ಗೋವಾ ಚುನಾವಣೆ: ಮಾವ ಕಾಂಗ್ರೆಸ್ ನಿಂದ ಸೊಸೆ ಬಿಜೆಪಿಯಿಂದ ಅದೃಷ್ಟ ಪರೀಕ್ಷೆ
Team Udayavani, Jan 25, 2022, 5:07 PM IST
ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪ್ರತಾಪಸಿಂಹ ರಾಣೆ ಪೊರಿಯಮ್ ಮತ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ವಿಶೇಷವೆಂದರೆ ಪೊರಿಯಮ್ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಣೆ ಯವರ ಸೊಸೆ ಡಾ. ದಿವ್ಯಾ ರಾಣೆ ಸ್ಫರ್ಧಿಸಿದ್ದು ಒಂದೇ ಕುಟುಂಬದಿಂದ ಇಬ್ಬರು ಬೇರೆ ಬೇರೆ ಪಕ್ಷದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಪ್ರತಾಪಸಿಂಹ ರಾಣೆಯವರು ಚುನಾವಣೆಯಲ್ಲಿ ಸ್ಫರ್ಧಿಸದಂತೆ ತಡೆಯಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿದಂತೆ ಕಂಡುಬರುತ್ತಿದೆ. ಗೋವಾ ಸರ್ಕಾರವು ಪ್ರತಾಪಸಿಂಹ ರಾಣೆಗೆ ಅಜೀವ ಕ್ಯಾಬಿನೆಟ್ ಸ್ಥಾನ ನೀಡಿದ್ದು ರಾಜಕೀಯದಿಂದ ನಿವೃತ್ತಿಯಾಗಲು ದಾರಿ ಮಾಡಿಕೊಟ್ಟಂತಿತ್ತು. ಗೌರವಯುತವಾಗಿ ನಿವೃತ್ತಿಯಾಗುವಂತೆ ಸಚಿವ ವಿಶ್ವಜಿತ್ ರಾಣೆ ಕೂಡ ತಂದೆ ಪ್ರತಾಪಸಿಂಹ ರಾಣೆಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ಪ್ರತಾಪಸಿಂಹ ರಾಣೆ ತನ್ನ ಸೊಸೆಯ ವಿರುದ್ಧ ಪೊರಿಯಮ್ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಿಸಿದ್ದು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಸುಮಾರು ಐದು ದಶಕಗಳಿಂದ ಪೊರಿಯಮ್ ಪ್ರತಿನಿಧಿಸುತ್ತಿರುವ ರಾಣೆ ಅವರು ಕಾಂಗ್ರೆಸ್‌ಗೆ ನಂಬಿಗಸ್ತರಾಗಿದ್ದಾರೆ ಆದರೆ 2007 ರಿಂದ ನೆರೆಯ ವಾಲ್ಪೊಯ್ ಸ್ಥಾನವನ್ನು ಪ್ರತಿನಿಧಿಸುತ್ತಿರುವ ಅವರ ಮಗ ವಿಶ್ವಜಿತ್ 2017 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. . ಬಿಜೆಪಿ ಈಗ ವಿಶ್ವಜಿತ್ ಅವರ ಪತ್ನಿ ದಿವ್ಯಾ ಅವರನ್ನು ಪೊರಿಯಮ್‌ನಿಂದ ಕಣಕ್ಕಿಳಿಸಿದೆ.