ಟೆಸ್ಟ್ ಆಲ್‌ರೌಂಡರ್ ರ್‍ಯಾಂಕಿಂಗ್ : ರವೀಂದ್ರ ಜಡೇಜ ನಂ.2
Team Udayavani, Jun 10, 2021, 7:10 AM IST
ದುಬಾೖ: ರವೀಂದ್ರ ಜಡೇಜ ಟೆಸ್ಟ್ ಆಲ್‌ರೌಂಡರ್ ರ್‍ಯಾಂಕಿಂಗ್ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಬುಧವಾರ ಪರಿಷ್ಕರಿಸಲಾದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜಡೇಜ ಇಂಗ್ಲೆಂಡಿನ ಸವ್ಯಸಾಚಿ ಬೆನ್ ಸ್ಟೋಕ್ಸ್ ಅವರನ್ನು ಮೀರಿ ನಿಂತರು.
ಆದರೆ ರವೀಂದ್ರ ಜಡೇಜ-ಬೆನ್ ಸ್ಟೋಕ್ಸ್ ನಡುವೆ ವ್ಯತ್ಯಾಸವಿರುವುದು ಒಂದು ಅಂಕ ಮಾತ್ರ. ಜಡೇಜ 386 ಮತ್ತು ಸ್ಟೋಕ್ಸ್ 385 ಅಂಕ ಹೊಂದಿದ್ದಾರೆ. ವೆಸ್ಟ್ ಇಂಡೀಸಿನ ಜಾಸನ್ ಹೋಲ್ಡರ್ 423 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಸದ್ಯ ಜಡೇಜ ಮತ್ತು ಸ್ಟೋಕ್ಸ್ ಟೆಸ್ಟ್ ಆಡದೆ ಬಹಳ ಸಮಯವಾಗಿದೆ. ಇಬ್ಬರೂ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು.
ಆಸ್ಟ್ರೇಲಿಯ ಪ್ರವಾಸದ ವೇಳೆ ಗಾಯಾಳಾದ ಜಡೇಜ, ಇಂಗ್ಲೆಂಡ್ ಎದುರಿನ ತವರಿನ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಸ್ಟೋಕ್ಸ್ ಇನ್ನೂ ತಂಡಕ್ಕೆ ಮರಳಿಲ್ಲ.
ಭಾರತದ ಮತ್ತೋರ್ವ ಆಟಗಾರ ಆರ್. ಅಶ್ವಿನ್ ಆಲ್‌ರೌಂಡರ್ ಯಾದಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ರೋಹಿತ್ 7ನೇ ಸ್ಥಾನಕ್ಕೆ
ಬ್ಯಾಟಿಂಗ್ ರ್‍ಯಾಂಕಿಂಗ್‌ನ ಟಾಪ್-10 ಯಾದಿಯಲ್ಲಿ ಭಾರತದ ಮೂವರಿದ್ದಾರೆ. ರೋಹಿತ್ ಶರ್ಮ ಏಳಕ್ಕೆ ಏರಿ ಒಂದು ಸ್ಥಾನದ ಪ್ರಗತಿ ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ 5ನೇ, ರಿಷಭ್ ಪಂತ್ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೇನ್ ವಿಲಿಯಮ್ಸನ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಬೌಲಿಂಗ್ ಯಾದಿಯ ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಕ್ರಿಕೆಟಿಗನೆಂದರೆ ಆರ್. ಅಶ್ವಿನ್. ಅವರು ದ್ವಿತೀಯ ಸ್ಥಾನಿಯಾಗಿದ್ದಾರೆ. ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.