ಎಥೆನಾಲ್ ಕುಡಿಸಿ, ಗಾಡಿ ಓಡಿಸಿ! ಪೆಟ್ರೋಲ್, ಡೀಸೆಲ್ ಬೇಡಿಕೆ ಕುಗ್ಗಿಸಲು ಮುಂದಾದ ಕೇಂದ್ರ
Team Udayavani, Mar 13, 2021, 7:25 AM IST
ಹೊಸದಿಲ್ಲಿ: ಇಂಧನ ತೈಲ ಬೆಲೆ ಬಿಸಿಯಿಂದ ಕಂಗಾಲಾದ ಗ್ರಾಹಕರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಇದು ಸಿಹಿಸುದ್ದಿ! ಪೆಟ್ರೋಲ್, ಡೀಸೆಲ್‌ನಂತೆ ಆಟೋಮೋಟಿವ್ ಸ್ವತಂತ್ರ ಇಂಧನವಾಗಿ ಜೈವಿಕ ಎಥೆನಾಲ್ (ಇ100) ಅನ್ನು ನೇರ ಮಾರಾಟಕ್ಕೆ ಬಿಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್‌ನಂಥ ಕಚ್ಚಾ ತೈಲದ ಮೇಲಿನ ಅವಲಂಬನೆ ತಗ್ಗಿಸಲು ಕೇಂದ್ರ ಸರಕಾರ “ಪರ್ಯಾಯ’ ಹಾದಿ ತುಳಿದಿದೆ. ಶೀಘ್ರವೇ ಜೈವಿಕ ಎಥೆನಾಲ್‌ನ ಮಾರಾಟಕ್ಕೆ ಸರಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಸೂಕ್ತ ಎಂಜಿನ್‌ಗಳ ನಿರ್ಮಾಣ: ಜೈವಿಕ ಎಥೆನಾಲ್‌ಗೆ ಪೂರಕವಾದ ಎಂಜಿನ್‌ಗಳನ್ನು ಹೆಚ್ಚೆಚ್ಚು ತಯಾರಿಸಿ, ಮಾರುಕಟ್ಟೆಗೆ ಪೂರೈಸುವಂತೆ ಕೇಂದ್ರ ಸರಕಾರ, ಆಟೋ ದೈತ್ಯ ಕಂಪನಿಗಳೊಂದಿಗೆ ಮಾತುಕತೆಯನ್ನೂ ನಡೆಸಿದೆ.
ಪೆಟ್ರೋಲ್ ದರ ಇಳಿಕೆ?: “ಇಂಧನ ತೈಲ ಬೇಡಿಕೆ ತಗ್ಗಿಸಲು ಕೇಂದ್ರ ರೂಪಿಸಿರುವ ಮುಕ್ತ ಮಾರುಕಟ್ಟೆ ಕಾರ್ಯವಿಧಾನ ಇದು. ಎಥೆನಾಲ್ ಬೇಡಿಕೆ ಹೆಚ್ಚಿದಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿ, ಅದರ ಬೆಲೆ ತಗ್ಗುತ್ತದೆ’ ಎನ್ನುತ್ತಾರೆ, ತಜ್ಞರು. ಹೆಚ್ಚುವರಿ ಸಕ್ಕರೆ ಮತ್ತು ಧಾನ್ಯಗಳಿಂದ ಜೈವಿಕ ಎಥೆನಾಲ್ ತಯಾರಿಸಲು ಸರಕಾರ ಯೋಜಿಸಿದೆ. ಶೇ.20 ಎಥೆನಾಲ್‌ಗೆ ಶೇ.80 ಗ್ಯಾಸೊಲಿನ್ ಮಿಶ್ರಣ ಮಾಡಿ ಇಂಧನವಾಗಿ ಬಳಸಲಿದೆ.
1. ಏನಿದು ಜೈವಿಕ ಎಥೆನಾಲ್ (ಇ100)?
ಆಟೋಮೋಟಿವ್‌ಗೆ ನೆರವಾಗಬಲ್ಲಂಥ ಜೈವಿಕ ಇಂಧನ. ಶರ್ಕರಾಂಶವಿರುವ ಸಸ್ಯ, ಕೃಷಿ ತ್ಯಾಜ್ಯ, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯ, ಭತ್ತದ ಹುಲ್ಲು, ಗೇರು ಹಣ್ಣುಗಳನ್ನು ಜೈವಿಕ ಕ್ರಿಯೆಗೊಳಪಡಿಸಿಉತ್ಪಾದಿಸುತ್ತಾರೆ.
2. ಪ್ರಸ್ತುತ ಪೆಟ್ರೋಲ್‌ಗೆ ಎಥೆನಾಲ್ ಬೆರೆಸಲಾಗುತ್ತಿದೆಯೇ?
ಹೌದು. ಲೀಟರ್‌ಗೆ ಶೇ.5ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ.
3. ಕಬ್ಬು ಬೆಳೆಗಾರರಿಗೆ ಹೆಚ್ಚು ಲಾಭವೇಕೆ?
ಕಬ್ಬಿನ ಉತ್ಪನ್ನಗಳಿಂದ ಜೈವಿಕ ಎಥೆನಾಲ್ ಅಧಿಕ ಉತ್ಪಾದನೆ ಸಾಧ್ಯ. 50 ಲಕ್ಷ ಮೆಟ್ರಿಕ್ ಟನ್ ಕಬ್ಬಿನಿಂದ 40 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಬಹುದು.
4. ಕಬ್ಬು ಉತ್ಪಾದನೆಯಲ್ಲಿ ಕರ್ನಾಟಕ ಸ್ಥಾನವೇನು?
ಅಗ್ರ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ.