Udayavni Special

ತಾಪಮಾನ ಏರಿಕೆಯಿಂದ ಬತ್ತಿವೆ ನದಿಗಳು! ಇಂದು ವಿಶ್ವ ನದಿಗಳ ದಿನ


Team Udayavani, Sep 26, 2021, 7:30 AM IST

ತಾಪಮಾನ ಏರಿಕೆಯಿಂದ ಬತ್ತಿವೆ ನದಿಗಳು! ಇಂದು ವಿಶ್ವ ನದಿಗಳ ದಿನ

ನೀರಿಲ್ಲದೆ ಬದುಕಿಲ್ಲ. ನೀರಿನ ಮೂಲವೇ ನದಿ. ಈಜಿಪ್ಟ್ನಿಂದ ಸಿಂಧೂ ನಾಗರಿಕತೆವರೆಗೆ ಎಲ್ಲ ನಾಗರಿಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ಹೀಗಿರುವಾಗ ನದಿಗಳಿಲ್ಲದೆ ನಾಗರಿಕತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ ನಾಗರಿಕತೆ ಬೆಳೆದಂತೆ ನದಿಗಳು ನಾಶವಾಗುತ್ತಿರುವುದು ಮಾತ್ರ ವಿಪರ್ಯಾಸ. ನದಿಗಳೇ ಜನರ ಜೀವನಾಡಿಯಾಗಿದ್ದರೂ ಮಾನವನ ಸ್ವಾರ್ಥಕ್ಕೆ ಬಲಿಯಾಗಿ ಅದೆಷ್ಟೋ ನದಿಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇದರೊಂದಿಗೆ ವಿಶ್ವದಾದ್ಯಂತ ಶುದ್ಧ ಕುಡಿಯುವ ನೀರಿಲ್ಲದೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಜಲ ಸಂರಕ್ಷಣ ಹೋರಾಟಗಾರ ಮಾರ್ಕ್‌ ಏಂಜೆಲೊ ಅವರು 1980ರಲ್ಲಿ ಪಶ್ಚಿಮ ಕೆನಡಾದಲ್ಲಿ  ಜಾಗತಿಕ ಮಟ್ಟದಲ್ಲಿ ನದಿಗಳ ದಿನಾಚರಣೆಯನ್ನು ಆಚರಿಸುವ ಪ್ರಸ್ತಾವನ್ನು ಮುಂದಿಟ್ಟಿದ್ದರು. ನೀರಿನ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ 2005ರಲ್ಲಿ “ವಾಟರ್‌ ಫಾರ್‌ ಲೈಫ್’ ಎನ್ನುವ ಸಂದೇಶದೊಂದಿಗೆ ಸೆಪ್ಟಂಬರ್‌ ತಿಂಗಳ ಕೊನೆಯ ರವಿವಾರವನ್ನು “ವಿಶ್ವ ನದಿಗಳ ದಿನ’ವೆಂದು ಘೋಷಿಸಿತು.

“ನದಿಗಳು ನಮ್ಮ ಗ್ರಹದ ಅಪಧಮನಿಗಳು: ಅವು ನಿಜವಾದ ಅರ್ಥದಲ್ಲಿ ಜೀವನಾಡಿಗಳು’ ಎನ್ನುವ ಸಂದೇಶದೊಂದಿಗೆ

ಈ ಬಾರಿಯ ವಿಶ್ವ ನದಿಗಳ ದಿನವನ್ನು  ಸೆ. 26ರಂದು ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ನೀರಿನ ಗುಣಮಟ್ಟ ಕಾಪಾಡುವುದು ಮತ್ತು ಅದರ ಅಗತ್ಯತೆಯ ಅರಿವನ್ನು ಜನರಲ್ಲಿ ಮೂಡಿಸುವುದಾಗಿದೆ.

ತಾಪಮಾನ ಹೆಚ್ಚಳ, ಮಳೆ ಮಾದರಿ ಬದಲಾದಂತೆ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಹವಾಮಾನ ವೈಪ ರೀತ್ಯದ ಪರಿಣಾಮ ತೀವ್ರ ಬಿರುಗಾಳಿಯಿಂದ ನೀರಿನ ಗುಣಮಟ್ಟ ಕುಸಿದರೆ, ಪ್ರವಾಹ ಅಪಾಯವನ್ನು ಹೆಚ್ಚುತ್ತಲೇ ಇದೆ. ಇವೆಲ್ಲವೂ ನೀರಿನ ಮಾಲಿನ್ಯದೊಂದಿಗೆ ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ.

ಹವಾಮಾನ ಬದಲಾವಣೆಗೆ  ಪರಿಸರದ ಮೇಲಣ ಮಾನವನ ದಬ್ಟಾಳಿಕೆಯೇ ಮುಖ್ಯ ಕಾರಣ ಎನ್ನುವುದು ಸ್ಪಷ್ಟ. ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಮತ್ತು ಅಂತರ್ಜಲದ ಮಟ್ಟ ಕುಸಿಯುತ್ತಿರುವುದರಿಂದಾಗಿ ಅದೆಷ್ಟೋ ಸಣ್ಣಪುಟ್ಟ ನದಿಗಳು, ಇತರ ಜಲಮೂಲಗಳು ಮಾಯವಾಗಿ ಹೋಗಿವೆ. ನೈಸರ್ಗಿಕವಾದ ಜೌಗು ಪ್ರದೇಶಗಳು, ಕಾಡು, ಹೊಳೆ, ನದಿಗಳನ್ನು ರಕ್ಷಣೆ ಮಾಡದೇ ಇರುವುದರಿಂದ ಇಂದು ಪ್ರವಾಹ, ಬಿರುಗಾಳಿ, ತಾಪಮಾನ ಹೆಚ್ಚಳ ಮತ್ತಿತರ ಪ್ರಾಕೃತಿಕ ವಿಕೋಪ, ದುರಂತಗಳು ಹೆಚ್ಚುತ್ತಲೇ ಸಾಗಿದ್ದು ಸದ್ಯೋಭವಿಷ್ಯದಲ್ಲಿ ಜೀವ ಸಂಕುಲದ ರಕ್ಷಣೆಯೇ ಬಲುದೊಡ್ಡ ಸವಾಲಾಗುವ ಸಾಧ್ಯತೆಗಳಿವೆ. ತಾಪಮಾನ ಹೆಚ್ಚಳವಂತೂ ಕೆಲವೊಂದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ.

ನೀರಿನ ಪ್ರಮಾಣ

ಹವಾಮಾನ ಬದಲಾವಣೆಯ ಮೊದಲ ಪರಿಣಾಮ ಉಂಟಾಗುವುದು ನೀರಿನ ಮೇಲೆ. ಹೀಗಾಗಿ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಾದರೆ ಮತ್ತೆ ಕೆಲವೆಡೆ ಅನಾವೃಷ್ಟಿಗೆ ಕಾರಣವಾಗುತ್ತದೆ. ಇನ್ನು ಮಳೆಯ ಮಾದರಿಯಲ್ಲೂ ಬದಲಾಗುವುದರಿಂದ ಕೆಲವೆಡೆ ಹಿಮ ಕರಗಿ ಜಲಾನಯನ ಪ್ರದೇಶಗಳೂ ಹಾನಿಗೊಳಗಾಗುತ್ತವೆ. ಹೆಚ್ಚುತ್ತಿರುವ ತಾಪಮಾನ ಕೆಲವೆಡೆ ಅತಿವೃಷ್ಟಿಗೆ ಕಾರಣವಾಗಿ ಪ್ರವಾಹ ಪರಿಸ್ಥಿತಿಯನ್ನು  ಸೃಷ್ಟಿಸಿದರೆ ಶುಷ್ಕ ಬೇಸಗೆ ನೈಸರ್ಗಿಕ ಜಲಮೂಲಗಳನ್ನು ಬರಿದು ಮಾಡಿ ಬರಕ್ಕೆ ಕಾರಣವಾಗುತ್ತದೆ. ಕೆಲವಡೆ ಹೆಚ್ಚು ಮಳೆಯಾಗಿ ಇದು ಸರಿದೂಗಿದರೆ ಇನ್ನು ಕೆಲವಡೆ ನೀರು ಆವಿಯಾಗುವುದನ್ನು ಹೆಚ್ಚಿಸುತ್ತದೆ. ಈಗಾಗಲೇ ಅಮೆರಿಕದ ಕೊಲೊರಾಡೊ ನದಿಯ ಜಲಾಶಯಗಳಲ್ಲಿ ಸರಾಸರಿ 1.8 ದಶಲಕ್ಷ ಎಕರೆ ಅಡಿ ನೀರು ಆವಿಯಾಗಿದೆ. ಇದು ನದಿಯ ವಾರ್ಷಿಕ ಹರಿವಿನ ಸುಮಾರು ಶೇ. 13ರಷ್ಟಾಗಿದೆ. ಇದು ನೀರು ಪೂರೈಕೆ ಮೇಲೆ ಪರಿಣಾಮ ಬೀರುವುದು. ಇದರಿಂದ ಮಳೆ ಅನಿಶ್ಚಿತಗೊಳ್ಳುವುದು ಮಾತ್ರವಲ್ಲ ಪ್ರಮಾಣದಲ್ಲೂ ವೈಪರೀತ್ಯಗಳು ಉಂಟಾಗುವುದು. ಅಮೆರಿಕದ ಆಗ್ನೇಯ ಭಾಗವು ಒಂದು ಕಾಲದಲ್ಲಿ ಸಮೃದ್ಧವಾದ ನೀರನ್ನು ಹೊಂದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ದಾಖಲೆಯ ಪ್ರಮಾಣದಲ್ಲಿ ಬರವನ್ನು ಅನುಭವಿಸಿದೆ.

ನೀರಿನ ಗುಣಮಟ್ಟ

ಪ್ರಬಲ ಬಿರುಗಾಳಿಗಳು ನದಿಯಲ್ಲಿ ಕಲುಷಿತ ನೀರಿನ ಹರಿವನ್ನು ಹೆಚ್ಚಿಸುತ್ತವೆ. ಮಾಲಿನ್ಯಕಾರಕ ವಸ್ತುಗಳನ್ನು ಭೂಮಿಯಿಂದ ಎತ್ತಿಕೊಂಡು ಹೋಗಿ ಹತ್ತಿರದ ಜಲಮಾರ್ಗಗಳಿಗೆ ಸಾಗಿಸುತ್ತದೆ. ಇದು ನೀರಿನ ಗುಣಮಟ್ಟದ ಮೇಲೂ ಪರಿಣಾಮ ಬೀರುವುದು. ಅಲ್ಲದೇ ನೀರಿನ ಹರಿವನ್ನು ವ್ಯತ್ಯಾಸಗೊಳಿಸುತ್ತದೆ. ಬರಗಾಲ ನೀರಿನ ಮಟ್ಟವನ್ನು ಕಡಿಮೆ ಮಾಡಿದರೆ, ಮಾಲಿನ್ಯಕಾರಕಗಳು ನೀರಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ತಾಪಮಾನದಿಂದ ಪಾಚಿ ಹೂವುಗಳು ಬೆಳೆಯುತ್ತವೆ. ಇದರಿಂದ ಜಲಚರಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಇವೆರಡೂ ಸಹಜ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.

ಬಿರುಗಾಳಿ

ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಿಂದ ಚಂಡಮಾರುತದ ತೀವ್ರತೆ ಮತ್ತು ಮರುಕಳಿಸುವಿಕೆಯನ್ನು ಹೆಚ್ಚಿಸಿದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ವಾತಾವರಣದ ಸಾಮರ್ಥ್ಯ ಕುಗ್ಗಿ ಭಾರೀ ಮಳೆ, ಪ್ರವಾಹಗಳಿಗೆ ಕಾರಣವಾಗುತ್ತಿದೆ. 1948ರ ಬಳಿಕ ವಿಶ್ವದ ಕೆಲವು ಭಾಗಗಳಲ್ಲಿ ತೀವ್ರ ಮಳೆಯೊಂದಿಗೆ ಚಂಡಮಾರುತಗಳ ಸಂಖ್ಯೆ ಶೇ.24ರಷ್ಟು ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಆತಂಕವಿದೆ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಇತ್ತೀಚಿನ 100 ವರ್ಷಗಳಲ್ಲಿಯೇ ಕಳೆದ 500 ವರ್ಷಗಳ ಪ್ರವಾಹ ಮರುಕಳಿಸಿದೆ. ಇದು ಭವಿಷ್ಯದಲ್ಲಿ ಎದುರಾಗಲಿರುವ ವಿಪತ್ತಿನ ಮುನ್ಸೂಚನೆಯಾಗಿದೆ.

ಮಾಲಿನ್ಯ ಹೆಚ್ಚಳದಿಂದ ಕುಗ್ಗುತ್ತಿದ್ದಾಳೆ ಗಂಗೆ

ಮಾಲಿನ್ಯ ಹೆಚ್ಚಳವು ಇಂಗಾಲದ ಹೊರಸೂಸುವಿಕೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಭಾರತದ ಅತೀ ದೊಡ್ಡ ನೀರಿನ ಮೂಲ, ಪ್ರಮುಖ ನದಿಯಾಗಿರುವ ಗಂಗೆಯ 100 ಎಂಎಲ್‌ ನೀರಿನಲ್ಲಿ 20 ಸಾವಿರ ಎಂಪಿಎನ್‌ ಫೆಕಲ್‌ ಕೋಲಿಫಾರ್ಮ್ (ಮಲಮೂತ್ರಗಳ ಮೂಲಕ ವಿಸರ್ಜಿಸಲ್ಪಡುವ ಕರುಳಿನಲ್ಲಿರುವ ಸೂಕ್ಷ್ಮಜೀವಿ) ಮಟ್ಟವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇದರ ಗಂಭೀರ ಪರಿಣಾಮವನ್ನು ಎಲ್ಲರೂ ಎದುರಿಸಬೇಕಾಗುತ್ತದೆ. ಯಾಕೆಂದರೆ ಮಲ ಮಾಲಿನ್ಯವು ಸಾಗರದ ಒಡಲು ಸೇರಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಗಂಗಾ ನದಿಯು ಭಾರತದಾದ್ಯಂತ ಅಂದರೆ ಹಿಮಾಲಯ ಪರ್ವತಗಳಿಂದ ಬಂಗಾಲಕೊಲ್ಲಿಯವರೆಗೆ ಸುಮಾರು 1,569 ಮೈಲುಗಳಷ್ಟು ದೂರದವರೆಗೆ ಹರಿಯುತ್ತದೆ. ಇದು ಭಾರತದ ಅತೀ ಉದ್ದದ ನದಿಯಾಗಿದೆ. ಇದು ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಮುದ್ರಕ್ಕೆ ಸೇರಿಸುವ ಎರಡನೇ ನದಿಯಾಗಿದೆ. ಇದರ  ಜಲಾನಯನ ಪ್ರದೇಶದಲ್ಲಿ ಸುಮಾರು 400 ಮಿಲಿಯನ್‌ ಜನರು ವಾಸಿಸುತ್ತಿದ್ದಾರೆ. ಅಂದರೆ ವಿಶ್ವದ ಜನಸಂಖ್ಯೆಯ 10ನೇ ಒಂದು ಭಾಗದಷ್ಟು ಜನರು ಗಂಗಾ ಮತ್ತು ಅದರ ಉಪನದಿಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಈ ನದಿ ಅತ್ಯಂತ ಕಲುಷಿತವಾಗಿದೆ.

ಇಂಗಾಲದ ಹೊರಸೂಸುವಿಕೆಯ ಪರಿಣಾಮ ಸಮುದ್ರ ಮಟ್ಟದಿಂದ ಸುಮಾರು 5 ಸಾವಿರ ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿರುವ ಹಿಮನದಿಗಳು ಕರಗುತ್ತಿರುವುದರಿಂದ ಗಂಗೋತ್ರಿ ಹಿಮನದಿಗಳಿಂದ ನೀರನ್ನು ಪಡೆಯುತ್ತಿದ್ದ ಗಂಗಾ ನದಿಯು  ಗಾತ್ರದಲ್ಲಿ ಕುಗ್ಗುತ್ತಿದೆ. 2017ರಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ನದಿ ವರ್ಷಕ್ಕೆ 22 ಮೀಟರ್‌ಗಳಷ್ಟು ಕುಗ್ಗುತ್ತಿರುವುದು ಗಮನಕ್ಕೆ ಬಂದಿದೆ. ಗಂಗೆ ಮತ್ತು ಅದರ ಉಪನದಿಗಳು ಲಕ್ಷಾಂತರ ಎಕರೆ ಕೃಷಿ ಬೆಳೆಗಳಿಗೆ ನೀರುಣಿಸುತ್ತಿವೆ. ಭಾರತದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರಿಗೆ ಆಹಾರ ಇಲ್ಲಿಂದಲೇ ಲಭ್ಯವಾಗುತ್ತಿದೆ. ಹೀಗಾಗಿ ನದಿಯ ನಿರಂತರ ಕುಗ್ಗುವಿಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಅಪಾಯದ ಮುನ್ಸೂಚನೆಯಾಗಿದೆ.

2017ರ ಒಂದು ಸಮೀಕ್ಷೆಯ ಪ್ರಕಾರ ಗಂಗಾ ನದಿಯಲ್ಲಿ ಡಾಲ್ಫಿನ್‌ಗಳ ಪ್ರಮಾಣ ಶೇ. 25ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ. ಗಂಗಾ ನದಿ ಪಾತ್ರದ ಎಂಟು ರಾಜ್ಯಗಳು ಬರವನ್ನು ಎದುರಿಸುತ್ತಿವೆ. 2050ರ ವೇಳೆಗೆ ರಾಷ್ಟ್ರೀಯ ನೀರಿನ ಬೇಡಿಕೆಯಲ್ಲಿ ಶೇ.32ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಗಂಗೆಯ ಸ್ವತ್ಛತೆಗೆ ಕ್ರಮಕೈಗೊಂಡಿದ್ದರೂ ಎಷ್ಟು ಯಶಸ್ವಿಯಾಗಬಹುದು ಎನ್ನುವುದನ್ನು ಕಾದು ನೋಡಬೇಕು.

ಹವಾಮಾನ ವೈಪರೀತ್ಯದಿಂದ ಎದುರಾಗಲಿದೆ ಪ್ರವಾಹ, ಬರ

ನೇಪಾಲ, ಬಾಂಗ್ಲಾದೇಶ ಮತ್ತು ಭಾರತದೊಂದಿಗೆ ಹಂಚಿಕೊಳ್ಳಲ್ಪಟ್ಟಿರುವ ಗಂಗಾ ಜಲಾನಯನ ಪ್ರದೇಶವು ವಿಶ್ವದ ಅತೀ ದೊಡ್ಡ ಜಲಾನಯನ ಪ್ರದೇಶಗಳಲ್ಲಿ ಒಂದಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಗಂಗೆಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ಜಲಾನಯನ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಮಾತ್ರವಲ್ಲ ಬೇಸಗೆಯಲ್ಲೂ ಈ ಪ್ರದೇಶಗಳಲ್ಲಿ ನೀರಿನ ಹರಿವು ಸ್ವಲ್ಪ ಹೆಚ್ಚಾಗಿರುತ್ತದೆ. ಅಲ್ಲದೇ ನದಿ ನೀರಿನಲ್ಲಿ ಕೆಸರು ಹೆಚ್ಚಾಗುತ್ತಿದ್ದು, ಇದು ಭವಿಷ್ಯದಲ್ಲಿ ನೀರಿನ ಕೊರತೆ ಉಂಟಾಗುವ ಲಕ್ಷಣವನ್ನು ಸೂಚಿಸುತ್ತಿದೆ. ನದಿಯಲ್ಲಿ ಮುಖ್ಯವಾಗಿ ಸಾರಜನಕ, ರಂಜಕದ ಪೋಷಕಾಂಶಗಳಲ್ಲಿ ಬದಲಾವಣೆಯಾಗಿದ್ದು ಇದು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಾಮಾಜಿಕ, ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಲಕ್ಷಣಗಳಿವೆ.

2050ರ ವೇಳೆಗೆ ಬಹುತೇಕ ಎಲ್ಲ ನದಿಗಳ ಹರಿವಿನಲ್ಲಿ ಹೆಚ್ಚಳವಾದರೆ 2090ರ ವೇಳೆಗೆ ಬಹುದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ. ಮಹಾನದಿ, ಬ್ರಹ್ಮಪುತ್ರಾ, ಮೇಘನಾ ನದಿಗಳಲ್ಲಿ 2050ರ ವೇಳೆಗೆ ಹರಿವು ಕಡಿಮೆಯಾಗಿ 2090ರ ವೇಳೆಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಡಿಮೆ ಹರಿವು ಉಂಟಾದಾಗ ಪದೇಪದೆ ಬರಗಾಲ, ಹರಿವು ಹೆಚ್ಚಾದಾಗ ಪ್ರವಾಹ ಸನ್ನಿವೇಶಗಳು ಎದುರಾಗುತ್ತದೆ ಎನ್ನುತ್ತಾರೆ ವಿಜಾnನಿಗಳು.

ತೀವ್ರ ಮಳೆ ಮತ್ತು ಹಿಮಪಾತಕ್ಕೆ ಹೆಚ್ಚು ಉಷ್ಣತೆ ಕಾರಣವಾಗುತ್ತದೆ ಮಾತ್ರವಲ್ಲದೆ ಭೂಮಿಯ ಮೇಲ್ಮೆ„ಯನ್ನು ಹೆಚ್ಚು ಒಣಗಿಸುತ್ತದೆ. ಹವಾಮಾನ ಬದಲಾವಣೆಗಳಿಗೆ ಮುಖ್ಯ ಕಾರಣ ಮಾನವನೇ ಆಗಿದ್ದಾನೆ. ಕೈಗಾರಿಕೆ,  ತಾಜ್ಯ ವಿಲೇವಾರಿ, ನೈರ್ಮಲ್ಯವಿಲ್ಲದ ಆಚರಣೆಗಳಿಂದಾಗಿಯೇ ಗಂಗೆ ಮಲಿನವಾಗುತ್ತಿದ್ದಾಳೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿ. ಹವಾಮಾನ ಬದಲಾವಣೆ ನೀರಿನ ಗುಣಮಟ್ಟ, ಜೀವವೈವಿಧ್ಯ, ಪರಿಸರ ಪ್ರಕ್ರಿಯೆಗಳ ಮೇಲೆ ಗಂಭೀರ ಪರಿಣಾಮವನ್ನೇ ಬೀರುತ್ತದೆ.

ಹವಾಮಾನದ ಬದಲಾವಣೆಗಳಿಂದ ಏನಾಗಬಹುದು ಎನ್ನುವುದಕ್ಕೆ ಈಗಾಗಲೇ ಕೆಲವು ಎಚ್ಚರಿಕೆಯ ಮುನ್ಸೂಚನೆ ಸಿಕ್ಕಿದೆ. ಉದಾ- ಹಿಮನದಿಗಳು ಕರಗುತ್ತಿರುವುದು, ಹಿಮಪಾತ, ಸಮುದ್ರ ಮಟ್ಟ ಏರುತ್ತಿರುವುದು, ಪ್ರವಾಹ, ಚಂಡಮಾರುತ, ಭೂಕುಸಿತ, ತೀವ್ರವಾಗಿ ಆಗಾಗ ಸಂಭವಿಸುವ ನೈಸರ್ಗಿಕ ವಿಪತ್ತು ಇತ್ಯಾದಿ.

ಗಂಗೆಗೆ ಪುನರುಜ್ಜೀವ ನೀಡಲು ಹಲವು ಯೋಜನೆ

ಗಂಗಾ ನದಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಅತೀ ದೊಡ್ಡ ನದಿಯಾಗಿರುವುದರಿಂದ ಲಕ್ಷಾಂತರ ಜನರ ಜೀವನೋಪಾಯಕ್ಕೆ ಆಧಾರವಾಗಿದೆ. ಇದರ ತೀರದಲ್ಲಿ  ಅನೇಕ ನಗರಗಳು ಮತ್ತು ಕೈಗಾರಿಕೆಗಳಿವೆ. ಅಣೆಕಟ್ಟುಗಳು ಮತ್ತು  ಕಾಲುವೆಗಳ ನಿರ್ಮಾಣ ದಿಂದ ನೀರಿನ ನೈಸರ್ಗಿಕ ಹರಿವಿಗೆ ತಡೆ ಒಡ್ಡಿದ್ದರಿಂದ ಗಂಗೆ ಸೇರಿದಂತೆ ಹಲವು ಮುಖ್ಯ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಅಲ್ಲದೇ ಸಂಸ್ಕರಿಸದ ಲಕ್ಷಾಂತರ ಲೀಟರ್‌ ತ್ಯಾಜ್ಯ ನೀರು ನದಿ ಸೇರಿದ್ದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತ ಹೋಯಿತು. ಇದನ್ನು ನಿಯಂತ್ರಿಸುವ ಸಲುವಾಗಿ ಭಾರತ ಸರಕಾರ 1986ರಲ್ಲಿ ಗಂಗಾ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತ್ತು. 2007ರಲ್ಲಿ ಗಂಗಾ ನದಿಯನ್ನು ವಿಶ್ವದ ಐದನೇ ಅತ್ಯಂತ ಕಲುಷಿತ ನದಿ ಎಂದು ಘೋಷಿಸಲಾಯಿತು. 2008ರಲ್ಲಿ ಗಂಗೆಗೆ ಭಾರತದ ರಾಷ್ಟ್ರೀಯ ನದಿ ಎಂಬ ಸ್ಥಾನ ನೀಡಿ ನಮಾಮಿ ಗಂಗೆ, ಸ್ವತ್ಛ ಗಂಗಾ ರಾಷ್ಟ್ರೀಯ ಮಿಷನ್‌ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ನದಿಯನ್ನು ಪುನರುಜ್ಜೀವನಗೊಳಿಸಲು ವಿವಿಧ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ.

ಉತ್ತರ ಭಾರತದ ಮೇಲೆ ಪರಿಣಾಮ

ಭಾರತದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್‌, ಪಶ್ಚಿಮ ಬಂಗಾಲ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಹೊಸದಿಲ್ಲಿ ರಾಜ್ಯಗಳಲ್ಲಿ ಗಂಗಾ ಜಲಾನಯನ ಪ್ರದೇಶವಿದೆ. ಇದು ಸರಿಸುಮಾರು 1.09 ದಶಲಕ್ಷ ಕಿ.ಮೀ. ಪ್ರದೇಶಗಳಿಗೆ ನೀರುಣಿಸುತ್ತಿದೆ. ಭಾರತೀಯ ಜನಸಂಖ್ಯೆಯ ಶೇ.44ರಷ್ಟು ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ನೀರುಣಿಸುತ್ತದೆ. ಹೀಗಾಗಿ ಗಂಗಾ ನದಿಯ ಮೇಲೆ ಹವಾಮಾನ ಬದಲಾವಣೆ ಬೀರುವ ಪರಿಣಾಮ ಉತ್ತರ ಭಾರತದ ಪ್ರಮುಖ ಭಾಗಗಳ ಮೇಲೆ ಗಂಭೀರ ಹೊಡತವನ್ನೇ ನೀಡುತ್ತದೆ.

ನದಿಗಳ ಜಗತ್ತು

ಸಣ್ಣ ತೊರೆ, ಜೌಗು ಪ್ರದೇಶ, ಜಲಮಾರ್ಗ ಸೇರಿದಂತೆ ಎಲ್ಲ ನದಿಗಳು ಒಂದೇ ತೆರನಾಗಿ ಇರುವುದಿಲ್ಲ. ಕೆಲವು ನದಿಗಳು ತಗ್ಗು ಪ್ರದೇಶಗಳು, ಕಣಿವೆಗಳನ್ನು ಸುತ್ತು ಹಾಕುತ್ತವೆ. ಇನ್ನು ಕೆಲವು ಪರ್ವತ ಪ್ರದೇಶ, ಕಾಡುಗಳಲ್ಲಿ ಸಂಚರಿಸುತ್ತವೆ. ಮತ್ತೆ ಕೆಲವು ಕೆಸರನ್ನು ತುಂಬಿಕೊಂಡು ಮರುಭೂಮಿಯ ಕಣಿವೆಗಳನ್ನೂ ಸ್ವತ್ಛಗೊಳಿಸುವ ಕಾರ್ಯ ಮಾಡುತ್ತವೆ. ಹೀಗೆ ಪ್ರತಿಯೊಂದು ನದಿಯು ತನ್ನ ಭೂದೃಶ್ಯಕ್ಕೆ ತಕ್ಕಂತೆ ವಿಶಿಷ್ಟವಾಗಿರುತ್ತದೆ. ಆದರೆ ನದಿ ಎಂದೆನಿಸಿಕೊಳ್ಳಲು ಕೆಲವೊಂದು ಮೂಲಭೂತ ಲಕ್ಷಣಗಳಿವೆ.  ಉಪನದಿಗಳು  ಕೆರೆ, ಕೊಳ ಅಥವಾ ಸಾಗರದಲ್ಲಿ ಕೊನೆಗೊಳ್ಳುವ ಬದಲು ಇನ್ನೊಂದು ನದಿಯೊಂದಿಗೆ ಸಂಗಮವಾಗುತ್ತವೆ. ಯಾವುದೇ ಒಂದು ನದಿ ದೊಡ್ಡದಾಗಿದ್ದರೆ ಅದರ ಹೆಚ್ಚಿನ ಭಾಗವು ಉಪನದಿಗಳಿಂದಲೇ ಬಂದಿರುತ್ತವೆ. ನದಿ, ಉಪನದಿಗಳನ್ನು ನಿರ್ಧರಿಸುವುದು ಹೇಗೆ ಎಂಬುದಕ್ಕೆ ಕೆಲವೊಮ್ಮೆ ಇತಿಹಾಸ ಹಾಗೂ ಇನ್ನು ಕೆಲವು ಅಂಶಗಳು ಮುಖ್ಯವಾಗಿರುತ್ತವೆ.

ಉಗಮ: ನದಿ ಪ್ರಾರಂಭವಾಗುವ ಸ್ಥಳವನ್ನು ಅದರ ತಲೆ ಎಂದೇ ಕರೆಯಲಾಗುತ್ತದೆ. ನದಿ ಎಷ್ಟೇ ದೊಡ್ಡದಾಗಿರಲಿ, ಬಲಿಷ್ಠವಾಗಿರಲಿ ಆದರೆ ಅದರ ಉಗಮ ಸ್ಥಾನದಲ್ಲಿ ಹೆಚ್ಚು ನೀರಿರುವುದಿಲ್ಲ. ಹೆಡ್‌ವಾಟರ್ಸ್‌ಗಳು ಭೂಮಿಯ ಕೆಳಭಾಗದಿಂದ ಬರುವ ನೀರಿನ ಬುಗ್ಗೆಗಳು. ಬಳಿಕ ಪರ್ವತ, ಅನಂತರ ಜೌಗು ಪ್ರದೇಶಗಳಾಗಿರುತ್ತವೆ.

ಕಾಲುವೆ: ಪರಿಸರ ಸಮತೋಲನ ಕಾಪಾಡುವಲ್ಲಿ ಕಾಲುವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನದಿ ಕಾಲುವೆಯ ಆಕಾರವು ಎಷ್ಟು ಪ್ರಮಾಣದ ನೀರು, ಎಷ್ಟು ಕಾಲ ಹರಿಯುತ್ತದೆ, ಯಾವ ಮಣ್ಣು, ಕಲ್ಲು, ಸಸ್ಯ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಮೇಲೆ ನಿರ್ಧರಿತವಾಗಿರುತ್ತವೆ. ಕೆಲವು ಕಾಲುವೆಗಳು ಅಗಲವಾಗಿದ್ದು ನಿರಂತರ ಬದಲಾಗುತ್ತಿರುತ್ತವೆ. ಇನ್ನು ಕೆಲವು ನುಣುಪಾಗಿ ಹಲವಾರು ತಿರುವುಗಳನ್ನು ಹೊಂದಿರುತ್ತವೆ. ಮತ್ತೆ ಕೆಲವು ಕಡಿದಾದ ಪ್ರದೇಶಗಳಲ್ಲಿ ಮುಖ್ಯ ದಾರಿಯಂತೆ ಉಳಿದಿರುತ್ತದೆ.

ನದಿ ದಂಡೆ: ನದಿ ಪಕ್ಕದ ಭೂಮಿಯನ್ನು ನದಿ ದಂಡೆ ಎನ್ನಲಾಗುತ್ತದೆ. ಈ ಪ್ರದೇಶ ವನ್ಯಜೀವಿಗಳು, ಪಕ್ಷಿ  ಪ್ರಭೇದಗಳಿಗೆ ಆವಾಸ ಸ್ಥಾನವನ್ನು ಒದಗಿಸುತ್ತದೆ. ಪೌಷ್ಟಿಕ ಮತ್ತು ಸಮೃದ್ಧ ಪ್ರದೇಶವಾಗಿರುವ ಈ ಸ್ಥಳ ಪ್ರವಾಹದ ಸಂದರ್ಭದಲ್ಲಿ  ಭೂ ಸವಕಳಿಯನ್ನು ತಡೆಗಟ್ಟುತ್ತದೆ ಮಾತ್ರವಲ್ಲದೆ ನಗರ, ಹೊಲಗಳಿಂದ ಬರುವ ಕಲುಷಿತ ಹರಿವನ್ನು ಶುದ್ಧೀಕರಣ ಮಾಡುವ ಕಾರ್ಯ ಮಾಡುತ್ತದೆ.

ಪ್ರವಾಹ ಪ್ರದೇಶ: ನದಿ ಸಮೀಪವಿರುವ ಸಮತಟ್ಟಾದ ಪ್ರದೇಶಗಳನ್ನು ಪ್ರವಾಹ ಪ್ರದೇಶಗಳು ಎನ್ನಲಾಗುತ್ತದೆ. ನೀರು ಹೆಚ್ಚಿರುವಾಗ ಇಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಆದರೆ ನದಿಗಳು ಪ್ರವಾಹ ಪ್ರದೇಶವನ್ನು ನಿರ್ಧರಿಸಿರುತ್ತದೆ. ಇದರಿಂದ ಪ್ರಯೋಜನವೂ ಇದೆ. ಪ್ರವಾಹ ಪ್ರದೇಶ ಗಳಲ್ಲಿ ವಾಸಿಸುವ ಪ್ರಾಣಿಗಳು, ಸಸ್ಯಗಳು ಬದುಕಲು, ಸಂತಾನೋತ್ಪತ್ತಿ ಮಾಡಲು ಪ್ರವಾಹಗಳು ಬೇಕಾಗುತ್ತವೆ. ಆರೋಗ್ಯಕರ ಪ್ರವಾಹ ಪ್ರದೇಶಗಳು ಕೆಲವೊಂದು ಸಮುದಾಯಗಳಿಗೆ ಪ್ರಯೋಜನಕಾರಿಯಾಗಿದೆ.

ನದಿ ಮುಖಜ ಭೂಮಿ: ಸಾಗರ ಸೇರುವ ನದಿಯ ಪ್ರದೇಶವನ್ನು ನದಿ ಮುಖಜ ಭೂಮಿ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಭೂಮಿ ಸಮತಟ್ಟಾಗಿರುತ್ತದೆ ಮತ್ತು ನೀರು ವೇಗವನ್ನು ಕಳೆದುಕೊಂಡು ಸುರುಳಿ ಸುತ್ತುತ್ತಿರುತ್ತದೆ. ನದಿಯು ತನ್ನ ಪ್ರಯಾಣದ ಉದ್ದಕ್ಕೂ ತೆಗೆದುಕೊಂಡು ಬಂದಿರುವ ಎಲ್ಲ ಮರಳು, ಕೆಸರನ್ನು ಇಲ್ಲಿ ಬಿಟ್ಟು ಹೋಗುತ್ತದೆ. ಇದು ಫ‌ಲವತ್ತಾಗಿದ್ದು  ಕೃಷಿ ಯೋಗ್ಯವಾಗಿರುತ್ತದೆ.

ನದಿ ಹರಿವು: ನದಿಯ ಹರಿವಿನಲ್ಲಿ ಎರಡು ಅಂಶಗಳಿವೆ. 1. ನೈಸರ್ಗಿಕ ಹರಿವು. 2. ಕಾಲುವೆ ಮೂಲಕ ಹರಿವು.

ನೈಸರ್ಗಿಕ ಹರಿವಿನಲ್ಲಿ ನೀರು ಮುಕ್ತವಾಗಿ ಹರಿಯುತ್ತಿರುತ್ತದೆ. ಕಾಲುವೆಯಲ್ಲಿ ಹರಿಯುವ ನೀರಿನ ವೇಗ ಕಡಿಮೆ. ನದಿಯ ನೈಸರ್ಗಿಕ ಹರಿವಿಗೆ ತಡೆಗಳನ್ನು ಹಾಕಿದರೆ ನೀರು ಕಲುಷಿತಗೊಳ್ಳುತ್ತದೆ, ಜಲಚರಗಳ ಅವನತಿಗೆ ಕಾರಣವಾಗುತ್ತದೆ.

ಟಾಪ್ ನ್ಯೂಸ್

cm-bommai

ಸಂಗೂರ ಸಕ್ಕರೆ ಕಾರ್ಖಾನೆ ಮುಚ್ಚುವುದರಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ: ಸಿಎಂ ಬೊಮ್ಮಾಯಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

daily-horoscope

ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

CMಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

ಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

1

ಸರ್ಕಾರಿ ಕೆಲಸ ಕೊಡಿಸುವುದಾಗಿ 500 ಮಂದಿಗೆ ವಂಚನೆ

cm-bommai

ಸಂಗೂರ ಸಕ್ಕರೆ ಕಾರ್ಖಾನೆ ಮುಚ್ಚುವುದರಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ: ಸಿಎಂ ಬೊಮ್ಮಾಯಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.