ಜುಲೈ, ಆಗಸ್ಟ್‌ನಲ್ಲಿ ಕೋವಿಡ್-19 ಸೋಂಕು ಹೆಚ್ಚಳ: ಶ್ರೀರಾಮುಲು
Team Udayavani, Jun 15, 2020, 9:24 PM IST
ಹರಪನಹಳ್ಳಿ: ಜುಲೈ-ಆಗಸ್ಟ್‌ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಚಿಕಿತ್ಸೆಗಾಗಿ 10 ಸಾವಿರ ಬೆಡ್ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ಮಾಜಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ ಅವರ ಪುತ್ರನ ವಿವಾಹದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿ, ಆಗಸ್ಟ್‌ನಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳುತ್ತಿವೆ. ಹೀಗಾಗಿ ಖಾಸಗಿ ಮೆಡಿಕಲ್ ಕಾಲೇಜ್ ಬೆಡ್ ಕೂಡ ಕಾಯ್ದಿರಿಸಲಾಗಿದೆ. ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
ಪುನಃ ಲಾಕ್‌ಡೌನ್ ಕುರಿತು ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ. ಕೋವಿಡ್ ಗೆ ಲಸಿಕೆ ಕಂಡು ಹಿಡಿಯುವವರೆಗೆ ಜನ ಸಹಕಾರ ಕೊಡಬೇಕು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮೂಲಕ ಜಾಗೃತರಾಗಿರಬೇಕು. ಮುಖ್ಯಮಂತ್ರಿಗಳು ಸೋಂಕು ನಿಯಂತ್ರಣಕ್ಕಾಗಿ ಚರ್ಚೆ ನಡೆಸುತ್ತಿದ್ದು, ಜನರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.
ಲಾಕ್‌ಡೌನ್‌ನಿಂದ 3 ತಿಂಗಳ ಕಾಲ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಡೀಕರಣ ಆಗಿಲ್ಲ. ಅರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಬೊಕ್ಕಸಕ್ಕೆ ನಿರೀಕ್ಷಿತ ಹಣ ಬರುತ್ತಿಲ್ಲ. ಹೀಗಾಗಿ ಕೆಲವು ಇಲಾಖೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಉಳಿತಾಯಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದ್ದು, ಯಾವುದೇ ಅಭಿವೃದ್ಧಿ ವಿಷಯ ಇಲ್ಲ. ಸದ್ಯ ಬೆಡ್, ವೆಂಟಿಲೇಟರ್, ಔಷಧ ಶೇಖರಣೆ ಮಾಡಲಾಗುತ್ತಿದೆ. ಜನರ ಜೀವ ಉಳಿಸುವುದೇ ಸರ್ಕಾರದ ಮುಖ್ಯ ಧ್ಯೇಯವೆಂದರು.