ಕೊಹ್ಲಿ ಜೆರ್ಸಿ ಧರಿಸಿ ಸಂಭ್ರಮಿಸಿದ ಡೇವಿಡ್ ವಾರ್ನರ್ ಪುತ್ರಿ ಇಂಡಿ ರೇ!
Team Udayavani, Jan 31, 2021, 6:30 AM IST
ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ದೇಶ ವಿದೇಶಗಳಲ್ಲೂ ಇವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರಲ್ಲಿ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಪುತ್ರಿ ಕೂಡ ಹೌದು!
ವಾರ್ನರ್ ಅವರ ಮೂವರು ಪುತ್ರಿಯರಲ್ಲಿ ನಡುವಿನವಳಾದ ಇಂಡಿ ರೇ ಕೊಹ್ಲಿಯ ಅಪ್ಪಟ ಅಭಿಮಾನಿ. ತಂದೆಯಾಗಲಿ, ಆಸ್ಟ್ರೇಲಿಯದ ಇತರ ಕ್ರಿಕೆಟಿಗರಾಗಲಿ ಈಕೆಯ ಅಚ್ಚುಮೆಚ್ಚಿನವರಲ್ಲ. ಆದರೆ ಕೊಹ್ಲಿ ಆಟ ನೋಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ.
ಈ ಪುಟ್ಟ ಅಭಿಮಾನಿಗೆ ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅವಳೀಗ 18ನೇ ನಂಬರ್ನ ಈ ಜೆರ್ಸಿಯನ್ನು ಧರಿಸಿ ಸಂಭ್ರಮಿಸುತ್ತಿದ್ದಾಳೆ. ಮಗಳ ಈ ಫೊಟೋವನ್ನು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಟೆಸ್ಟ್ ಸರಣಿ ಸೋತರೂ ನನ್ನ ಮಗಳು ಮಾತ್ರ ಬಹಳ ಖುಷಿಯಾಗಿದ್ದಾಳೆ. ಕಾರಣ, ವಿರಾಟ್ ನೀಡಿದ ಉಡುಗೊರೆ. ಇದಕ್ಕೆ ಕೃತಜ್ಞತೆಗಳು’ ಎಂದು ವಾರ್ನರ್ ಬರೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಜತೆಗೆ ವಾರ್ನರ್ ಮತ್ತು ಕೊಹ್ಲಿಯ ಗೆಳೆತನವೂ ಇಲ್ಲಿ ಗಮನ ಸೆಳೆದಿದೆ.