ಬೆಂಗಳೂರಿಗರೇ ಕೂಡಲೇ ವೋಟ್ ಹಾಕಿ; ಮಧ್ಯಾಹ್ನ ಭಾರೀ ಮಳೆ ಸಾಧ್ಯತೆ! ಇಲಾಖೆ

Team Udayavani, Apr 18, 2019, 1:03 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮತದಾನ ಚುರುಕುಗೊಂಡಿದ್ದರೆ, ಬೆಂಗಳೂರು ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಶೇ.25ರಷ್ಟು ದಾಟಿಲ್ಲ. ಈ ಹಿನ್ನೆಲೆಯಲ್ಲಿ ಯುವಕ, ಯುವತಿಯರು ಸೇರಿದಂತೆ ಬೆಂಗಳೂರಿನ ಮತದಾರರು ಬೇಗ ಮತದಾನ ಮಾಡುವುದು ಉತ್ತಮ. ಯಾಕೆಂದರೆ ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ಮತದಾನಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬುಧವಾರ ಸಂಜೆ ಉದ್ಯಾನನಗರಿಯಲ್ಲಿ ಭಾರೀ ಮಳೆ ಸುರಿದಿತ್ತು. ಮತ್ತೊಂದೆಡೆ ಬಿಸಿಲ ಬೇಗೆಯಿಂದಾಗಿ ಬೆಳಗ್ಗೆ ಮತದಾನ ಬೇಡ, ಮಧ್ಯಾಹ್ನ ಹೋಗಿ ಮತದಾನ ಮಾಡಿದರಾಯಿತು ಎಂದುಕೊಂಡವರು ಕೂಡಲೇ ಮತಗಟ್ಟೆಗೆ ತೆರಳಿ ಮತದಾನ ಮಾಡುವುದು ಒಳ್ಳೆಯದು ಎಂದು ಈಗಾಗಲೇ ಮತಚಲಾಯಿಸಿದ ಹಿರಿಯ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲೂ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ಬಾರಿಯೂ ಬೆಂಗಳೂರು ನಗರ, ಕೇಂದ್ರ, ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಮತದಾರರು ನೀರಸ ಪ್ರತಿಕ್ರಿಯೆ ತೋರಿಬಂದಿದ್ದು, ಇನ್ನಾದರೂ ಮನೆಯಿಂದ ಹೊರಬಂದು ಮತಚಲಾಯಿಸಲಿ ಎಂದು ಸ್ಯಾಂಡಲ್ ವುಡ್ ನಟರು ವಿನಂತಿ ಮಾಡಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ