ಯುಎಇ ಐಪಿಎಲ್: ಶೇ. 50 ಪ್ರೇಕ್ಷಕರಿಗೆ ಅನುಮತಿ?
Team Udayavani, Jun 1, 2021, 11:21 PM IST
ದುಬಾೖ : ಯುಎಇಯಲ್ಲಿ ಐಪಿಎಲ್ ಮುಂದುವರಿಯಲಿದೆ ಎಂಬುದರ ಜತೆಗೇ ಇನ್ನೊಂದು ಸಿಹಿ ಸುದ್ದಿಯೂ ಕೇಳಿ ಬಂದಿದೆ. ಇಲ್ಲಿನ ಪಂದ್ಯಗಳನ್ನು ವೀಕ್ಷಿಸಲು ಶೇ. 50ರಷ್ಟು ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ಸಾಧ್ಯತೆ ಇದೆ. ಆಗ ಪ್ರೇಕ್ಷಕರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗುವುದು ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮೂಲವೊಂದು ತಿಳಿಸಿದೆ.
ಯುಎಇ ಸರಕಾರದ ನಿಯಮದನ್ವಯ ಕ್ರೀಡಾಕೂಟಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹಾಜರಾಗುವ ಪ್ರೇಕ್ಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಈಗಾಗಲೇ ಬಹುತೇಕ ಜನರಿಗೆ ಇಲ್ಲಿನ ಸರಕಾರ ಲಸಿಕೆ ನೀಡಿದೆ. ಐಪಿಎಲ್ ಪುನರಾರಂಭಕ್ಕೆ ಸುಮಾರು 3 ತಿಂಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಮುಗಿದಿರುತ್ತದೆ ಮತ್ತು ಸೋಂಕಿನ ಪ್ರಮಾಣವೂ ಇಳಿಯಬಹುದು ಎಂಬುದೊಂದು ಲೆಕ್ಕಾಚಾರ. ಆಗ ಶೇ. 50ರಷ್ಟು ಪ್ರೇಕ್ಷಕರನ್ನು ಐಪಿಎಲ್ ಪಂದ್ಯಕ್ಕೆ ಹಾಜರಾಗುವಂತೆ ಮಾಡುವುದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಕಷ್ಟವಾಗದು; ಹೀಗಾಗಿ ಸರಕಾರ ಇದಕ್ಕೆ ಸಮ್ಮತಿ ಸೂಚಿಸಲಿದೆ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ :ಶಫಾಲಿ ಆಯ್ಕೆಯಿಂದ ತಂಡಕ್ಕೆ ಲಾಭ: ನಾಯಕಿ ಮಿಥಾಲಿ ರಾಜ್
ಗಂಗೂಲಿ ದುಬಾೖಗೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ದುಬಾೖಗೆ ತೆರಳಲಿದ್ದು, ಐಪಿಎಲ್ನ ಉಳಿದ ಪಂದ್ಯಗಳನ್ನು ನಡೆಸುವ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪ್ರೇಕ್ಷಕರಿಗೆ ಅನುಮತಿ ನೀಡುವ ವಿಷಯ ಚರ್ಚೆಗೆ ಬರುವ ಸಾಧ್ಯತೆಯೂ ಇದೆ.