ಕೇಶವಕೃಪಾದಲ್ಲಿ ಆರ್ ಎಸ್ ಎಸ್ ಮುಖಂಡರೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ
ರಾಷ್ಟ್ರೀಯ ಕಾರ್ಯಕಾರಿಣಿಗೂ ಮುನ್ನ ಮಹತ್ವದ ಮಾತುಕತೆ
Team Udayavani, Jun 30, 2022, 3:17 PM IST
ಬೆಂಗಳೂರು: ಆರ್ ಎಸ್ ಎಸ್ ಶಕ್ತಿ ಕೇಂದ್ರ ಕೇಶವಕೃಪಾದಲ್ಲಿ ಸಂಘದ ನಾಯಕರ ಜತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಮಹತ್ವದ ಚರ್ಚೆ ನಡೆಸಿದ್ದಾರೆ. ಸಂಘದ ಮುಖಂಡರಾದ ಮುಕುಂದ್ ಮತ್ತು ಸುಧೀರ್ ಅವರೊಂದಿಗೆ ಸಿಎಂ ಬೊಮ್ಮಾಯಿ ಅವರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 2 ಮತ್ತು 3 ರಂದು ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಅದಕ್ಕೂ ಮುನ್ನ ಸಂಘದ ನಾಯಕರನ್ನು ಭೇಟಿ ಮಾಡಿರುವುದು ಗಮನ ಸೆಳೆದಿದೆ.
ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಡಾ. ಅಶ್ವಥ್ ನಾರಾಯಣ, ಪುದುಚೇರಿ ರಾಜ್ಯ ಉಸ್ತುವಾರಿ ಮತ್ತು ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ ಕಾರಣ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕಾರಿಣಿಗೆ ಗೈರಾಗಲಿದ್ದಾರೆ.