ಇಟ್ಟ ಹೆಜ್ಜೆ ವಾಪಸ್‌ ಇಲ್ಲ

Team Udayavani, Jul 8, 2019, 6:00 AM IST

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವುದಿಲ್ಲ ಎಂದು ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ನಾವೆಲ್ಲರೂ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇವೆ, ರಾಜ್ಯಪಾಲರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಅತೃಪ್ತ ಶಾಸಕರಲ್ಲೊಬ್ಬರಾದ ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ತಂಗಿರುವ ಹತ್ತೂ ಶಾಸಕರೂ ಒಟ್ಟಾಗಿ ಮಾಧ್ಯಮಗಳ ಎದುರು ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಸೋಮಶೇಖರ್‌, ರಾಜೀನಾಮೆ ಸಲ್ಲಿಸಿರುವ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ. ಈಗಾಗಲೆ ಹತ್ತು ಜನ ಹೊಟೇಲ್ನಲ್ಲಿದ್ದೇವೆ. ರಾಮಲಿಂಗಾ ರೆಡ್ಡಿ, ಮುನಿರತ್ನ, ಆನಂದ್‌ ಸಿಂಗ್‌ ಸೋಮವಾರ ಬಂದು ಸೇರುತ್ತಾರೆ. ಹದಿಮೂರು ಜನ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವ ಪ್ರಮೇಯ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನಾವು ರಾಜೀನಾಮೆ ನೀಡಿದ ನಂತರ ಶಾಸಕಾಂಗ ಪಕ್ಷದ ಸಭೆಗೆ ಹೋಗುವ ಸಂದರ್ಭ ಇಲ್ಲ ಎಂದರು. ಇದೇ ವೇಳೆ, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನಾವು ಕೇಳಿಲ್ಲ. ಇಂಥವರನ್ನೇ ಸಿಎಂ ಮಾಡಿ ಎಂದೂ ನಾವು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಮಾತನಾಡಿದ ಜೆಡಿಎಸ್‌ನ ಗೋಪಾಲಯ್ಯ ಹಾಗೂ ಕಾಂಗ್ರೆಸ್‌ನ ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್, ಸೋಮಶೇಖರ್‌ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿದರು.

ಈ ಮಧ್ಯೆ, ರಾಮಲಿಂಗಾರೆಡ್ಡಿ ಪುತ್ರಿ, ಸೌಮ್ಯಾ ರೆಡ್ಡಿ ಸೋಮವಾರ ರಾಜೀನಾಮೆ ನೀಡುವುದು ಬಹುತೇಕ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ನಾನು ರಾಜೀನಾಮೆ ಕೊಡಲ್ಲ: ನಾನು ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ನಮಗೂ ಕೆಲವು ಅಸಮಾಧಾನಗಳಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬೇಕಾದ ಮಾರ್ಗಗಳೂ ಇವೆ. ಹಾಗಂತ ರಾಜೀನಾಮೆಯೊಂದೇ ಪರಿಹಾರವಲ್ಲ ಎಂದು ಹೇಳಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಪಕ್ಷ ಬಯ ಸಿದರೆ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಈ ಮಧ್ಯೆ, ನಾಗಠಾಣ ಜೆಡಿಎಸ್‌ ಶಾಸಕ ದೇವಾ ನಂದ ಚವ್ಹಾಣ ಹಾಗೂ ಇಂಡಿ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಶಾಸಕ ಯಶವಂತ ರಾಯಗೌಡ ಪಾಟೀಲ ರಾಜೀನಾಮೆ ನೀಡುವ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯದಲ್ಲೇ ಮತ್ತಷ್ಟು ಶಾಸಕರ ರಾಜೀನಾಮೆ?

ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತರೆನ್ನಲಾದ ಶಾಸಕರ ಪೈಕಿ 18 ಮಂದಿ ಬಿಜೆಪಿಯ ಕೆಲ ನಾಯಕರ ಸಂಪರ್ಕದಲ್ಲಿದ್ದರು. ಆ ಪೈಕಿ ಸದ್ಯ 12 ಮಂದಿ ರಾಜೀನಾಮೆ ನೀಡಿದಂತಿದೆ. ಉಳಿದವರು ಮಂಗಳವಾರ ಇಲ್ಲವೇ ಬುಧವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗುವ ಜತೆಗೆ ಅದರಲ್ಲಿ ಸಚಿವರಿದ್ದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.

ಇಂದು ಬಿಜೆಪಿ ಶಾಸಕಾಂಗ ಸಭೆ

ರಾಜ್ಯ ರಾಜಕೀಯ ರಂಗು ಪಡೆಯುತ್ತಿದ್ದಂತೆ, ಬಿಜೆಪಿ ಕೂಡ ಅಖಾಡಕ್ಕೆ ಧುಮುಕಿದೆ. ಸೋಮವಾರ ಸಂಜೆ 5 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಬಳಿಕ ಯಲಹಂಕದ ಖಾಸಗಿ ಹೋಟೆಲ್ವೊಂದಕ್ಕೆ ಎಲ್ಲ ಶಾಸಕರನ್ನು ಕಳುಹಿಸುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳ ನಾಯಕರು ನಾನಾ ಕಾರ್ಯತಂತ್ರ ಹೆಣೆದಿರುವ ಬೆನ್ನಲ್ಲೇ, ಬಿಜೆಪಿ ತನ್ನೆಲ್ಲಾ ಶಾಸಕರನ್ನು ಒಟ್ಟಿಗೆ ಇರಿಸಿಕೊಳ್ಳಲು ಮುಂದಾಗಿದೆ. ಜತೆಗೆ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಎಲ್ಲೂ ವಿಫ‌ಲವಾಗದಂತೆ ಯೋಜಿತ ರೀತಿಯಲ್ಲೇ ಬಿಜೆಪಿ ಸಜ್ಜಾಗುತ್ತಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ