ದಲಿತ ಸಂಘಟನೆಗಳ ಬೃಹತ್ ಐಕ್ಯತ ಸಮಾವೇಶ: ದಲಿತ ಸಂಘಟನೆಗಳಿಂದ ಒಳಮೀಸಲು ಕೂಗು
Team Udayavani, Dec 6, 2022, 11:33 PM IST
ಬೆಂಗಳೂರು: ಪರಿಶಿಷ್ಟ ಜಾತಿ, ವರ್ಗಗಳಿಗೂ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕೆಂದು ದಲಿತ ಸಂಘಟನೆಗಳ ಬೃಹತ್ ಐಕ್ಯತ ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಹತ್ತು ದಲಿತ ಸಂಘಟನೆಗಳು ಹಾಗೂ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ ತೇಲ್ತುಂಬ್ಡೆ ಸಮ್ಮುಖದಲ್ಲಿ ನಡೆದ ಸಮಾವೇಶದಲ್ಲಿ ಜನಸಂಖ್ಯೆ ಗನುಗುಣವಾಗಿ ಒಳಮೀಸಲು ನೀಡಬೇಕು ಎಂಬುದೂ ಸೇರಿ 15 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಮೇಲ್ಜಾತಿಯವರಿಗೆ ನೀಡಲಾಗಿ ರುವ ಇಡಬ್ಲೂéಎಸ್ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು, ಅಸಂವಿಧಾ
ನಿಕ ತಿದ್ದುಪಡಿಯನ್ನು ರದ್ದುಗೊಳಿಸ ಬೇಕು. ಸಾಮಾಜಿಕ ನ್ಯಾಯದ ಹಿನ್ನೆಲೆ ಯಲ್ಲಿ ಮೀಸಲಾತಿ ಜಾರಿಗೊಳಿಸ ಬೇಕೆಂದು ಒತ್ತಾಯಿಸಲಾಯಿತು. ಅಸಮಾನತೆ ಮತ್ತು ಚಾತುರ್ವರ್ಣ ಪದ್ಧತಿ ಎತ್ತಿಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಲಾಯಿತು.
ನಿವೃತ್ತ ನ್ಯಾ| ಎಚ್.ಎಸ್. ನಾಗ ಮೋಹನ್ ದಾಸ್ ಮಾತನಾಡಿ, ಅಂಬೇಡ್ಕರ್ ನೀಡಿರುವ ಸಂವಿಧಾನ ಬದಲಾವಣೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಸರಕಾರ ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ ಇಷ್ಟೇ ಸುಮ್ಮನಾಗದೆ ಅದರ ಜಾರಿಗಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.ದಲಿತ ಮುಖಂಡರಾದ ಎಸ್.ಮರಿಸ್ವಾಮಿ, ಮಾವಳ್ಳಿ ಶಂಕರ್ ಮತ್ತಿತರರಿದ್ದರು.
“ಸಂವಿಧಾನ ಉಳಿವಿಗಾಗಿ ಹೋರಾಟ ನಡೆಸಬೇಕಾಗಿದೆ’
ಬೆಂಗಳೂರು: ಕಳೆದ ಆರೇಳು ವರ್ಷಗಳಿಂದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೇಲೆ ಪದೇಪದೆ ಪ್ರಹಾರ ನಡೆಯುತ್ತಲೇ ಇದ್ದು, ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ್ ತೇಲ್ತುಂಬ್ಡೆ ಹೇಳಿದ್ದಾರೆ.
ಹತ್ತು ದಲಿತ ಸಂಘಟನೆಗಳು ಒಂದಾಗಿ ಮಂಗಳವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೋರಾಟ ಮಾಡುವುದು ನಮ್ಮ ಹಕ್ಕು, ಎಲ್ಲಿವರೆಗೂ ನಾವು ಹೋರಾಟ ಮಾಡುವುದಿಲ್ಲವೋ ಅಲ್ಲಿವರೆಗೆ ನಮಗೆ ಅಧಿಕಾರ ಸಿಗುವುದಿಲ್ಲ. ಆ ಹಿನ್ನೆಲೆಯಲ್ಲಿ ನಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಿ ಎಂದು ಕರೆ ನೀಡಿದರು.
ಮೊದಲು ಸುಶಿಕ್ಷಿತರರಾಗಿ
ಅಂಬೇಡ್ಕರ್ ಅವರು ಸ್ತ್ರೀ ಶಿಕ್ಷಣ ಬಗ್ಗೆ ಮಾತನಾಡು ತ್ತಿದ್ದರು. ಸ್ತ್ರೀಯರು ಶಿಕ್ಷಣ ಪಡೆದರೆ ಮಾತ್ರ ಎಲ್ಲ ರೀತಿಯಲ್ಲಿ ಮುಂದುವರಿಯಲು ಸಾಧ್ಯ ಎಂದು ಹೇಳುತ್ತಿದ್ದರು. ಮಹಿಳೆ ಸುಶಿಕ್ಷಿತಳಾದರೆ ಸಮಾಜ ಸುಧಾರಣೆ ಆಗಲಿದೆ ಎಂದು ಹೇಳಿದ್ದಾರೆ. ಬಾಬಾ ಸಾಹೇಬರಿಗೆ ನೀವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದಾದರೆ ಮೊದಲು ಸುಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ಪಡೆಯಬೇಕೆಂದು ಹೇಳಿದರು.