PWD ಪರೀಕ್ಷೆಗೆ ತಡವಾಗಿ ಬಂದ ಪರೀಕ್ಷಾರ್ಥಿಗಳು : ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದ ಆಯೋಗ
Team Udayavani, Dec 14, 2021, 1:31 PM IST
ಬೆಂಗಳೂರು : ಲೋಕೋಪಯೋಗಿ ಇಲಾಖೆಯ ಪರೀಕ್ಷೆಗೆಂದು ಕಲಬುರಗಿಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ಐದು ಗಂಟೆ ವಿಳಂಬವಾಗಿದ್ದಕ್ಕೆ ರಾಯಚೂರು ಸಮೀಪ ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಟಕಣೆ ಹೊರಡಿಸಿರುವ ಲೋಕೋಪಯೋಗಿ ಇಲಾಖೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಪ್ರಕಟಣೆಯಲ್ಲಿ ಏನಿದೆ :
ಆಯೋಗವು ಸದರಿ ಹುದ್ದೆಗಳ ಪ್ರವೇಶ ಪತ್ರವನ್ನು ಒಂದು ವಾರಕ್ಕೂ ಮೊದಲೇ ಪ್ರಕಟಿಸಿದ್ದು, ಅಲ್ಲದೇ, ಸದರಿ ಪ್ರವೇಶ ಪತ್ರಗಳಲ್ಲಿ ಪರೀಕ್ಷಾ ಉಪ ಕೇಂದ್ರಗಳನ್ನು ಹಿಂದಿನ ದಿನವೇ ನೋಡಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ಸದರಿ ಸೂಚನೆಗಳನ್ನು ಉಲ್ಲಂಘಿಸಿ ಪರೀಕ್ಷಾ ದಿನದಂದು ಪರೀಕ್ಷಾ ಉಪ ಕೇಂದ್ರಗಳಿಗೆ ತಲುಪುವಂತೆ ಪ್ರಯಾಣ ಮಾಡಿದ್ದಾರೆ.
ಡಿ.14 ರಂದು ಕಲಬುರಗಿ ಕೇಂದ್ರದಲ್ಲಿನ ಬೆಳಗ್ಗಿನ ಅಧಿವೇಶನದ ಪರೀಕ್ಷೆಗೆ ಈ ಅಭ್ಯರ್ಥಿಗಳು ಹಾಜರಾಗಲು ಸಾಧ್ಯವಾಗಿಲ್ಲವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಮಾತ್ರ ಆಯೋಗವು ಸೂಕ್ತ ನಿರ್ಣಯ ಕೈಗೊಳ್ಳುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಮಧ್ಯಾಹ್ನ ನಡೆಯುವ ಪರೀಕ್ಷೆಗೆ ಕೂಡಲೇ ಹಾಜರಾಗಲು ಸೂಚಿಸಿದೆ.