ದೋಸ್ತಿ ಸರಕಾರಕ್ಕೆ ಸಂಕಟ

ಇಬ್ಬರು ಕಾಂಗ್ರೆಸ್‌ ಶಾಸಕರ ರಾಜೀನಾಮೆ

Team Udayavani, Jul 2, 2019, 6:00 AM IST

ಬೆಂಗಳೂರು: ರಾಜ್ಯ ರಾಜಕೀಯದ ಹಠಾತ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಆನಂದ್‌ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರಕಾರಕ್ಕೆ ಶಾಕ್‌ ನೀಡಿದ್ದಾರೆ. ಇದರಿಂದಾಗಿ ಮತ್ತೆ ಸರಕಾರಕ್ಕೆ ಕಂಟಕದ ಲಕ್ಷಣಗಳು ಕಂಡುಬರುತ್ತಿವೆ.

ಇಬ್ಬರು ಶಾಸಕರ ರಾಜೀನಾಮೆಯಿಂದ ಸರಕಾರದ ಬಲ 117ಕ್ಕೆ ಕುಸಿದಂತಾಗಿದ್ದು, ಇಬ್ಬರು ಪಕ್ಷೇತರರ ನೆರವಿನಿಂದ ಸರಕಾರ ಭದ್ರಪಡಿಸಿ ಕೊಂಡ ನೆಮ್ಮದಿಯಲ್ಲಿದ್ದ ಎರಡೂ ಪಕ್ಷಗಳಿಗೂ ಈಗ ಮತ್ತೂಮ್ಮೆ ಸಮಸ್ಯೆ ಎದುರಾಗಿದೆ.

ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಆನಂದ್‌ ಸಿಂಗ್‌, ಬೆಳಗಾವಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ವರ್ತನೆ ವಿರುದ್ಧ ಸಿಡಿದೆದ್ದಿದ್ದ ರಮೇಶ್‌ ಜಾರಕಿಹೊಳಿ ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದ ಸರಕಾರಕ್ಕೆ ಧಕ್ಕೆ ಇಲ್ಲ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಮರ್ಥನೆ ನೀಡುತ್ತಿದ್ದರಾದರೂ ಅತೃಪ್ತರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿ ರುವುದು ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯ ಕೇಂದ್ರ ನಾಯಕರ ರೂಪುರೇಷೆ ಪ್ರಕಾರವೇ ವಿದ್ಯಮಾನಗಳು ನಡೆಯುತ್ತಿವೆಯೇ ಎಂಬ ಅನುಮಾನವೂ ಪ್ರಾರಂಭವಾಗಿದೆ.

ಈ ಮಧ್ಯೆ, ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷನಿಷ್ಠಯ ಕೆಲವು ಸಚಿವರಿಂದ ರಾಜೀನಾಮೆ ಕೊಡಿಸುವ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರ ಚಿಂತನೆಯಲ್ಲಿದ್ದು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಬಿಜೆಪಿ ತಟಸ್ಥ!
ಇಷ್ಟೆಲ್ಲ ಬೆಳವಣಿಗೆ ನಡೆದರೂ ವಿಪಕ್ಷ ಬಿಜೆಪಿ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೇಲ್ನೋಟಕ್ಕೆ ತೋರ್ಪಡಿಸಿಕೊಳ್ಳುತ್ತಿದೆ. ಆದರೂ ಬಿಜೆಪಿಯ ಕೇಂದ್ರ ನಾಯಕರ ಒಪ್ಪಿಗೆಯ ಮೇರೆಗೆ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದೆ ಎನ್ನಲಾಗುತ್ತಿದೆ.

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಾವಾಗಿ ಸರಕಾರ ಕೆಡವಲು ಹೋಗುವುದಿಲ್ಲ. ಅವಿಶ್ವಾಸ ನಿರ್ಣಯ ಸಹ ಮಂಡಿಸುವುದಿಲ್ಲ. ಕಾಂಗ್ರೆಸ್‌ ಶಾಸಕರ ರಾಜೀನಾಮೆ ಬಗ್ಗೆ ಗೊತ್ತಿಲ್ಲ, ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿಯ ಕೆಲವು ನಾಯಕರು, ಸರಕಾರ ಬಿದ್ದರೆ ಸರಕಾರ ರಚಿಸುತ್ತೇವೆ ಎಂದು ಆಪ್ತ ವಲಯದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಬಿಜೆಪಿ ಸರಕಾರ ಪತನಗೊಳಿಸಿತು ಎಂಬ ಅಪವಾದ ಬರಬಹುದು. ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಬಾರದು ಎಂಬ ಕಾರಣದಿಂದ ಬಹಿರಂಗವಾಗಿ ಏನನ್ನೂ ಹೇಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಎಚ್‌ಡಿಕೆ ಮನವಿ
ಇದರ ಜತೆಗೆ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿಯವರು ಸಹ ಅಮೆರಿಕದಿಂದಲೇ ಅತೃಪ್ತ ಶಾಸಕರ ಸಂಪರ್ಕದಲ್ಲಿದ್ದು ನಾನು ಬರುವವರೆಗೂ ಸುಮ್ಮನಿರಿ ಎಂದು ಮನವಿ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇಬ್ಬರೂ ಶಾಸಕರ ಜತೆಯೂ ಮಾತನಾಡಿ ರಾಜೀನಾಮೆ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪರಿಸ್ಥಿತಿ ಕೈ ಮೀರಿದರೆ ಅಮೆರಿಕ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.

ರಾಜೀನಾಮೆ ಪ್ರಹಸನ
ಬಳ್ಳಾರಿಯ ವಿಜಯನಗರ ಶಾಸಕ ಆನಂದ್‌ಸಿಂಗ್‌ ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ಅನಂತರ ಮಧ್ಯಾಹ್ನದ ವೇಳೆಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಕೈ ಬರಹದಲ್ಲಿ ಸ್ಪೀಕರ್‌ಗೆ ಫ್ಯಾಕ್ಸ್‌ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದರು.

ರಾಜೀನಾಮೆಗೆ ಕಾರಣ?

ರಮೇಶ್‌ ಜಾರಕಿಹೊಳಿ
ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದರೂ ಬೆಳಗಾವಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪದಿಂದ ಪಕ್ಷದ ವಿರುದ್ಧವೇ ಸಿಡಿದಿದ್ದ ರಮೇಶ್‌ ಜಾರಕಿಹೊಳಿ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಅನಂತರ ಅವರನ್ನು ಸಚಿವ ಸ್ಥಾನದಿಂದಲೂ ತೆಗೆದು ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಅಲ್ಲಿಂದ ಅವರ ಕೋಪ ಮತ್ತಷ್ಟು ಹೆಚ್ಚಾಗಿ ಮೂರು ಬಾರಿ ಆಪರೇಷನ್‌ ಕಮಲ ಕಾರ್ಯಾ ಚರಣೆ ಪ್ರಯತ್ನ ನಡೆದಾಗಲೂ ಅತೃಪ್ತ ಶಾಸಕರ ನಾಯಕತ್ವ ವಹಿಸಿದ್ದರು.

ಆನಂದ್‌ಸಿಂಗ್‌
ತಮ್ಮ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಗಣೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಆತನ ಅಮಾನತು ವಾಪಸ್‌ ಪಡೆದಿದ್ದು ಆನಂದ್‌ ಸಿಂಗ್‌ಗೆ ಕೋಪ ತರಿಸಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಡಿ.ಕೆ. ಶಿವಕುಮಾರ್‌ ಅವರ ಗಮನಕ್ಕೂ ತಂದಿದ್ದರು. ಜತೆಗೆ ಜಿಂದಾಲ್‌ ಭೂಮಿ ಪರಭಾರೆ ವಿಚಾರ ದಲ್ಲೂ ಶಾಸಕ ನಾದ ತನ್ನ ಮಾತಿಗೆ ಮನ್ನಣೆ ನೀಡಲಿಲ್ಲ ಎಂಬ ಕೋಪವಿತ್ತು. ಸಚಿವ ಸ್ಥಾನ ಸಿಗದ ಬಗ್ಗೆ ಬೇಸರವಿತ್ತು. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಶಾಸಕರ ರಾಜೀನಾಮೆ?
ಈಗಾಗಲೇ ರಾಜೀನಾಮೆ ನೀಡಿರುವ ರಮೇಶ್‌ ಜಾರಕಿ ಹೊಳಿ ಮುಂಬಯಿಯಲ್ಲಿದ್ದಾರೆ ಎಂದು ಹೇಳಲಾಗಿದ್ದು, ಅಲ್ಲಿಂದಲೇ ತಮ್ಮ ಆಪ್ತರಿಗೆ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆಪ್ತರಾದ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌, ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ, ರಾಯಚೂರು ಗ್ರಾಮಾಂತರ ಬಸನಗೌಡ ದದ್ದಲ್‌, ಲಿಂಗಸಗೂರು ಶಾಸಕ ಬಿ.ಎಸ್‌. ಹೂಲಗೇರಿಗೆ ರಾಜೀನಾಮೆ ನೀಡು ವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಜಾರಕಿಹೊಳಿ ಬೆಂಗಳೂರಿಗೆ ಬಂದ ಬಳಿಕ ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಜಾರಕಿಹೊಳಿ ಆಪ್ತ ಮೂಲಗಳು ತಿಳಿಸಿವೆ. ಕಾಗವಾಡ ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್‌, ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾ ನಾಯ್ಕ ಕೂಡ ಅಸಮಾಧಾನದಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ತಂತ್ರ ಬದಲಿಸಿತಾ?
ಸಂಸತ್‌ ಅಧಿವೇಶನ, ಬಜೆಟ್‌ ಮಂಡನೆವರೆಗೂ ಕರ್ನಾಟಕದ ಬಗ್ಗೆ ಗಮನಹರಿಸು ವುದಿಲ್ಲ ಎಂದು ಹೇಳಿ ಕಾಂಗ್ರೆಸ್‌-ಜೆಡಿಎಸ್‌ ಗಮನ ಬೇರೆಡೆ ಸೆಳೆಯಲಾಗಿತ್ತು. ಈಗ ಸರಕಾರ ಮತ್ತೆ ಗಟ್ಟಿಗೊಳ್ಳುವತ್ತ ಆಡಳಿತ ಯಂತ್ರ ಚುರುಕುಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ತಂತ್ರ ಬದಲಿಸಿ ರಂಗಪ್ರವೇಶ ಮಾಡಿದೆ. ಶಾಸಕರು ತಮ್ಮಷ್ಟಕ್ಕೆ ತಾವೇ ರಾಜೀನಾಮೆ ನೀಡಿ ಸರಕಾರ ಪತನಕ್ಕೆ ಮಹೂರ್ತ ನಿಗದಿ ಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಿವರ್ಸ್‌ ಆಪರೇಷನ್‌
ಮೈತ್ರಿ ಸರಕಾರ ಉರುಳಿಸಲು ಕೇಂದ್ರದ ನಾಯಕರೇ ನೇರವಾಗಿ ಆಪರೇಷನ್‌ ಕಮಲಕ್ಕೆ ಇಳಿದಿದ್ದಾರೆ. ನಮಗೂ ರಿವರ್ಸ್‌ ಆಪರೇಷನ್‌ ಮಾಡಲು ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದಿದ್ದಾರೆ.

ಸದ್ಯ ಸರಕಾರಕ್ಕೆ ತೊಂದರೆ ಇಲ್ಲ
ರಾಜೀನಾಮೆ ಪರ್ವ ಇಬ್ಬರು ಶಾಸಕರಿಗೆ ಸೀಮಿತವಾದರೆ ಸರಕಾರಕ್ಕೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ ಕಷ್ಟವಾಗಬಹುದು. ಏಕೆಂದರೆ ಇಬ್ಬರು ಶಾಸಕರ ರಾಜೀನಾಮೆಯಿಂದ ಸರಕಾರದ ಬಲ 117ಕ್ಕೆ ಕುಸಿತವಾಗಿದೆ. ಇಬ್ಬರು ಪಕ್ಷೇತರರು ಸರಕಾರಕ್ಕೆ ಬೆಂಬಲ ನೀಡಿರುವುದರಿಂದ ಮೇಲ್ನೋಟಕ್ಕೆ ಸಮಸ್ಯೆ ಕಾಣಿಸುತ್ತಿಲ್ಲ.

ಅಮೆರಿಕದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸು ತ್ತಿದ್ದೇನೆ. ರಾಜ್ಯದಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ