ಅನುಮೋದಿತ ನೌಕರರ ಬಾಕಿ ವೇತನ ಶೀಘ್ರ ಬಿಡುಗಡೆ: ಸಿಎಂ ಬೊಮ್ಮಾಯಿ
Team Udayavani, Sep 22, 2022, 10:00 PM IST
ವಿಧಾನಸಭೆ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಅನುಮೋದಿತ ನೌಕರರ ಬಾಕಿ ಇರುವ ವೇತನ ಹಾಗೂ ಪಿಂಚಣಿ ಪಾವತಿಗೆ ಬೇಕಾದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಹಿಂದಿನ ಅವಧಿಯಲ್ಲಿ ಅವಶ್ಯಕತೆಗಿಂತ ಹೆಚ್ಚು ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿಯಮಗಳ ಪ್ರಕಾರ ಅನುಮೋದಿತ ಹುದ್ದೆಗಳಿಗೆ ಸರ್ಕಾರ ಸಂಬಳ ಮತ್ತು ಪಿಂಚಣಿ ನೀಡುತ್ತದೆ. ಕರ್ನಾಟಕ ವಿವಿ ಖಾಸಗಿಯಾಗಿ ನೇಮಕ ಮಾಡಿಕೊಂಡ ಹುದ್ದೆಗಳಿಗೆ ಅವರೇ ಸಂಬಳ ನೀಡಬೇಕಾಗುತ್ತದೆ. ಗುತ್ತಿಗೆ ನೌಕರರ ನೇಮಕ ಹೆಚ್ಚಾಗಿದ್ದರಿಂದ ಆರ್ಥಿಕ ಸಂಕಷ್ಟ ಬಂದಿದೆ.
ಅನುಮೋದಿತ ನೌಕರರ ಸಂಬಳ-ಪಿಂಚಣಿ ಬಾಕಿ ಇರುವ ಅಷ್ಟೂ ಹಣವನ್ನು ನೀಡಲಾಗುವುದು. ಉಳಿದಂತೆ ಹೆಚ್ಚುವರಿ ಗುತ್ತಿಗೆ ನೌಕರರನ್ನು ಕಡಿಮೆ ಮಾಡಿಕೊಂಡು ಸ್ವತಃ ತಾವೇ ಆರ್ಥಿಕ ಶಿಸ್ತನ್ನು ತಂದುಕೊಳ್ಳಬೇಕು. ಇದು ಕರ್ನಾಟಕ ವಿವಿ ಅಲ್ಲ, ರಾಜ್ಯ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ ಎಂದರು.