ಭಾರತಕ್ಕೆ ಬ್ಲ್ಯಾಕ್ ಕ್ಯಾಪ್ಸ್‌ ಚಾಲೆಂಜ್‌

ವಿಶ್ವಕಪ್‌ ಸೆಮಿಫೈನಲ್‌ಗೆ ಅಖಾಡ ಸಜ್ಜು

Team Udayavani, Jul 9, 2019, 6:00 AM IST

ಮ್ಯಾಂಚೆಸ್ಟರ್‌: ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಾಕೌಟ್‌ ಸ್ಪರ್ಧೆಗಳತ್ತ ಮುಖ ಮಾಡಿದೆ. ರೌಂಡ್‌ ರಾಬಿನ್‌ ಲೀಗ್‌ ಹಂತದಿಂದ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. 10 ತಂಡಗಳ ಸ್ಪರ್ಧೆಯೀಗ ನಾಲ್ಕಕ್ಕೆ ಇಳಿದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್‌ ಮಂಗಳವಾರ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಮುಖಾಮುಖೀಯಾಗಲಿವೆ.

ಇಲ್ಲಿಯ ತನಕ ಎಡವಿದರೂ ಮತ್ತೂಂದು ಅವಕಾಶ ಇದೆ ಎಂಬ ನಿರೀಕ್ಷೆಯಲ್ಲಿರುತ್ತಿದ್ದ ತಂಡಗಳಿಗೆ ಇನ್ನು ಮುಂದೆ ಗೆಲು ವೊಂದೇ ಮೂಲಮಂತ್ರವಾಗಲಿದೆ. ಸೋತರೆ ಕೂಟದಿಂದಲೇ ನಿರ್ಗಮಿಸಬೇಕಾದ ಕಾರಣ ಪೈಪೋಟಿ ತೀವ್ರಗೊಳ್ಳಲಿದೆ. ಕ್ರಿಕೆಟ್‌ ಅಭಿಮಾನಿಗಳ ಜೋಶ್‌ ಕೂಡ ಹೊಸ ಎತ್ತರಕ್ಕೇರಲಿದೆ.

ಎಚ್ಚರಿಕೆಯ ಹೆಜ್ಜೆ ಅಗತ್ಯ
ಇನ್ನೇನು ಭಾರತ ತಂಡ ಆತಿಥೇಯ ಇಂಗ್ಲೆಂಡನ್ನು ಎದುರಿಸುವುದು ಖಚಿತ ಎನ್ನುವಾಗಲೇ ಅಂತಿಮ ಲೀಗ್‌ ಪಂದ್ಯದ ಫ‌ಲಿತಾಂಶ ಸೆಮಿಫೈನಲ್‌ ಎದುರಾಳಿಗಳನ್ನು ಅದಲು ಬದಲು ಮಾಡಿದ್ದು ಈಗ ಇತಿಹಾಸ. ಅಷ್ಟೇನೂ ಬಲಿಷ್ಠವಲ್ಲದ, ಲೀಗ್‌ ಹಂತದ ಕೊನೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನ್ಯೂಜಿಲ್ಯಾಂಡ್‌ ತಂಡ ಎದುರಾದುದರಿಂದ ಕೊಹ್ಲಿ ಪಡೆಗೆ ಫೈನಲ್‌ ಖಾತ್ರಿ ಎಂಬುದೇ ಎಲ್ಲರ ಲೆಕ್ಕಾಚಾರ. ಆದರೆ ಭಾರತ ಮೊದಲು ಈ ಕನಸಿನ ಲೋಕದಿಂದ ಹೊರಬರಬೇಕಿದೆ.

ನಿರ್ದಿಷ್ಟ ದಿನದ ಆಟ, ಕ್ರಿಕೆಟಿಗರು ತೋರ್ಪಡಿಸುವ ಪ್ರದರ್ಶನ ಎನ್ನುವುದು ಪಂದ್ಯಕ್ಕೆ ವ್ಯತಿರಿಕ್ತ ಫ‌ಲಿತಾಂಶವನ್ನು ತಂದು ಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು. ಎದುರಾಳಿ ಅಷ್ಟೇನೂ ಬಲಿಷ್ಠವಲ್ಲ ಎಂಬುದು ತಲೆಯಲ್ಲಿದ್ದಾಗ ಭಾರತ ತೀರಾ ಸಾಮಾನ್ಯ ಮಟ್ಟದ ಪ್ರದರ್ಶನ ನೀಡಿ ಪರದಾಡುವುದಿದೆ. ಉದಾಹರಣೆಗೆ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯ. ಹೀಗಾಗಿ ಕೊಹ್ಲಿ ಪಡೆ ನ್ಯೂಜಿಲ್ಯಾಂಡನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು.

ಭಾರತವೇ ನೆಚ್ಚಿನ ತಂಡ
ಮೇಲ್ನೋಟಕ್ಕೆ ಭಾರತವೇ ಇಲ್ಲಿನ ನೆಚ್ಚಿನ ತಂಡ. ಇದಕ್ಕೆ ಕಾರಣ ಹಲವು. ಭಾರತದ ಓಪನಿಂಗ್‌ ಜೋಡಿ ಕೂಟದಲ್ಲೇ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದೆ. ವಿಶ್ವದಾಖಲೆಯ ಶತಕವೀರ ರೋಹಿತ್‌ ಶರ್ಮ ಅವರ ಪ್ರಚಂಡ ಫಾರ್ಮ್ (647 ರನ್‌), ಕೆ.ಎಲ್‌. ರಾಹುಲ್‌ ಅವರ ಜವಾಬ್ದಾರಿಯುತ ಆಟ (360 ರನ್‌) ಟೀಮ್‌ ಇಂಡಿಯಾವನ್ನು ಬಹಳ ಎತ್ತರಕ್ಕೆ ಏರಿಸಿದೆ. ವಿರಾಟ್‌ ಕೊಹ್ಲಿ ಕೂಡ ಕಪ್ತಾನನ ಆಟವನ್ನೇ ಆಡುತ್ತ ಬಂದಿದ್ದಾರೆ (442 ರನ್‌). ಹತ್ತಿರ ಹತ್ತಿರ ಸಾವಿರದೈನೂರು ರನ್‌ ಈ ಮೂವರಿಂದಲೇ ಸಂಗ್ರಹಗೊಂಡಿದೆ.

ಆದರೆ ಮ್ಯಾಂಚೆಸ್ಟರ್‌ನಲ್ಲಿ ಇವರಿಗೆ ಅಷ್ಟೇ ಘಾತಕ ಬೌಲಿಂಗ್‌ನ ಪರಿಚಯವಾಗಲಿಕ್ಕಿದೆ. ತ್ರಿವಳಿ ವೇಗಿಗಳಾದ ಲಾಕಿ ಫ‌ರ್ಗ್ಯುಸನ್‌ (17 ವಿಕೆಟ್‌), ಟ್ರೆಂಟ್‌ ಬೌಲ್ಟ್ (15 ವಿಕೆಟ್‌) ಮತ್ತು ಮ್ಯಾಟ್‌ ಹೆನ್ರಿ (10 ವಿಕೆಟ್‌) ಅವರ ದಾಳಿಯನ್ನು ಭಾರತದ ಅಗ್ರ ಕ್ರಮಾಂಕದ ಆಟಗಾರರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಫ‌ಲಿತಾಂಶದ ದಿಕ್ಸೂಚಿಯೂ ಆಗಿದೆ. ಇವರನ್ನು ಪುಡಿಗುಟ್ಟುವಲ್ಲಿ ಯಶಸ್ವಿಯಾದರೆ ಭಾರತ ಅರ್ಧ ಗೆದ್ದಂತೆ. ವಿಲಿಯಮ್ಸನ್‌-ಟೇಲರ್‌ ಅವರನ್ನು ಬೇಗನೇ ಉರುಳಿಸಿದರೆ ಪೂರ್ತಿ ಗೆದ್ದಂತೆ. ಇವರಿಬ್ಬರನ್ನು ಬಿಟ್ಟರೆ ಇಲ್ಲಿ ಕ್ರೀಸ್‌ ಆಕ್ರಮಿಸಿಕೊಳ್ಳುವವರಿಲ್ಲ.

ಮಧ್ಯಮ ಕ್ರಮಾಂಕದ ಅನುಮಾನ
ಭಾರತದ ಮಧ್ಯಮ ಕ್ರಮಾಂಕದ ಬಗ್ಗೆ ಇನ್ನೂ ಅನುಮಾನವಿದೆ. ಆದರೆ ಇವರ ಮೇಲೆ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳು ಯಾವತ್ತೂ ಒತ್ತಡ ಹಾಕಿಲ್ಲ, “30ಕ್ಕೆ 3′ ಎಂಬ ಸ್ಥಿತಿಯನ್ನು ತಂದೊಡ್ಡಿಲ್ಲ. ಹೀಗಿರುವಾಗ ಇವರೆಲ್ಲ ಚಳಿ ಹಿಡಿದವರಂತೆ ಆಡುವುದರಲ್ಲಿ ಅರ್ಥವಿಲ್ಲ.

ನ್ಯೂಜಿಲ್ಯಾಂಡಿಗೆ ಸರಿಸಾಟಿಯಾದ ಬೌಲಿಂಗ್‌ ಪಡೆ ಭಾರತದ ಬಳಿಯೂ ಇದೆ ಎಂಬುದನ್ನು ಎದೆ ತಟ್ಟಿಕೊಂಡು ಹೇಳಬಹುದು. ಶಮಿ, ಬುಮ್ರಾ, ಭುವನೇಶ್ವರ್‌, ಕುಲದೀಪ್‌, ಚಹಲ್‌, ಪಾಂಡ್ಯ ಟೀಮ್‌ ಇಂಡಿಯಾದ ಆಸ್ತಿಯಾಗಿದ್ದಾರೆ.

ಹವಾಮಾನ ವರದಿ
ಮಂಗಳವಾರ ಬೆಳಗ್ಗೆ 10 ಗಂಟೆಗೆ, ಅಂದರೆ ಟಾಸ್‌ ಹಾರಿಸುವ ವೇಳೆ ಮ್ಯಾಂಚೆಸ್ಟರ್‌ನಲ್ಲಿ ಶೇ. 50ರಷ್ಟು ಮಳೆಯ ಸಾಧ್ಯತೆ ಇದೆ ಎಂದು ಬ್ರಿಟಿಷ್‌ ಹವಾಮಾನ ಇಲಾಖೆ ವರದಿ ಮಾಡಿದೆ. ಆಗ ಪಂದ್ಯ ವಿಳಂಬವಾಗಿ ಆರಂಭವಾಗಬಹುದು. ಮೀಸಲು ದಿನವಾದ ಬುಧವಾರವೂ ಮಳೆಯ ಸಾಧ್ಯತೆ ಇದೆ. ಸೋಮವಾರ ಇಲ್ಲಿ ಮೋಡ ಕವಿದ ವಾತಾವರಣ ಇತ್ತು.

ಮ್ಯಾಂಚೆಸ್ಟರ್‌ ಅದೃಷ್ಟದ ತಾಣ
ಭಾರತಕ್ಕೆ ಮ್ಯಾಂಚೆಸ್ಟರ್‌ ಅದೃಷ್ಟದ ತಾಣ. ಇಲ್ಲಿ ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ತಂಡಗಳಿಗೆ ಕೊಹ್ಲಿ ಪಡೆ ಸೋಲುಣಿಸಿದೆ. 1983ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನು ಬಡಿದದ್ದು ಕೂಡ ಇದೇ ಅಂಗಳದಲ್ಲಿ. ಟಾಸ್‌ ಗೆಲುವು ನಿರ್ಣಾಯಕ. ಬೌಲ್ಟ್ -ಫ‌ರ್ಗ್ಯುಸನ್‌ ಅವರನ್ನು ದಿಟ್ಟವಾಗಿ ಎದುರಿಸುವ ಧೈರ್ಯವಿದ್ದರೆ ಫ‌ಸ್ಟ್‌ ಬ್ಯಾಟಿಂಗ್‌ ಉತ್ತಮ ಆಯ್ಕೆ. ಹವಾಮಾನ ಗಮನಿಸಿ ಎದುರಾಳಿಯನ್ನು ಸಾಮಾನ್ಯ ಮೊತ್ತಕ್ಕೆ ಉರುಳಿಸುವ ಯೋಜನೆಯಿದ್ದರೆ ಬೌಲಿಂಗ್‌ ಕೂಡ ಉತ್ತಮ ಆಯ್ಕೆಯಾಗಲಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಜೂ. 13ರಂದು ನಡೆಯಬೇಕಿದ್ದ ಇತ್ತಂಡಗಳ ನಡುವಿನ ಲೀಗ್‌ ಪಂದ್ಯ ಮಳೆಯಿಂದ ಕೊಚ್ಚಿಹೋಗಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಭಾರತವನ್ನು ಕೆಡವಿತ್ತು. ಆದರೆ ಲೀಗ್‌ ಹಂತದ ಕೊನೆಯಲ್ಲಿ ಅನುಭವಿಸಿದ ಹ್ಯಾಟ್ರಿಕ್‌ ಸೋಲು ನ್ಯೂಜಿಲ್ಯಾಂಡನ್ನು ಜರ್ಜರಿತಗೊಳಿಸಿದೆ.

ಮಳೆ ಬಂದರೆ, ಟೈ ಆದರೆ
1.ಎರಡೂ ಸೆಮಿಫೈನಲ್ಸ್‌ ಮತ್ತು
ಫೈನಲ್‌ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
2.ಮೊದಲ ದಿನ ಪ್ರತಿಕೂಲ ಹವಾಮಾನದಿಂದ ಪಂದ್ಯ ಅಪೂರ್ಣಗೊಂಡರೆ ಮೀಸಲು ದಿನದಂದು, ಅದೇ ಹಂತದಿಂದ ಪಂದ್ಯ ಮುಂದುವರಿಯಲಿದೆ.
3.ಮೀಸಲು ದಿನದಂದೂ ಪಂದ್ಯ ರದ್ದುಗೊಂಡರೆ ಆಗ ಲೀಗ್‌ ಹಂತದಲ್ಲಿ ಹೆಚ್ಚು ಅಂಕ ಗಳಿಸಿದ ತಂಡ ಫೈನಲ್‌ ತಲುಪುತ್ತದೆ. ಈ ಅವಕಾಶ ಭಾರತ ಮತ್ತು ಆಸ್ಟ್ರೇಲಿಯದ್ದಾಗಲಿದೆ.
4.ಮೊದಲ ದಿನ ಪಂದ್ಯ ನಿಂತರೆ ಡಿ-ಎಲ್‌
ನಿಯಮ ಅನ್ವಯವಾಗದು.
5.ಮೀಸಲು ದಿನದಂದು ಚೇಸಿಂಗ್‌ ನಡೆಸುವ ತಂಡ ಕನಿಷ್ಠ 20 ಓವರ್‌ ಬ್ಯಾಟಿಂಗ್‌ ನಡೆಸಿದ್ದರೆ ಆಗ ಡಿ-ಎಲ್‌ ನಿಯಮ ಜಾರಿಯಾಗುತ್ತದೆ.
6.ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫ‌ಲಿತಾಂಶ ನಿರ್ಧರಿಸಲಾಗುವುದು.
7.ಫೈನಲ್‌ ಪಂದ್ಯ ರದ್ದಾದರೆ ಎರಡೂ
ತಂಡಗಳನ್ನು ಜಂಟಿ ಚಾಂಪಿಯನ್ಸ್‌ ಎಂದು ಘೋಷಿಸಲಾಗುವುದು.

ಪ್ಲಸ್‌-ಮೈನಸ್‌
ಕೇನ್‌ ವಿಲಿಯಮ್ಸನ್‌-ರಾಸ್‌ ಟೇಲರ್‌ ಜೋಡಿಯ ಅತ್ಯುತ್ತಮ ಫಾರ್ಮ್.

ಬೌಲ್ಟ್, ಫ‌ರ್ಗ್ಯುಸನ್‌ ಅವರ ಘಾತಕ ಬೌಲಿಂಗ್‌ ಆಕ್ರಮಣ.

ಕೂಟದ ತಂಡಗಳಲ್ಲೇ ಅತ್ಯಂತ  ದುರ್ಬಲ ಓಪನಿಂಗ್‌.

ವಿಲಿಯಮ್ಸನ್‌, ಟೇಲರ್‌  ಬಿಟ್ಟರೆ ತಂಡವನ್ನು ಆಧರಿಸುವವರು ಇಲ್ಲದಿರುವುದು.

ರೋಹಿತ್‌-ರಾಹುಲ್‌ ಜೋಡಿಯ ಅಮೋಘ ಓಪನಿಂಗ್‌.

ಶಮಿ, ಬುಮ್ರಾ ಅವರ ಪರಿಣಾಮಕಾರಿ ಸೀಮ್‌ ಬೌಲಿಂಗ್‌.

4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಧೋನಿ ಸಹಿತ ಕೆಳ ಕ್ರಮಾಂಕದವರ ನಿಧಾನ ಗತಿಯ ಬ್ಯಾಟಿಂಗ್‌.

ಸೆಮಿಫೈನಲ್‌ ಸ್ವಾರಸ್ಯ
-ಇದು ಭಾರತದ 7ನೇ ವಿಶ್ವಕಪ್‌ ಸೆಮಿಫೈನಲ್‌. ಕಳೆದ ಆರರಲ್ಲಿ ಮೂರನ್ನು ಗೆದ್ದು, ಮೂರರಲ್ಲಿ ಸೋಲನುಭವಿಸಿದೆ. ಈ ಬಾರಿ ಗೆದ್ದರೆ 4ನೇ ಸಲ ಫೈನಲ್‌ಗೆ ಲಗ್ಗೆ ಇಡಲಿದೆ.
-ಭಾರತ ಮ್ಯಾಂಚೆಸ್ಟರ್‌ನಲ್ಲಿ ಆಡಲಿರುವ 2ನೇ ಸೆಮಿಫೈನಲ್‌ ಇದಾಗಿದೆ. 1983ರಲ್ಲಿ ಮೊದಲ ಸಲ ಸೆಮಿಗೆ ಲಗ್ಗೆ ಇಟ್ಟ ಭಾರತ ಆತಿಥೇಯ ಇಂಗ್ಲೆಂಡನ್ನು ಈ ಅಂಗಳದಲ್ಲೇ ಎದುರಿಸಿತ್ತು. ಇದನ್ನು ಕಪಿಲ್‌ ಪಡೆ 6 ವಿಕೆಟ್‌ಗಳಿಂದ ಜಯಿಸಿತ್ತು.
-ಭಾರತ-ನ್ಯೂಜಿಲ್ಯಾಂಡ್‌ ವಿಶ್ವಕಪ್‌ ಸೆಮಿಫೈನಲ್‌ಗ‌ಳಲ್ಲಿ ಮುಖಾಮುಖೀ ಆಗುತ್ತಿರುವುದು ಇದೇ ಮೊದಲು.
-ನ್ಯೂಜಿಲ್ಯಾಂಡಿಗೆ ಇದು 8ನೇ ವಿಶ್ವಕಪ್‌ ಸೆಮಿಫೈನಲ್‌. ಹಿಂದಿನ 7 ಸೆಮಿ ಸೆಣಸಾಟಗಳಲ್ಲಿ ನ್ಯೂಜಿಲ್ಯಾಂಡ್‌ ಕೇವಲ ಒಂದನ್ನಷ್ಟೇ ಗೆದ್ದಿದೆ. ಆರರಲ್ಲಿ ಸೋಲುಂಡಿದೆ.
-ನ್ಯೂಜಿಲ್ಯಾಂಡ್‌ ಮ್ಯಾಂಚೆಸ್ಟರ್‌ ಅಂಗಳದಲ್ಲಿ ಈವರೆಗೆ 2 ಸೆಮಿಫೈನಲ್‌ ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸೋತಿದೆ.

ತಂಡಗಳು
ಭಾರತ: ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌/ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ,
ಯಜುವೇಂದ್ರ ಚಹಲ್‌.

ನ್ಯೂಜಿಲ್ಯಾಂಡ್‌:
ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲ್ಯಾಥಂ, ಜಿಮ್ಮಿ ನೀಶಮ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫ‌ರ್ಗ್ಯುಸನ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ