ಅಧಿಕಾರ ಅನುಭವಿಸಿದ್ದು ಕಡಿಮೆ, ನೋವುಂಡದ್ದೇ ಜಾಸ್ತಿ

ಯಾರಿಗೂ ಅನ್ಯಾಯ ಮಾಡಿಲ್ಲ ಆದರೂ ನಿಂದನೆ ತಪ್ಪಲಿಲ್ಲ ಉದಯವಾಣಿ ಸಂವಾದದಲ್ಲಿ ದೇವೇಗೌಡರ ಮನದಾಳದ ಮಾತು

Team Udayavani, Nov 21, 2019, 6:45 AM IST

ಬೆಂಗಳೂರು: “ಐವತ್ತೇಳು ವರ್ಷಗಳ ರಾಜ ಕೀಯ ಜೀವನದಲ್ಲಿ ನಾನು ಅಧಿಕಾರ ಅನುಭವಿಸಿದ್ದು, 18 ತಿಂಗಳು ಮುಖ್ಯಮಂತ್ರಿಯಾಗಿ ಮತ್ತು 10 ತಿಂಗಳು ಪ್ರಧಾನಿಯಾಗಿ ಮಾತ್ರ. ಯಾರಿಗೂ ಅನ್ಯಾಯ ಮಾಡದಿ ದ್ದರೂ ನನ್ನದಲ್ಲದ ತಪ್ಪಿಗೆ ನೋವುಂಡದ್ದೇ ಹೆಚ್ಚು…’ -ಇದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮನದಾಳದ ಮಾತು.

“ಉದಯವಾಣಿ’ ಕಚೇರಿಯಲ್ಲಿ ಬುಧವಾರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ರಾಜಕೀಯ ಜೀವನದ ಏಳು-ಬೀಳು, ಅವಮಾನ-ಸಮ್ಮಾನಗಳ ನೆನಪಿನ ಸುರುಳಿ ಬಿಚ್ಚಿಟ್ಟರು. “ದೈವೇಚ್ಛೆ ಇಲ್ಲದೆ ಏನೂ ಆಗುವುದಿಲ್ಲ, ಸವಾಲುಗಳು ಎದುರಾದರೂ ಎದೆಗುಂದದೆ ಮುನ್ನಡೆಯುತ್ತಿರುವೆ. ನನ್ನ ಜೀವನ ಒಂದು ಕಲ್ಲುಮುಳ್ಳಿನ ಹಾದಿ. ನಾನು ಏನೇ ಸಾಧಿಸಿದ್ದರೂ ದೈವ ಕೃಪೆ ಹಾಗೂ ಪತ್ನಿಯ ಪೂಜಾಫ‌ಲ ಎಂದು ನಂಬಿದ್ದೇನೆ’ ಎಂದು ಹೇಳಿದರು.
ನೆನಪುಗಳ ಮೆಲುಕು ….

ನನ್ನ ಜೀವನ ರಾಜಕೀಯ, ಹೋರಾಟದಲ್ಲೇ ಕಳೆ
ಯಿತು. ನನ್ನ ಪತ್ನಿ ಸಹಿತ ಕುಟುಂಬ ಸದಸ್ಯರನ್ನು ಸಿನೆಮಾ ಸೇರಿ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ಆದರೆ ದೇವಸ್ಥಾನಗಳಿಗೆ ಮಾತ್ರ ತಪ್ಪುತ್ತಿರಲಿಲ್ಲ. ನಾವು ಶಿವನ ಆರಾಧಕರು. ನಮ್ಮ ಇಡೀ ಕುಟುಂಬಕ್ಕೆ ದೈವಭಕ್ತಿ ಹೆಚ್ಚು.

ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ ಸುದ್ದಿ ಕೇಳಿದ ನನ್ನ ತಂದೆ ಆಘಾತಕ್ಕೊಳಗಾಗಿ ನೆನಪಿನ ಶಕ್ತಿ ಕಳೆದುಕೊಂಡರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ದೇವರಾಜ ಅರಸು ಅವರು ನನಗೆ ಸಚಿವ ಸ್ಥಾನದ ಆಫ‌ರ್‌ ನೀಡಿ ನಿಮ್ಮ ತಂದೆಗೆ ಉತ್ತಮ ಚಿಕಿತ್ಸೆ ಕೊಡಿಸಬಹುದು, ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹೇಳಿದರು. ಆದರೆ ನನ್ನ ಮನಸ್ಸು ಒಪ್ಪಲಿಲ್ಲ. ಅರಸು ಅವರು ಸಾಕಷ್ಟು ಬಾರಿ ಅಧಿಕಾರ ಹಾಗೂ ಆರ್ಥಿಕ ನೆರವು ನೀಡಲು ಮುಂದಾದರೂ ನಾನು ಒಪ್ಪಿಕೊಳ್ಳಲಿಲ್ಲ. ನಾನೆಂದೂ ಅಧಿಕಾರದ ಹಿಂದೆ ಬಿದ್ದವನಲ್ಲ. ಆದರೂ ಅಧಿಕಾರಕ್ಕಾಗಿ ದೇವೇಗೌಡರು ಏನು ಬೇಕಾದರೂ ಮಾಡುತ್ತಾರೆ ಎಂಬ ಅಪಪ್ರಚಾರ ಮಾತ್ರ ನಿಲ್ಲಲಿಲ್ಲ.

ಪ್ರಧಾನಿ ಹುದ್ದೆ ಒಲ್ಲೆ ಎಂದಿದ್ದೆ
1996ರಲ್ಲಿ ಪ್ರಧಾನಿ ಹುದ್ದೆ ಒಲಿದು ಬಂದಾಗ ಜ್ಯೋತಿ ಬಸು ಅವರ ಕಾಲು ಹಿಡಿದು ಬೇಡ ಎಂದು ಹೇಳಿದ್ದೆ. ನನಗೆ ಹದಿನೆಂಟು ತಿಂಗಳು ಮುಖ್ಯಮಂತ್ರಿ ಅನುಭವ, ನಿಮ್ಮದು 18 ವರ್ಷ ಮುಖ್ಯಮಂತ್ರಿ ಅನುಭವ. ಚರಣ್‌ಸಿಂಗ್‌, ಚಂದ್ರಶೇಖರ್‌, ವಿ.ಪಿ. ಸಿಂಗ್‌ ಅವರ ಸರಕಾರವನ್ನು ಕಾಂಗ್ರೆಸ್‌ನವರು ಹೇಗೆ ತೆಗೆದರು ಗೊತ್ತಿದೆ. ದಯವಿಟ್ಟು ಬಿಟ್ಟುಬಿಡಿ, ನನ್ನ ರಾಜ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಮನವಿ ಮಾಡಿದ್ದೆ. ಆದರೆ ಜ್ಯೋತಿ ಬಸು, ಲಾಲು ಪ್ರಸಾದ್‌ ಯಾದವ್‌, ಮಧು ದಂಡವತೆ ಬಿಡಲಿಲ್ಲ. ಹದಿಮೂರು ಪಕ್ಷಗಳು ಒಟ್ಟಾಗಿ ಎಚ್‌.ಡಿ. ದೇವೇಗೌಡರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ಬಿಹಾರ ಭವನದಲ್ಲಿ ಘೋಷಣೆ ಯನ್ನೇ ಮಾಡಿಬಿಟ್ಟರು. ನಾನು ಪ್ರಧಾನಿಯಾಗಬೇಕು ಎಂದು ಕನಸು ಕಂಡವನೂ ಅಲ್ಲ ಎಂದರು.

ಸಿಎಂ ಆಫ‌ರ್‌ ನೀಡಿದ್ದ ಇಂದಿರಾ
ಹಿಂದೊಮ್ಮೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಬಂದಿದ್ದ ಕಮಲಾಪತಿ ತ್ರಿಪಾಠಿ ಹಾಗೂ ಕೆ.ಕೆ.ಮೂರ್ತಿ ಅವರು, ಪಕ್ಷಕ್ಕೆ ಬಂದರೆ ನಿಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂದಿರಾಗಾಂಧಿಯವರು ಪ್ರಕಟ ಮಾಡುತ್ತಾರೆ ಎಂದು ಆಫ‌ರ್‌ ನೀಡಿದರು. ಆದರೆ ನಾನು ಒಪ್ಪಲಿಲ್ಲ. ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತಂದಾಗ ನನಗೆ ಮುಖ್ಯಮಂತ್ರಿಯಾಗಲು ಸುಲಭವಾಗಿ ಬಿಡಲಿಲ್ಲ. ನಾನೇನೂ ಮಾಡದಿದ್ದರೂ ಹೆಗಡೆ ಅವರಿಗೆ ಚಪ್ಪಲಿಯಲ್ಲಿ ಹೊಡೆಸಿದೆ ಎಂದು ನಿಂದನೆ ತಲೆಗೆ ಕಟ್ಟಿದ್ದರು ಎಂದು ಗೌಡರು ನೆನಪಿಸಿಕೊಂಡರು.

ಅನರ್ಹರ ವಿರುದ್ಧ ಜೆಡಿಎಸ್‌ ಹೋರಾಟ
ಉಪ ಚುನಾವಣೆಯಲ್ಲಿ ಅನರ್ಹಗೊಂಡವರ ವಿರುದ್ಧವೇ ಜೆಡಿಎಸ್‌ ಹೋರಾಟ. ಫ‌ಲಿತಾಂಶದ ಅನಂತರ ಬಿಜೆಪಿ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ. ಒಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಬಿಜೆಪಿ ಜತೆ ಹೋಗಲು ನಮಗೂ ನೈತಿಕತೆ ಕಾಡುತ್ತದೆಯಲ್ಲವೇ ಎಂದು ದೇವೇಗೌಡರು ಹೇಳಿದರು. ಚುನಾವಣೆಯಲ್ಲಿ ನಾವು ಐದು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್‌ ಜತೆ ಮೈತ್ರಿಯೂ ಮುಗಿದ ಅಧ್ಯಾಯ. ಮುಂದಿನ ಹಾದಿ ಪಕ್ಷ ಸಂಘಟನೆ ಮಾತ್ರ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ