ಫ‌ಲಿತಾಂಶ ಉಲ್ಟಾ ಬಂದ್ರೆ ಸಚಿವರ ತಲೆದಂಡ ಖಾತ್ರಿ

Team Udayavani, May 16, 2019, 6:05 AM IST

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಫ‌ಲಿತಾಂಶ ಬಂದರೆ ಕ್ಷೇತ್ರವಾರು ವಾಸ್ತವಾಂಶದ ಮಾಹಿತಿಗಳೊಂದಿಗೆ ಸಮರ್ಥನೆಗೆ ಜೆಡಿಎಸ್‌ ಸಜ್ಜಾಗಿದೆ. ಜತೆಗೆ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಲ್ಲಿ ವ್ಯತ್ಯಾಸವಾದರೆ ಅಲ್ಲಿನ ಸಚಿವರ ತಲೆದಂಡಕ್ಕೂ ತೀರ್ಮಾನಿಸಿದೆ.

ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮ ರಾಜನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮತದಾನದ ಬಳಿಕ ಸ್ಥಳೀಯ ನಾಯಕರ ಅಭಿಪ್ರಾಯ ಬೇರೆಯದೇ ಆಗಿದೆ. ಹೀಗಾಗಿ ಆ ಕ್ಷೇತ್ರಗಳಲ್ಲಿ ಫ‌ಲಿತಾಂಶ ಹೆಚ್ಚುಕಡಿಮೆಯಾದರೆ ಸಮಜಾಯಿಷಿ ನೀಡಲು ಮಾನಸಿಕವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಜ್ಜಾಗಿದ್ದಾರೆ.

ಮಂಡ್ಯ, ತುಮಕೂರು ಕ್ಷೇತ್ರಗಳ ಮಟ್ಟಿಗೆ ವಿಧಾನಸಭೆ ಕ್ಷೇತ್ರವಾರು ಲೀಡ್‌ ಕಡಿಮೆಯಾದರೂ ಜಿಲ್ಲಾ ಸಚಿವರಿಗೆ ಅರ್ಧಚಂದ್ರ ಖಚಿತ. ಈ ಬಗ್ಗೆ ಈಗಾಗಲೇ ಆಂತರಿಕ ಸಭೆ ನಡೆಸಿ ಸುಳಿವು ಸಹ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋಲಾರದಲ್ಲಿ ಕೆ.ಎಚ್‌. ಮುನಿಯಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದರು. ಚಿಕ್ಕಬಳ್ಳಾಪುರದಲ್ಲಿ ವಿರೋಧಿ ಅಲೆ ಇತ್ತು. ಮೈಸೂರಿನಲ್ಲಿ ಜೆಡಿಎಸ್‌ ನಾಯಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ಚಾಮರಾಜನಗರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಮತ ವಿಭಜನೆ ಸಾಧ್ಯತೆಯೂ ಇಲ್ಲದಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಹೆಚ್ಚು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಮಾಹಿತಿ ಸ್ಥಳೀಯ ನಾಯಕರು ಸಂಗ್ರಹಿಸಿದ್ದಾರೆ. ಇದರ ಆಧಾರದಲ್ಲಿ ಅಲ್ಲಿನ ಫ‌ಲಿತಾಂಶದ ಬಗ್ಗೆ ಅಂದಾಜು ಮಾಡಲಾಗಿದೆ.

ಒಂದೊಮ್ಮೆ ಫ‌ಲಿತಾಂಶ ವ್ಯತಿರಿಕ್ತ ಬಂದರೆ ಯಾವ್ಯಾವ ಕಾರಣಕ್ಕೆ ಎಂಬುದರ ಬಗ್ಗೆ ಕ್ಷೇತ್ರವಾರು ಮಾಹಿತಿ ನೀಡಲು ನೀಲನಕ್ಷೆ ರೂಪಿಸಲಾಗಿದೆ. ಯಾರೆಲ್ಲ ಕಾಂಗ್ರೆಸ್‌ ನಾಯಕರು ಮುಗಿಬೀಳಬಹುದು ಎಂಬ ನಿರೀಕ್ಷೆಯೊಂದಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದರು. ಕೆಲವು ಕಡೆ ವ್ಯತ್ಯಾಸವಾಗಿದೆ ಎಂದು ಖುದ್ದು ಜಿ.ಟಿ. ದೇವೇಗೌಡರೇ ಹೇಳಿಕೆ ನೀಡಿರುವುದರಿಂದ ಅಲ್ಲಿ ಏನಾದರೂ ಫ‌ಲಿತಾಂಶ ನಿರೀಕ್ಷಿತವಾಗಿ ಬಾರದಿದ್ದರೆ ಇಬ್ಬರು ಸಚಿವರ ತಲೆದಂಡಕ್ಕೆ ಕಾಂಗ್ರೆಸ್‌ ಒತ್ತಡ ಹೇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸಚಿವರಿಗೆ ತಲೆದಂಡ ಆತಂಕ
ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಫ‌ಲಿತಾಂಶವಷ್ಟೇ ಅಲ್ಲ ವಿಧಾನಸಭೆ ಕ್ಷೇತ್ರವಾರು ಲೀಡ್‌ನ‌ಲ್ಲಿ ವ್ಯತ್ಯಾಸವಾದರೂ ಸಚಿವರ ತಲೆದಂಡ ಖಚಿತ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆ ಸುಳಿವು ಸಹ ತಮ್ಮ ಪಕ್ಷದವರಿಗೆ ನೀಡಿದ್ದಾರೆ. ಮೈಸೂರು ಫ‌ಲಿತಾಂಶದಲ್ಲಿ ಏರುಪೇರಾದರೂ ಇಬ್ಬರು ಸಚಿವರ ವಿರುದ್ಧ ಕಾಂಗ್ರೆಸ್‌ ಮುಗಿ ಬೀಳಬಹುದು. ಹೀಗಾಗಿ ಮೂರೂ ಕ್ಷೇತ್ರಗಳ ಫ‌ಲಿತಾಂಶದ ಬಗ್ಗೆ ಅಲ್ಲಿನ ಸಚಿವರಿಗೂ ಆತಂಕ ಎದುರಾಗಿದೆ. ಈ ಮಧ್ಯೆ, ಹಾಸನದಲ್ಲಿ ವಿಧಾನಸಭೆ ಕ್ಷೇತ್ರವಾರು ಲೀಡ್‌ ಕಡಿಮೆಯಾದರೆ ರೇವಣ್ಣ ತಮ್ಮನ್ನು ಬಿಡುತ್ತಾರಾ ಎಂಬ ಭಯ ಅಲ್ಲಿನ ಜೆಡಿಎಸ್‌ ಶಾಸಕರನ್ನು ಕಾಡುತ್ತಿದೆ ಎಂದು ಹೇಳಲಾಗಿದೆ.

ಕನಿಷ್ಠ 14 ಸ್ಥಾನ ಗೆಲ್ಲುವ ವಿಶ್ವಾಸ
ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮೈತ್ರಿಕೂಟ ಕನಿಷ್ಠ 16 ಸ್ಥಾನಗಳನ್ನಾದರೂ ಗಳಿಸಬಹುದು ಎಂಬ ಆಶಾಭಾವನೆ ಇದೆ. ತಮ್ಮ ಆಪ್ತರ ಬಳಿಯೂ ಅದನ್ನೇ ಹೇಳಿಕೊಂಡಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜೆಡಿಎಸ್‌ ಬೆಂಬಲದಿಂದ ಜಯಗಳಿಸಿದರೆ ಮೈತ್ರಿ ಮುಂದುವರಿಯಲು ಆನುಕೂಲವಾಗುತ್ತದೆ. ತೀರಾ ಕಡಿಮೆ ಎಂದರೆ ಹದಿನಾಲ್ಕು ಸ್ಥಾನಗಳಾದರೂ ಬರಲೇಬೇಕು. ಇಲ್ಲವಾದರೆ ಮೈತ್ರಿ ಮಾಡಿ ಕೊಂಡು ಪ್ರಯೋಜನ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಆಗ ಕಾಂಗ್ರೆಸ್‌ ಕಡೆಯಿಂದ ಅಪಸ್ವರ ಎದುರಾಗಿ ಬಿಜೆಪಿ “ರಂಗಪ್ರವೇಶ’ ಮಾಡಬಹುದು. ನಾವು ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರ ಗಳಲ್ಲಿ ಕಾಂಗ್ರೆಸ್‌ ಸಚಿವರು ಕೆಲಸ ಮಾಡದಿರುವ ಬಗ್ಗೆಯೂ ಕೆಪಿಸಿಸಿಗೆ ವರದಿ ಬಂದಿದ್ದು ಆ ಬಗ್ಗೆಯೂ ಹೈಕಮಾಂಡ್‌ಗೆ ವರದಿ ಸಲ್ಲಿಕೆಯಾಗಿದೆ.

ಸೋನಿಯಾಗೆ ದೇವೇಗೌಡರ ಪತ್ರ
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸುಮಾರು 18 ಪುಟಗಳ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಲೋಕಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜತೆ ಮೈತ್ರಿ ಯಾದರೂ ಸಿದ್ದರಾಮಯ್ಯ ಅವರ ಬೆಂಬಲಿಗರು ಹಾಗೂ ಅವರ ಸಮುದಾಯ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿಲ್ಲ. ಇದು ಫ‌ಲಿತಾಂಶದ ಮೇಲೂ ಪರಿಣಾಮ ಬೀರ ಬಹುದು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್‌ ಪಕ್ಷವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ನಿಯಂತ್ರಣ ಮಾಡದಿದ್ದರೆ ಸಮ್ಮಿಶ್ರ ಸರಕಾರ ಸುಸೂತ್ರವಾಗಿ ಮುಂದುವರಿಯುವುದು ಕಷ್ಟ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಚುನಾವಣೆ ಹಾಗೂ ಅದಕ್ಕೂ ಮುನ್ನ ನೀಡಿದ್ದ ಹೇಳಿಕೆಗಳು, ಅದರಿಂದ ಉಂಟಾದ ಪರಿಣಾಮ, ಸೀಟು ಹಂಚಿಕೆ ಸಂದರ್ಭದಲ್ಲಿನ ಗೊಂದಲ, ಸಿದ್ದರಾಮಯ್ಯ ಅವರ ಹಠ, ಇವೆಲ್ಲದರಿಂದಲೂ ಸಮಸ್ಯೆಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ ಎನ್ನಲಾಗಿದೆ.

ಆದರೆ ಇಂತಹ ಯಾವುದೇ ಪತ್ರವನ್ನು ದೇವೇಗೌಡ ಬರೆದಿಲ್ಲ. ಎಲ್ಲವೂ ಊಹಾಪೋಹ. ದೇವೇಗೌಡ ವಿಶ್ರಾಂತಿಯಲ್ಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಸದ್ಯದಲ್ಲೇ ದಿಲ್ಲಿಗೆ ತೆರಳಲಿದ್ದಾರೆ ಎಂದು ಜೆಡಿಎಸ್‌ ನಾಯಕರು ತಿಳಿಸಿದ್ದಾರೆ. ಈ ಮಧ್ಯೆ ದೇವೇ ಗೌಡರು ಮೇ 22ರಂದು ಪಕ್ಷದ ಶಾಸಕರ ಸಭೆ ಕರೆಯುವ ಸಾಧ್ಯತೆಯಿದೆ. ಲೋಕಸಭೆ ಫ‌ಲಿ ತಾಂಶಕ್ಕೆ ಮುನ್ನ ಸಭೆ ಕರೆದು ಮುಂದಿನ ವಿದ್ಯ ಮಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಅನಂತರ ಮೇ24ರಂದು ಮತ್ತೂಂದು ಸಭೆ ಕರೆಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ