ರಾಜ್ಯದಲ್ಲಿ 2ನೇ ಹಂತಕ್ಕೆ ವೇದಿಕೆ ಸಿದ್ಧ

Team Udayavani, Apr 21, 2019, 6:30 AM IST

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಹದಿನಾಲ್ಕು ಲೋಕಸಭೆ ಕ್ಷೇತ್ರಗಳಲ್ಲಿ ರವಿವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್‌, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ರವಿವಾರ ಅಂತ್ಯಗೊಳ್ಳಲಿದ್ದು, ಮಂಗಳವಾರ ಮತದಾನ ನಡೆಯಲಿದೆ.
ರವಿವಾರ ಇಡೀ ದಿನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಸಹಿತ ಮುಖಂಡರ ದಂಡು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದೆ.

ಮೊದಲ ಹಂತಕ್ಕಿಂತ ಎರಡನೇ ಹಂತದ ಕ್ಷೇತ್ರಗಳ ಗೆಲುವು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಅತಿ ಹೆಚ್ಚು ಸೀಟು ಗೆಲ್ಲಲು ಮೂರೂ ಪಕ್ಷಗಳ ನಾಯಕರು ನಾಲ್ಕು ದಿನಗಳಿಂದ ನಿರಂತರ ಪ್ರಚಾರ-ರೋಡ್‌ ಶೋಗಳಲ್ಲಿ ನಿರತರಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶಿವಮೊಗ್ಗ ಕ್ಷೇತ್ರದ ಭದ್ರಾವತಿಯಲ್ಲಿ ಶನಿವಾರ ರೋಡ್‌ ಶೋ ನಡೆಸಿ ಬಿ.ವೈ. ರಾಘವೇಂದ್ರ ಪರ ಪ್ರಚಾರ ನಡೆಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿಯ ಖಾನಾಪುರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಪರ ಪ್ರಚಾರ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಘಟಾನುಘಟಿಗಳ ಸ್ಪರ್ಧೆ
ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ 2.43 ಕೋಟಿ ಮತದಾರರು ಮತ್ತು 28,022 ಮತಗಟ್ಟೆಗಳಿದ್ದು, 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಾ| ಉಮೇಶ್‌ ಜಾಧವ್‌, ಅನಂತಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ್‌, ಮಧು ಬಂಗಾರಪ್ಪ, ಬಿ.ವೈ. ರಾಘವೇಂದ್ರ, ವಿ.ಎಸ್‌. ಉಗ್ರಪ್ಪ , ಈಶ್ವರ ಖಂಡ್ರೆ, ಪ್ರಹ್ಲಾದ್‌ ಜೋಶಿ ಸಹಿತ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ.

ಇಂದು ಎಲ್ಲೆಲ್ಲಿ ಪ್ರಚಾರ?
ಕಲಬುರಗಿಗೆ ಪ್ರಿಯಾಂಕಾ ವಾದ್ರಾ ಬರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರು ಬೆಳಗಾವಿ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಅವರು ರಾಯಚೂರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

“ಉಗ್ರರಿಗೆ ಮೋದಿ ಮದ್ದು’
ಭದ್ರಾವತಿ, ಎ.20: ಲೋಕಸಭೆ ಚುನಾವಣೆ ಸಮರ ತಾರ್ಕಿಕ ಘಟ್ಟಕ್ಕೆ ಬಂದು ನಿಂತಿದೆ. ಮತ ಬೇಟೆಗೆ ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟ ನಾಯಕರು ವಾಗ್ಧಾಳಿ ಮುಂದುವರಿಸಿದ್ದಾರೆ. ರಾಹುಲ್‌ ಗಾಂಧಿ, ಮೋದಿ ಬಂದು ಹೋದ ಬೆನ್ನಲ್ಲೇ ಅಮಿತ್‌ ಶಾ ಪ್ರವೇಶ ಕಣಕ್ಕೆ ರಂಗೇರಿಸಿದ್ದು, ಉಗ್ರರ ನಿಗ್ರಹಕ್ಕೆ ಮೋದಿಯೇ ಮದ್ದು; ಪಾಕ್‌ ಪುಂಡಾಟಕ್ಕೆ ಬಿಜೆಪಿಯಂಥ ಸದೃಢ ಸರಕಾರವೇ ಅಸ್ತ್ರ ಎಂದವರು ಪ್ರತಿಪಾದಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರ ಗಳಲ್ಲಿ ಬಿಜೆಪಿಗೆ ಭದ್ರ ಬುನಾದಿ ಇದೆ. ಹೀಗಾಗಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ರಾಜ್ಯ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಸಮ್ಮಿಶ್ರ ಸರಕಾರದ ಸಮನ್ವಯ ಕೊರತೆ, ಕೇಂದ್ರದ ಸಾಧನೆ ಮುಂದಿಟ್ಟು ಮತ ಯಾಚಿಸುವಂತೆ ತಾಕೀತು ಮಾಡಿದ್ದಾರೆ.

ಶನಿವಾರ ಭದ್ರಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದ ಅಮಿತ್‌ ಶಾ, ಭಯೋತ್ಪಾದನೆ ನಿಗ್ರಹ, ದೇಶದ ಭದ್ರತೆ, ಪಾಕಿಸ್ಥಾನ ಪುಂಡಾಟಿಕೆಯನ್ನು ಬಗ್ಗು ಬಡಿಯಲು ಮೋದಿ ಮತ್ತೂಮ್ಮೆ ಪ್ರಧಾನಿಯಾಗ ಬೇಕಾದ ಆವಶ್ಯಕತೆ ಇದೆ. ನಾನು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲೂ ಎ.23ರಂದು ಮತದಾನ ನಡೆಯಲಿದೆ. ಆದರೂ ಪಕ್ಷದ ಕರೆಯ ಮೇರೆಗೆ ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಲು ನಿಮ್ಮೂರಿಗೆ ಬಂದಿದ್ದೇನೆ. ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದರು.

ಇದಕ್ಕೂ ಮೊದಲು ಶನಿವಾರ ಬೆಳಗ್ಗೆ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಸಹಿತ ವಿವಿಧ ಮುಖಂಡರ ಜತೆ ಶಾ ಸುದೀರ್ಘ‌ ಚರ್ಚೆ ನಡೆಸಿದರು. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳ ಸ್ಥಿತಿಗತಿಯ ಮಾಹಿತಿ ಪಡೆದರು. ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ನನಗೂ ಪ್ರಧಾನಿ ಆಗುವ ಅರ್ಹತೆ ಇದೆ: ದೇವೇಗೌಡ
ವಿಜಯಪುರ: ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮತ್ತೂಮ್ಮೆ ಪ್ರಧಾನಿ ಆಗುವ ಹಂಬಲ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿ, ನಾನು ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ಆದರೆ ಒತ್ತಾಯದಿಂದ ಕಣದಲ್ಲಿದ್ದೇನೆ. ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ನಿರ್ಧಾರ ಮಾಡಲಾಗುವುದು. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಶರದ್‌ ಪವಾರ್‌, ಮಾಯಾವತಿ ಕೂಡ ಪ್ರಧಾನಿ ಆಗಲು ಆರ್ಹತೆ ಹೊಂದಿದ್ದಾರೆ. ನಾನು ಬದುಕಿದ್ದು, ನನಗೂ ಪ್ರಧಾನಿ ಆಗುವ ಅರ್ಹತೆ ಇದೆ. ಆದರೆ ಸದ್ಯದ ಅನಿವಾರ್ಯತೆಯಲ್ಲಿ ರಾಹುಲ್‌ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದರು.

ಉತ್ತರದಲ್ಲೂ ಐಟಿ ದಾಳಿ
ಬಾಗಲಕೋಟೆ/ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಮತ್ತು ವಿಜಯಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ್‌ ಆಪ್ತರ ಮನೆ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಆರೋಗ್ಯ ಸಚಿವ ಶಿವಾನಂದ ಪಾಟೀಲರ ಆಪ್ತರೂ ಆಗಿರುವ ಡಿಸಿಸಿ ಬ್ಯಾಂಕ್‌ನ ಇಬ್ಬರು ನೌಕರರಾದ ಆರೀಫ್‌ ಕಾರಲೇಕರ, ಯಾಸೀನ್‌ ತುಂಬರಮಟ್ಟಿ ಅವರ ಮನೆಯ ಮೇಲೆ ಬೆಳಗಾವಿಯ ಐಟಿ ಅಧಿಕಾರಿ ವಿಕ್ರಮ ನೇತೃತ್ವದ ಸುಮಾರು 8ರಿಂದ 10 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ತಪಾಸಣೆ ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ವಿಜಯಪುರ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ್‌ ಸಂಬಂಧಿಗಳಾದ ತಾಂಬಾ ಗ್ರಾಮದಲ್ಲಿರುವ ಇಬ್ಬರ ಮನೆಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 12 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ್‌ ಅವರ ಪತಿ ಡಾ| ದೇವಾನಂದ ಚವ್ಹಾಣ್‌ ಜಿಲ್ಲೆಯ ನಾಗಠಾಣ ಕ್ಷೇತ್ರದ ಶಾಸಕರಾಗಿದ್ದು, ಐಟಿ ಇಲಾಖೆಯ 6 ಅಧಿಕಾರಿಗಳ ತಂಡ ಶಾಸಕ ದೇವಾನಂದ ಅವರ ಅಳಿಯ ವಿಜಯಕುಮಾರ ದೊಡಮನಿ ಮತ್ತು ರಡ್ಡೇವಾಡಿ ದೇವೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದೆ.

4.50 ಕೋಟಿ ರೂ. ಜಪ್ತಿ
ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಂತೆಯೇ ಭರ್ಜರಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ-ಗೋವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬಾಗಲಕೋಟೆ, ವಿಜಯಪುರ ಮತ್ತು ಶಿವಮೊಗ್ಗ ಹಾಗೂ ಭದ್ರಾವತಿ ಸೇರಿ ವಿವಿಧೆಡೆ 4.5 ಕೋಟಿ ರೂ. ಜಪ್ತಿ ಮಾಡಿದ್ದಾರೆ.

ಐಟಿ ಗುಪ್ತಚರ ವಿಭಾಗದ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಾಟ ಮಾಡುತ್ತಿದ್ದ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದು, ಆತನ ಮಾಹಿತಿ ಮೇರೆಗೆ ಕಾರಿನಲ್ಲಿದ್ದ ಸ್ಟೆಪ್ನಿ (ಟಯರ್‌)ಯೊಳಗೆ ಅಡಗಿಸಿಟ್ಟಿದ್ದ 2 ಸಾವಿರ ರೂ. ಮುಖ ಬೆಲೆಯ 2.30 ಕೋಟಿ ರೂ. ಪತ್ತೆಹಚ್ಚಿದ್ದಾರೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ 60 ಲಕ್ಷ ರೂ. ಪತ್ತೆಯಾಗಿದ್ದು ಅದರ ಬಗ್ಗೆಯೂ ಶೋಧ ಕಾರ್ಯ ಮುಂದುವರಿದಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ