ಮಾಜಿ ಅತೃಪ್ತರ ಹಾಲಿ ಅತೃಪ್ತಿ : ಕೊಟ್ಟ ಖಾತೆಯಲ್ಲಿ ಕೆಲಸ ಮಾಡಲು ಸಿಎಂ ಸೂಚನೆ
Team Udayavani, Jan 22, 2021, 6:50 AM IST
ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಅದಲು -ಬದಲು ಬೆನ್ನಲ್ಲೇ ಬಿಜೆಪಿ ಯಲ್ಲಿ ಅಸಮಾಧಾನ ಸ್ಫೋಟಿಸಿದೆ. ಕೆಲವರು ತಮಗೊಲ್ಲದ ಖಾತೆ ನೀಡಲಾಗಿದೆ ಎಂದು ಮುನಿಸಿಕೊಂಡಿದ್ದರೆ ಕೆಲವರು ಖಾತೆ ಕಸಿದುಕೊಂಡಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ.
ಅಸಮಾಧಾನಿತರಲ್ಲಿ ವಲಸಿಗ ಸಚಿವರೇ ಹೆಚ್ಚಿರುವುದು ವಿಶೇಷ. ಅವರೆಲ್ಲರೂ ಹಿಂದಿನ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬರಲು ಕಾರಣ ರಾದವರು. ಅಂದಿನ “ಅತೃಪ್ತ’ರು ಈಗ ಮತ್ತೆ ಅತೃಪ್ತರಾಗಿದ್ದಾರೆ.
ಖಾತೆ ಹಂಚಿಕೆಗೆ ಸಚಿವರಾದ ಮಾಧುಸ್ವಾಮಿ, ಸುಧಾಕರ್, ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರೆ, ಉಮೇಶ್ ಕತ್ತಿ,
ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ ಒಪ್ಪಿಕೊಂಡಿದ್ದಾರೆ.
ಸಂಪುಟ ಸಭೆಗೆ ಚಕ್ಕರ್
ಮಾಧುಸ್ವಾಮಿ ಬಳಿ ಇದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಎರಡೂ ಖಾತೆಗಳನ್ನು ವಾಪಸ್ ಪಡೆದು, ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಿರುವುದಕ್ಕೆ ಬೇಸರಗೊಂಡು ಸಂಪುಟ ಸಭೆ ಯಿಂದ ದೂರ ಉಳಿದರು. ಸಣ್ಣ ನೀರಾವರಿ ಖಾತೆ ವಾಪಸ್ ಪಡೆಯುವುದಾದರೆ ಸಚಿವ ಸ್ಥಾನವೇ ಬೇಡ, ನಾನೇನೂ ಬಂಡಾಯ ಏಳುವುದಿಲ್ಲ. ಶಾಸಕನಾಗಿ ಮುಂದುವರಿಯುತ್ತೇನೆ ಎಂದು ಸಿಎಂ ಬಳಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ವಸತಿ ಖಾತೆ ಬೇಡಿಕೆ ಇಟ್ಟಿದ್ದ ಎಂ.ಟಿ.ಬಿ. ನಾಗರಾಜ್‌ಗೆ ಅಬಕಾರಿ ಖಾತೆ ನೀಡಿರುವುದು ಬೇಸರ ತಂದಿದೆ. ವಸತಿ ಖಾತೆ ಇಲ್ಲವೇ ಅದಕ್ಕಿಂತ ಒಳ್ಳೆಯ ಬೇರೆ ಖಾತೆ ನೀಡಿ ಎಂದು ಅವರು ಆಗ್ರಹಿಸಿದ್ದರು.
ಗೋಪಾಲಯ್ಯ ಅವರ ಖಾತೆ ಬದಲಾಯಿಸಿರುವುದಕ್ಕೆ, ಡಾ|ಸುಧಾಕರ್‌ರಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದಿದ್ದಕ್ಕೆ ಮುನಿಸಿಕೊಂಡಿದ್ದಾರೆ.
ಅಸಮಾಧಾನಗೊಂಡ ಸಚಿವರಾದ ಎಂ.ಟಿ.ಬಿ. ನಾಗರಾಜ್, ನಾರಾಯಣ ಗೌಡ, ಗೋಪಾಲಯ್ಯ ಜತೆ ಡಾ| ಸುಧಾಕರ್ ತಮ್ಮ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಕರಾವಳಿಯ ಎಸ್. ಅಂಗಾರ ಅವರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾಯೆಯನ್ನು ನೀಡಲಾಗಿದೆ.
ಯಾರಿಗೆ ಪ್ಲಸ್ ಯಾರಿಗೆ ಮೈನಸ್ :
ಪ್ಲಸ್ : ಬಸವರಾಜ್ ಬೊಮ್ಮಾಯಿ ಗೃಹ ಜತೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರ
ಸಿ.ಸಿ. ಪಾಟೀಲ್ ಗಣಿ ಖಾತೆ ಬದಲು, ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕೆ ಬದಲು ಹಿಂದುಳಿದ ವರ್ಗ
ಮೈನಸ್:
ಡಾ| ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ವಾಪಸ್
ಪ್ರಭು ಚೌವ್ಹಾಣ್ ಹಜ್ ಮತ್ತು ವಕ್ಫ್ ಖಾತೆ ವಾಪಸ್
ಯಾರಿಗೆ ಏಕೆ ಅಸಮಾಧಾನ?
ಮಾಧುಸ್ವಾಮಿ
– ತಮ್ಮ ಸ್ವಂತ ಊರು ಜೆಸಿ ಪುರ ಗ್ರಾಮದಲ್ಲಿ ಆರಂಭಿಸಿರುವ 1,200 ಕೋಟಿ ರೂ. ವೆಚ್ಚದ ಯೋಜನೆ ಪೂರ್ಣ ಗೊಳಿಸಲು ಸಣ್ಣ ನೀರಾವರಿ ಖಾತೆಯನ್ನೇ ಮುಂದುವರಿಸಬೇಕೆಂಬ ಮನವಿಗೆ ನಕಾರ
– ತನಗೆ ತಿಳಿವಳಿಕೆ ಇಲ್ಲದ ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದು ಎಂಟಿಬಿ ನಾಗರಾಜ್
– ಪ್ರಮುಖ ವಸತಿ ಖಾತೆ ಬಿಟ್ಟು ವಲಸೆ ಬಂದಿದ್ದು
– ವರ್ಷ ಕಾದರೂ ನಿರೀಕ್ಷಿತ ಖಾತೆ ನೀಡದೆ ಅಬಕಾರಿ ಖಾತೆ ನೀಡಿರುವುದು.
ಗೋಪಾಲಯ್ಯ
– ಕೊರೊನಾ ಸಂದರ್ಭ ಉತ್ತಮ ನಿರ್ವಹಣೆಗೆ ಮೆಚ್ಚುಗೆ
– ಯಾವುದೇ ಆರೋಪ, ಲೋಪ ಇಲ್ಲದಿದ್ದರೂ ಖಾತೆ ಬದಲಾಯಿಸಿದ್ದು.
ಡಾ| ಕೆ. ಸುಧಾಕರ್
– ಕೊರೊನಾ ನಿಯಂತ್ರಣದಲ್ಲಿ ಬಿಜೆಪಿ ವರಿಷ್ಠರೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗ ಒಂದು ಖಾತೆ ವಾಪಸ್ ಪಡೆದಿರುವುದು
– ಕಾರಣವಿಲ್ಲದೆ ಹಿಂಪಡೆದಿರುವುದು.
ಕೆ.ಸಿ. ನಾರಾಯಣಗೌಡ
– ಕೊಟ್ಟಿರುವ ಖಾತೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದು. ತೋಟಗಾರಿಕೆ ಇಲಾಖೆಯಲ್ಲಿ ಹೊಸ ಪ್ರಯೋಗಗಳ ನಡೆಸಲಾಗುತ್ತಿತ್ತು. ಅಲ್ಪ ಸಮಯದಲ್ಲೇ ಖಾತೆ ಬದಲಾವಣೆ
– ಹಜ್, ವಕ್ಫ್ ಖಾತೆ ನೀಡಿರುವುದು.