸ್ವಾಮಿ ಅಸಮಾಧಾನ: ಮಾಜಿ ಪ್ರಧಾನಿ ದೇವೇಗೌಡರ ಭೇಟಿ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದ ಕಾಂಗ್ರೆಸ್‌ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ. ರಾಜೀನಾಮೆ ನೀಡುತ್ತಿರುವ ಶಾಸಕರು ಹಾಗೂ ಅವರ ಹೇಳಿಕೆ ಗಮನಿಸಿದರೆ ಇದು ಪೂರ್ವ ನಿಯೋಜಿತ ಎಂಬುದು ಗೊತ್ತಾಗುತ್ತದೆ. ಅಮೆರಿಕ ಪ್ರವಾಸದಿಂದ ವಾಪಸ್‌ ಬಂದಾಗಲೇ ನಾನು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೆ. ಆದರೆ, ಕಾಂಗ್ರೆಸ್‌ ನಾಯಕರೇ ಬೇಡ ನಾವಿದ್ದೇವೆ ಎಂದು ಹೇಳಿ ರಾಜೀನಾಮೆ ನೀಡದಂತೆ ತಡೆದಿದ್ದರು ಆದರೆ, ಈಗ ಕೈ ಮೀರಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ದೇವೇಗೌಡರ ಜತೆಗಿನ ಭೇಟಿ ನಂತರವೇ ರಾಜ್ಯ ಸಚಿವ ಸಂಪುಟ ಸಭೆ ಕರೆಯುವ ತೀರ್ಮಾನ ಕೈ ಗೊಂಡು ಆ ಬಗ್ಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಮುಂಬೈನಲ್ಲಿ ಡಿಕೆಶಿ ಡ್ರಾಮಾ
ಅತ್ತ, ರಾಜೀನಾಮೆ ಸಲ್ಲಿಸಿ ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆ ಮಾಡಲು ಹೋಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಬರಿಗೈಯಲ್ಲಿ ವಾಪಸ್‌ ಆಗಿದ್ದಾರೆ. ಯಾವ ಶಾಸಕರನ್ನೂ ಮಾತನಾಡಿಸಲು ಅವಕಾಶ ನೀಡದ ಕಾರಣ, ಆರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ಬಳಿಕ ಪೊಲೀಸ್‌ ವಶಕ್ಕೆ ಒಳಗಾಗಿ ಕಡೆಗೆ ವಾಪಸ್‌ ಆದರು. ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ ಅವರ ಜತೆಗೂಡಿ ಬುಧವಾರ ಬೆಳಗ್ಗೆ 6 ಗಂಟೆಗೇ ಮುಂಬೈನ ರೆನಿಸನ್ಸ್‌ ಹೊಟೇಲ್‌ ತಲುಪಿದ್ದರು.

ವಿಶೇಷವೆಂದರೆ, ಹೋಗುವಾಗ ಈ ಹೊಟೇಲ್‌ನಲ್ಲಿ ಕೊಠಡಿಯನ್ನೂ ಕಾಯ್ದಿರಿಸಿದ್ದರು. ಆದರೆ, ಡಿಕೆಶಿ ಬರುವ ವಿಚಾರ ತಿಳಿದ ಅತೃಪ್ತರು, ಮುಂಬೈ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಭದ್ರತೆ ಒದಗಿಸುವಂತೆ ಕೋರಿದರು. ಹೀಗಾಗಿ ಡಿಕೆಶಿ ಬರುತ್ತಿದ್ದಂತೆ ಹೊಟೇಲ್‌ ಸುತ್ತುವರಿದ ಪೊಲೀಸರು, ಅವರನ್ನು ಒಳಗೆ ಹೋಗಲು ಬಿಡಲಿಲ್ಲ. ಇವರಿಗೆ ಮುಂಬೈನ ಸ್ಥಳೀಯ ಕಾಂಗ್ರೆಸ್‌ ನಾಯಕರೂ ಸಾಥ್‌ ನೀಡಿದರು.

ಮಳೆ ಬಂದರೂ, ಧೃತಿಗೆಡದ ಡಿಕೆಶಿ ಮತ್ತು ಜಿ.ಟಿ.ದೇವೇಗೌಡ ಮತ್ತಿತರರು ಅಲ್ಲೇ ಕುಳಿತಿದ್ದರು. ಅಲ್ಲೇ ತಿಂಡಿ-ಕಾಫಿ ಸೇವಿಸಿದರು.ಮಧ್ಯಾಹ್ನದ ನಂತರ ಪೊಲೀಸರು ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ವಾಪಸ್‌ ಕಳುಹಿಸಿದರು.

ಇನ್ನೂ ಇಬ್ಬರು ರಾಜೀನಾಮೆ?
ಕಾಂಗ್ರೆಸ್‌ ಶಾಸಕರ ರಾಜೀನಾಮೆ ಪರ್ವ ಇನ್ನೂ ಮುಂದುವರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಬುಧವಾರವೇ ರಾಜೀನಾಮೆ ಸಲ್ಲಿಸಲು ಸ್ಪೀಕರ್‌ ಬಳಿ ಸಮಯ ಕೇಳಿದ್ದರು ಎನ್ನಲಾಗಿದೆ. ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿ, ಬೈಲಹೊಂಗಲ ಶಾಸಕ ಮಹಾಂತೇಶ್‌ ಕೌಜಲಗಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಚಿಕ್ಕೋಡಿ ಶಾಸಕ ಗಣೇಶ್‌ ಹುಕ್ಕೇರಿ ಹೆಸರುಗಳೂ ಕೇಳಿ ಬರುತ್ತಿವೆ.

ಬುಧವಾರ ಮಧ್ಯಾಹ್ನವೇ ಗಣೇಶ್‌ ಹುಕ್ಕೇರಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಕಚೇರಿಗೆ ಆಗಮಿಸಿದ್ದರು. ಆದರೆ, ಅವರು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಆಗಿರುವುದರಿಂದ ಅಧಿವೇಶನ ನಡೆಸುವ ಕುರಿತು ಚರ್ಚಿಸಲು ಆಗಮಿಸಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅತೃಪ್ತರಿಂದ ಸುಪ್ರೀಂ ಮೊರೆ
ನವದೆಹಲಿ: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ಉದ್ದೇಶಪೂರ್ವಕವಾಗಿಯೇ ನಮ್ಮ ರಾಜೀನಾಮೆ ಸ್ಪೀಕರಿಸುತ್ತಿಲ್ಲ ಎಂದು ಆರೋಪಿಸಿರುವ ಮುಂಬೈನಲ್ಲಿರುವ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್‌ ಬಾಗಿಲು ಬಡಿದಿದ್ದಾರೆ.

ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದ್ದು, ತ್ವರಿತ ವಿಚಾರಣೆಗೆಂದು ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್‌ ತಳ್ಳಿಹಾಕಿದೆ.

ಆದರೂ, ಗುರುವಾರ ವಿಚಾರಣೆಗೆ ಅಂಗೀಕರಿಸುವ ಬಗ್ಗೆ ಪೀಠ ಅಂದೇ ನಿರ್ಧರಿಸಲಿದೆ.

ಕೇಂದ್ರಕ್ಕೆ ರಾಜ್ಯಪಾಲರ ವರದಿ?
ರಾಜ್ಯದಲ್ಲಿ ಪ್ರಸಕ್ತ ರಾಜಕೀಯ ಘಟನಾವಳಿಗಳ ಬಗ್ಗೆ ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದು, ಕೆಲದಿನಗಳ ಕಾಲ ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರಲ್ಲಿ ಸರ್ಕಾರ ರಚನೆಗೆ ಹೆಚ್ಚು ಆಸಕ್ತಿ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೇಂದ್ರದ ನಾಯಕರಿಗೂ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರಿಗೂ ಬಿಜೆಪಿ ಸರ್ಕಾರ ಬರಲಿದೆ ಎಂದು ಭರವಸೆ ನೀಡಿ ರಾಜೀನಾಮೆ ಕೊಡಿಸಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ಅವರ ಆಕ್ರೋಶಕ್ಕೆ ಗುರಿಯಾಗಬಹುದು ಎಂದು ಕೆಲವು ಬಿಜೆಪಿ ನಾಯಕರು ಅಭಿಪ್ರಾಯಪಡುತ್ತಾರೆ.

ರಾಜ್ಯಪಾಲರ ಮುಂದಿನ ನಡೆ ಏನು?
1. ರಾಜ್ಯ ರಾಜಕೀಯದಲ್ಲಿನ ಅಸ್ಥಿರತೆಗೆ ಪೂರ್ಣ ವಿರಾಮ ಹಾಕಲು ರಾಜ್ಯ ಪಾಲರ ಸಾಂವಿಧಾನಿಕ ನಡೆ ಅತ್ಯಂತ ನಿರ್ಣಾಯಕ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಹಾಗಾದರೆ, ರಾಜ್ಯಪಾಲರು ಏನು ಮಾಡಬಹುದು?

2. ತಕ್ಷಣ ಅಧಿವೇಶನ ಕರೆಯುವಂತೆ ಸ್ಪೀಕರ್‌ಗೆ ಹೇಳಿ, ಸರ್ಕಾರಕ್ಕೆ ಬಹುಮತ ಸಾಬೀತು ಮಾಡುವಂತೆ ಹೇಳಬಹುದು.

3.ಸರ್ಕಾರದ ಬಳಿ ಸಂಖ್ಯಾಬಲ ಇಲ್ಲವೆಂದಾದಲ್ಲಿ ಬಹುಮತ ಸಾಬೀತು ಮಾಡಿ ಎಂದು ಹೇಳುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಉಂಟು.

4.ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದೆ ಎಂಬ ಕಾರಣ ಕೊಟ್ಟು, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು.

5. ತಮ್ಮ ಬಳಿ ಬಹುಮತವಿದೆ ಎಂದು ಬಿಜೆಪಿ ಮನವಿ ಮಾಡಿದರೆ,ಸರ್ಕಾರ ರಚನೆಗೆ ಅವಕಾಶ ಕೊಡಬಹುದು.

6. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟರೂ,ಕೊಡದಿದ್ದರೂ ಯಾರೂ ಪ್ರಶ್ನಿಸುವಂತಿಲ್ಲ

ಮುಂಬೈ ಹಾಗೂ ವಿಧಾನಸೌಧದಲ್ಲಿ ನಡೆದ ಘಟನೆಗಳು ಭಾರತೀಯ ಜನತಾ ಪಕ್ಷವು ಪ್ರಜಾಪ್ತಭುತ್ವದ ಎಲ್ಲ ಎಲ್ಲೆಗಳನ್ನು ಮೀರಿ ವರ್ತಿಸುತ್ತಿರುವುದು ಹಾಗೂ ನಾಗರಿಕ ಸಂಹಿತೆಯನ್ನು ಮೀರಿರುವುದು ಸ್ಪಷ್ಟ.
– ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ವಿಧಾನಸೌಧದಲ್ಲಿ ನಡೆದ ಗೂಂಡಾಗಿರಿಗೆ ಬಿಜೆಪಿ ಹೊಣೆ. ನಮ್ಮ ಶಾಸಕ ಡಾ.ಕೆ.ಸುಧಾಕರ್‌ಗೂ ಬಿಜೆಪಿಯವರಿಗೂ ಏನು ಸಂಬಂಧ? ಬಿಜೆಪಿಯವರು ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ಪತನಕ್ಕೆ ಸಂಚುರೂಪಿಸಿರುವುದು ಬಯಲಾಗಿದೆ. ಅವರಿಗೆ ನಾಚಿಕೆ ಆಗಬೇಕು.
– ಸಿದ್ದರಾಮಯ್ಯ, ಮಾಜಿ ಸಿಎಂ

ಬಿಜೆಪಿಯ ಲಜ್ಜೆಗೇಡಿನ ರಾಜಕಾರಣಕ್ಕೆ ವಿಧಾನಸೌಧದಲ್ಲಿ ನಡೆದ ಘಟನಾವಳಿಗಳೇ ಸಾಕ್ಷಿ. ಡಾ.ಸುಧಾಕರ್‌ ಅವರ ಜತೆ ನಾವು ಸಮಾಧಾನದಿಂದಲೇ ಚರ್ಚಿಸಿದ್ದೇವೆ. ನಮ್ಮ ಸಹಪಾಠಿ ಜತೆ ನಾವು ಮಾತನಾಡುವುದು ತಪ್ಪಾ?
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ.ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲು ಸ್ಪೀಕರ್‌ ಕಚೇರಿಗೆ ಬಂದ ಡಾ.ಸುಧಾಕರ್‌ ಅವರನ್ನು ಅಪಮಾನ ಮಾಡುವ ರೀತಿಯಲ್ಲಿ ನಡೆಸಿಕೊಂಡಿದೆ. ಅವರಿಗೆ ರಕ್ಷಣೆ ನೀಡಲು ಸ್ಪೀಕರ್‌ ಅವರು ಕ್ರಮ ಕೈಗೊಳ್ಳಬೇಕಿತ್ತು.
– ಬಿ.ಎಸ್‌.ಯಡಿಯೂರಪ್ಪ , ಬಿಜೆಪಿ ರಾಜಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ