ವಿದ್ಯಾರ್ಥಿನಿ ಶಂಕಾಸ್ಪದ ಸಾವು: ಆರೋಪಿ ಸಿಐಡಿ ವಶಕ್ಕೆ

Team Udayavani, Apr 25, 2019, 3:44 AM IST

ರಾಯಚೂರು: ನಗರದ ನವೋದಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣದ ಪ್ರಮುಖ ಆರೋಪಿ ಸುದರ್ಶನ ಯಾದವನನ್ನು ಸಿಐಡಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ಕಳೆದ ಮೂರು ದಿನಗಳಿಂದ ತನಿಖೆ ಕೈಗೊಂಡಿರುವ ಸಿಐಡಿ ಪೊಲೀಸರು, ಮಂಗಳವಾರ ಸಂಜೆ ಯುವತಿ ಮನೆಗೆ ತೆರಳಿ ಹೆತ್ತವರಿಂದ ಮಾಹಿತಿ ಪಡೆದಿದ್ದರು. ಬಳಿಕ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ನ್ಯಾಯಾಧೀಶರ ಪರವಾನಗಿ ಮೇರೆಗೆ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ, ಯುವತಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದೆ.

ತನಿಖೆಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುವ ಪ್ರಮೇಯವೇ ಇಲ್ಲ. ತನಿಖೆಯನ್ನು ಸಿಐಡಿಗೆ ವಹಿಸಿರುವುದರಿಂದ ಸಿಬಿಐ ವಿಚಾರ ಈಗ ಬೇಡ. ನ್ಯಾಯ ಸಿಗದಿದ್ದಲ್ಲಿ ಮುಂದೆ ನೋಡೋಣ ಎಂದರು.

ಇದೇ ವೇಳೆ, ಯುವತಿ ಸಾವು ಖಂಡಿಸಿ ಬುಧವಾರ ಬೆಳಗ್ಗೆ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ನಗರದ ಡಾ| ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಅಲ್ಲದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದವು. ಈ ಮಧ್ಯೆ, ಏ.25ರಂದು ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಯುವತಿ ಹೆತ್ತವರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇಬ್ಬರು ಪೊಲೀಸರ ಅಮಾನತು: ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂ ಧಿಸಿದಂತೆ ಇಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಆದೇಶ ನೀಡಿದ್ದಾರೆ. ಮಹಿಳಾ ಠಾಣೆ ಪಿಎಸ್‌ಐ ಮರಿಯಮ್ಮ, ಸದರ್‌ ಬಜಾರ್‌ ಠಾಣೆ ಪೇದೆ ಆಂಜನೇಯ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಯುವತಿ ಕಾಣೆಯಾದಾಗ ದೂರು ನೀಡಲು ಬಂದಾಗ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ತಕ್ಷಣಕ್ಕೆ ದೂರು ದಾಖಲಿಸಿದ್ದರೆ ಮಗಳು ಜೀವಂತವಾಗಿ ಸಿಗುತ್ತಿದ್ದಳು ಎಂದು ಹೆತ್ತವರು ದೂರಿದ್ದಾರೆ. ಅಲ್ಲದೆ, ಯುವತಿ ಮೊಬೈಲ್‌, ಬೈಕ್‌ ಕೀಯನ್ನು ಪೇದೆ ಆಂಜನೇಯ ತಂದುಕೊಟ್ಟಿದ್ದ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ