ಈ ಬಾರಿ ದಾಖಲೆ ಬರೆದ ಮತದಾರ

Team Udayavani, Apr 28, 2019, 3:05 AM IST

ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ಈ ಬಾರಿಯ ಮತದಾನ ದಾಖಲೆ ಬರೆದಿದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ, ಶೇ.68.62ರಷ್ಟು ಮತದಾನ ದಾಖಲಾಗಿದೆ.

ರಾಜ್ಯದಲ್ಲಿ ಈವರೆಗೆ ನಡೆದಿರುವ 17 ಲೋಕಸಭಾ ಚುನಾವಣೆಗಳಲ್ಲಿ ಇಷ್ಟೊಂದು ಅಧಿಕ ಪ್ರಮಾಣದ ಮತದಾನ ಯಾವ ಚುನಾವಣೆಯಲ್ಲೂ ಆಗಿರಲಿಲ್ಲ. 1999ರಲ್ಲಿ ಆಗಿದ್ದ ಶೇ.67.58ರಷ್ಟು ಮತದಾನ ಈವರೆಗಿನ ಗರಿಷ್ಠ ಮತದಾನವಾಗಿತ್ತು. ಈ ಬಾರಿ ರಾಜ್ಯದ ಮತದಾರ ಸಾರ್ವತ್ರಿಕ ದಾಖಲೆ ಬರೆದಿದ್ದಾನೆ.

ಈ ಬಾರಿ ಮತದಾನದ ಪ್ರಮಾಣವನ್ನು ಶೇ.70ಕ್ಕೆ ಹೆಚ್ಚಿಸಬೇಕೆಂಬ ಗುರಿ ಇಟ್ಟುಕೊಂಡಿದ್ದ ಚುನಾವಣಾ ಆಯೋಗ, ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದಾಗ್ಯೂ ಮತ ಪ್ರಮಾಣವನ್ನು ಶೇ.68.62ಕ್ಕೆ ಹೆಚ್ಚಿಸಲಷ್ಟೇ ಅದು ಸಫ‌ಲವಾಯಿತು. ಆದರೆ, ಈ ಮತದ ಪ್ರಮಾಣ ರಾಜ್ಯದ ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ಗರಿಷ್ಠ ಎನ್ನುವುದು ವಿಶೇಷ.

1951ರಲ್ಲಿ ಶೇ.51.93ರಷ್ಟು ಮತದಾನ: ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆ 1951ರಲ್ಲಿ ನಡೆದಿತ್ತು. ಆಗ ಶೇ.51.93ರಷ್ಟು ಮತದಾನ ಆಗಿತ್ತು. ಇದು ಈವರೆಗಿನ ಕನಿಷ್ಠ ಮತದಾನವೂ ಹೌದು. ಉಳಿದಂತೆ 1991ರಲ್ಲಿ ಶೇ.54.81, 1971ರಲ್ಲಿ ಶೇ.57.41, 1980ರಲ್ಲಿ ಶೇ.57.71 ಹಾಗೂ 1957ರಲ್ಲಿ ಶೇ.57.90 ಈವರೆಗಿನ ಕನಿಷ್ಠ ಮತದಾನ ಪ್ರಮಾಣ ಆಗಿದೆ.

ಅದೇ ರೀತಿ, 1999ರಲ್ಲಿ ಶೇ.67.58, 1989ರಲ್ಲಿ ಶೇ.67.53, 2014ರಲ್ಲಿ ಶೇ.67.20, 1980ರಲ್ಲಿ ಶೇ.65.70 ಈವರೆಗಿನ ಗರಿಷ್ಠ ಮತದಾನ ಆಗಿತ್ತು. ಈಗ, 2019ರಲ್ಲಿ ಶೇ.68.62ರಷ್ಟು ಮತದಾನ ಆಗಿದ್ದು, ಈವರೆಗಿನ ಎಲ್ಲ ಗರಿಷ್ಠ ದಾಖಲೆಗಳನ್ನೂ ಹಿಂದಿಕ್ಕಿದೆ.

ಮತ ಪ್ರಮಾಣ ಏರಿಳಿತ: ಈವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಶೇಕಡಾವಾರು ಮತ ಪ್ರಮಾಣ ಏರಿಳಿತ ಕಂಡಿದೆ. 1951ರಿಂದ 1967ರವರೆಗಿನ ಮೊದಲ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ಶೇಕಡಾವಾರು ಮತ ಪ್ರಮಾಣ ಏರುಗತಿಯಲ್ಲಿತ್ತು.

ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಒಂದು ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿದ್ದರೆ, ಮುಂದಿನ ಚುನಾವಣೆಯಲ್ಲಿ ಹೆಚ್ಚು, ಅದೇ ರೀತಿ ಹೆಚ್ಚು ಮತದಾನ ಆದ ಮುಂದಿನ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿದೆ. ಈ ರೀತಿಯ ಶೇಕಡಾವಾರು ಮತ ಪ್ರಮಾಣ ಏರಿಳಿತದ ಕಣ್ಣಾಮುಚ್ಚಾಲೆ ಲೋಕಸಭಾ ಚುನಾವಣೆಯುದ್ದಕ್ಕೂ ನಡೆದುಕೊಂಡು ಬಂದಿದೆ.

1951ರಿಂದ 1971ರವರೆಗೆ ಮೈಸೂರು ರಾಜ್ಯದ ಹೆಸರಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ನಂತರ, 1977ರಿಂದ ಕರ್ನಾಟಕ ರಾಜ್ಯದ ಹೆಸರಲ್ಲಿ ಲೋಕಸಭಾ ಚುನಾವಣೆಗಳು ನಡೆದವು. 1951ರ ಮೊದಲ ಚುನಾವಣೆ ವೇಳೆ ಒಟ್ಟು 9 ಕ್ಷೇತ್ರಗಳಿದ್ದವು. 1957 ಮತ್ತು 62ರಲ್ಲಿ ಕ್ಷೇತ್ರಗಳ ಸಂಖ್ಯೆ 26 ಆಯಿತು. ಅದೇ ರೀತಿ, 1967 ಮತ್ತು 71ರಲ್ಲಿ 27 ಕ್ಷೇತ್ರಗಳಿದ್ದವು.

1977ರ ನಂತರ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ಕ್ಕೆ ಏರಿತು. 1951ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಒಟ್ಟು 39.69 ಲಕ್ಷ ಮತದಾರರ ಪೈಕಿ 28.24 ಲಕ್ಷ ಜನ ಮತ ಚಲಾಯಿಸಿದ್ದರು. ಈಗ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ 5.10 ಕೋಟಿ ಮತದಾರರ ಪೈಕಿ 3.50 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಂಗಳೂರಿಂದಾಗಿ ಹಿನ್ನಡೆ: ನೂರಕ್ಕೆ ನೂರರಷ್ಟು ಜನ ಮತ ಚಲಾಯಿಸಬೇಕು. ಮತದಾನದ ಪ್ರಮಾಣವನ್ನು ಶೇ.70ಕ್ಕಿಂತ ಜಾಸ್ತಿಗೆ ಹೆಚ್ಚಿಸಬೇಕೆಂಬ ಗುರಿಯೊಂದಿಗೆ ಆಯೋಗ ಸಾಕಷ್ಟು ಪ್ರಯತ್ನ ನಡೆಸಿತು. ಮತದಾನದ ಮಹತ್ವದ ಕುರಿತು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಆದರೆ, ಬೆಂಗಳೂರಿನಲ್ಲಿ ಕಡಿಮೆ ಮತದಾನ ಆಗಿದ್ದರಿಂದ ಆಯೋಗದ ಗುರಿ ಸಾಧನೆಗೆ ಹಿನ್ನಡೆಯಾಯಿತು. ಜತೆಗೆ, ಮತ ಪ್ರಮಾಣ ಹೆಚ್ಚಿಸುವಲ್ಲಿ ರಾಜಕೀಯ ಪಕ್ಷಗಳೂ ಸಹ ಇನ್ನಷ್ಟು ಸಕ್ರೀಯ ಪಾತ್ರ ವಹಿಸಬೇಕಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನಲ್ಲಿ 2014ಕ್ಕಿಂತ ಕಡಿಮೆ ಮತದಾನ ಆಗಿದ್ದರೂ, ಹಿಂದಿನ ಲೋಕಸಭಾ ಚುನಾವಣೆಗಳಿಗೆ ಹೊಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿಯದ್ದು ದಾಖಲೆ ಮತದಾನ. ಇದಕ್ಕೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತ ಜಾಗೃತಿ ಕಾರ್ಯಕ್ರಮಗಳ ಕೊಡುಗೆ ಬಹಳಷ್ಟಿದೆ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

ವರ್ಷ ಶೇಕಡಾವಾರು ಮತದಾನ
-1951 ಶೇ.51.93
-1957 ಶೇ.52.21
-1962 ಶೇ.59.30
-1867 ಶೇ.62.95
-1971 ಶೇ.57.41
-1977 ಶೇ.63.20
-1980 ಶೇ.57.71
-1984 ಶೇ.65.70
-1989 ಶೇ.67.53
-1991 ಶೇ.54.81
-1996 ಶೇ.60.22
-1998 ಶೇ.64.92
-1999 ಶೇ.67.58
-2004 ಶೇ.65.14
-2009 ಶೇ.58.80
-2014 ಶೇ.67.20
-2019 ಶೇ.68.62

* ರಫೀಕ್‌ ಅಹ್ಮದ್‌


ಈ ವಿಭಾಗದಿಂದ ಇನ್ನಷ್ಟು

  • ಕಾಂಗ್ರೆಸ್‌ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...

  • ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವ "ಕರ್ನಾಟಕ ದರ್ಶನ'ಕ್ಕೆ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲು...

  • ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳ...

  • ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ...

  • ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಲ ಕಾಂಗ್ರೆಸ್ಸಿಗರಲ್ಲ. ಅಧಿಕಾರಕ್ಕಾಗಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದವರು ಎಂದು ಸಚಿವ ಬಿ.ಶ್ರೀರಾಮುಲು...

ಹೊಸ ಸೇರ್ಪಡೆ