ಗಡುವು ಮುಕ್ತಾಯ..ಹಿಂದೂ ರಾಷ್ಟ್ರ ಎಂದು ಘೋಷಿಸದಿದ್ರೆ ಇಂದೇ ಜಲಸಮಾಧಿ; ಪರಮಹಂಸ ಸ್ವಾಮೀಜಿ
ಅಯೋಧ್ಯೆ ಪೊಲೀಸರು ಆಚಾರ್ಯ ಪರಮಹಂಸರನ್ನು ತಡೆದು ಗೃಹಬಂಧನದಲ್ಲಿ ಇರಿಸಿದ್ದರು
Team Udayavani, Oct 2, 2021, 2:50 PM IST
ನವದೆಹಲಿ: ಭಾರತವನ್ನು “ಹಿಂದೂ ರಾಷ್ಟ್ರ” ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್, ಬೇಡಿಕೆ ಈಡೇರದಿದ್ದರೆ ಶನಿವಾರ(ಅಕ್ಟೋಬರ್ 02) ಅಯೋಧ್ಯೆಯ ಸರಯೂ ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಮತ್ತೆ ಅಖಾಡಕ್ಕೆ ‘ಕಬ್ಜ’: ನಿರೀಕ್ಷೆಯ ಪಟ್ಟಿಯಲ್ಲಿ ಪ್ಯಾನ್ ಇಂಡಿಯಾ ಚಿತ್ರ
ನೀರಿನಲ್ಲಿ ಮುಳುಗಿ ತಮ್ಮ ಜೀವವನ್ನು ಕೊನೆಗೊಳಿಸಿಕೊಳ್ಳುವುದೇ ಜಲ ಸಮಾಧಿ ಎನ್ನುತ್ತಾರೆ. ಇತ್ತೀಚೆಗಷ್ಟೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಅಕ್ಟೋಬರ್ 2ರೊಳಗೆ ಘೋಷಿಸದಿದ್ದರೆ ಸರಯೂ ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ಪರಮಹಂಸ ಆಚಾರ್ಯ ಮಹಾರಾಜ್ ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ವಿಧಿಸಿದ್ದರು.
ಅಷ್ಟೇ ಅಲ್ಲ ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದವರ ರಾಷ್ಟ್ರೀಯತೆಯನ್ನು ಅಧಿಕೃತವಾಗಿ ರದ್ದುಗೊಳಿಸಬೇಕು ಎಂದು ಆಚಾರ್ಯ ಪರಮಹಂಸ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.
ಕೇಂದ್ರ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದ ಕಾರಣದಿಂದ ಆಚಾರ್ಯ ಪರಮಹಂಸ ಅವರು ಸರಯೂ ನದಿಯಲ್ಲಿ ಜಲಸಮಾಧಿಯಾಗಲು ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.
ಆಚಾರ್ಯ ಪರಮಹಂಸ ಸ್ವಾಮೀಜಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಯಾವುದೇ ಕಾರಣಕ್ಕೂ ಹೊರ ಬರಲು ಅನುಮತಿ ನೀಡಲಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಆಜ್ ತಕ್, ಇಂಡಿಯಾ ಟುಡೇಗೆ ತಿಳಿಸಿದ್ದು, ಪೊಲೀಸರು ಕೂಡಾ ಸ್ವಾಮೀಜಿ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಕೆಲವು ತಿಂಗಳ ಹಿಂದೆ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಸಿದ್ದರಾಗಿದ್ದು, ಈ ಸಂದರ್ಭದಲ್ಲಿ ಅಯೋಧ್ಯೆ ಪೊಲೀಸರು ಆಚಾರ್ಯ ಪರಮಹಂಸರನ್ನು ತಡೆದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ವರದಿ ತಿಳಿಸಿದೆ.
ಬಳಿಕ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಆಗ್ರಹಿಸಿ 15 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು, ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿ, ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿರುವುದಾಗಿ ವರದಿ ವಿವರಿಸಿದೆ.