ಜನವರಿ 1ರಿಂದ ದೇಶಾದ್ಯಂತ ಫಾಸ್ಟಾಗ್ ಕಡ್ಡಾಯ : ಹೆದ್ದಾರಿ ಸಚಿವಾಲಯ ಆದೇಶ
Team Udayavani, Nov 8, 2020, 6:50 AM IST
ಹೊಸದಿಲ್ಲಿ: ಮುಂದಿನ ವರ್ಷದ ಜನವರಿ 1ರಿಂದ ದೇಶಾದ್ಯಂತ ಎಲ್ಲ ಚತುಶ್ಚಕ್ರ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.
2017ರ ಡಿ.1ಕ್ಕಿಂತ ಮುನ್ನ ಮಾರಾಟವಾದ ವಾಹನಗಳಿಗೆ ಇದು ಅನ್ವಯವಾಗಲಿದೆ. 2017ರ ಡಿಸೆಂಬರ್ನ ಅನಂತರ ಮಾರಾಟವಾದ ಎಲ್ಲ ವಾಹನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೆ ಮುನ್ನವೇ ಫಾಸ್ಟಾಗ್ ಅಳವಡಿಸಿರಲಾಗುತ್ತದೆ. ಇದೇ ವೇಳೆ ವಾಹನವು ಫಾಸ್ಟಾಗ್ ಹೊಂದಿದ್ದರೆ ಮಾತ್ರ ಅದರ ಫಿಟೆ°ಸ್ ಪ್ರಮಾಣಪತ್ರ ನವೀಕರಿಸಲಾಗುತ್ತದೆ ಎಂದೂ ಸಚಿವಾಲಯ ತಿಳಿಸಿದೆ.
ಮುಂದಿನ ವರ್ಷದಿಂದ ಮಲೇರಿಯಾ ಮುನ್ಸೂಚನೆ !
ಹೊಸದಿಲ್ಲಿ: ಮಳೆ, ಉಷ್ಣಾಂಶ, ವಾಯುಭಾರ ಕುಸಿತ ಇತ್ಯಾದಿ ಮುನ್ಸೂಚನೆಗಳನ್ನು ನೀಡುತ್ತಿದ್ದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ವರ್ಷದಿಂದ ಮಲೇರಿಯಾ ಹಾವಳಿಯ ಮುನ್ನೆಚ್ಚರಿಕೆಯನ್ನೂ ನೀಡಲಿದೆ!
“ಹವಾಮಾನ ಮುನ್ಸೂಚನೆ ಇತ್ತೀಚೆಗಿನ ಸುಧಾರಣೆಗಳು’- ವಿಚಾರ ಕುರಿತು ನೀಡಿದ ಉಪನ್ಯಾಸದಲ್ಲಿ ಹವಾಮಾನ ತಜ್ಞ ಡಾ| ಎಂ. ರಾಜೀವನ್ ಈ ಮಾಹಿತಿ ನೀಡಿದ್ದಾರೆ. ಮಳೆ ಮತ್ತು ತಾಪಮಾನಗಳು ಮಲೇರಿಯಾ ಜತೆಗೆ ನಿಕಟ ಸಂಬಂಧ ಹೊಂದಿವೆ . ಮಲೇರಿಯಾ ಮುನ್ಸೂಚನೆಯನ್ನು ಐಎಂಡಿ ಮುಂದಿನ ವರ್ಷದಿಂದ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಮಾನ್ಸೂನ್ ಸಂಬಂಧಿ ರೋಗಗಳಾದ ಡೆಂಗ್ಯೂ ಮತ್ತು ಕಾಲರಾ ಮುನ್ಸೂಚನೆಯನ್ನೂ ಮುಂಚಿತವಾಗಿ ತಿಳಿಯಬಹುದು ಎಂದಿದ್ದಾರೆ.