ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು
Team Udayavani, Jun 29, 2022, 12:09 PM IST
ಪಾಟ್ನಾ: ರಾಜಸ್ಥಾನದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬಾತನನ್ನು ಐಸಿಸ್ ರೀತಿ ಹಾಡಹಗಲೇ ಶಿರಚ್ಛೇದ ಮಾಡಿರುವ ಪ್ರಕರಣದ ಬಗ್ಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ
ಘಟನೆ ಬಗ್ಗೆ ಟ್ವೀಟ್ ನಲ್ಲಿ ಕಿಡಿಕಾರಿರುವ ಮಾಂಝಿ, ಉದಯ್ ಪುರದಲ್ಲಿ ನಡೆದ ಕೊಲೆ ತುಂಬಾ ನೋವಿನ ಮತ್ತು ಆಘಾತಕಾರಿ ಸಂಗತಿಯಾಗಿದೆ. ದೇಶದ ಕಾನೂನು ವ್ಯವಸ್ಥೆಯಡಿ ನಿರ್ದಿಷ್ಟ ಧರ್ಮದ ಸ್ವಯಂ ಘೋಷಿತ ರಕ್ಷಕರು ಎಂದು ಕರೆಯಲ್ಪಡುವ ಆರೋಪಿಗಳ ವಿರುದ್ಧ ಶೀಘ್ರವೇ ವಿಚಾರಣೆ ನಡೆಸಿ ಅವರನ್ನು ರಸ್ತೆ ನಡುವೆ ಗಲ್ಲಿಗೇರಿಸಬೇಕು. ಈ ಮೂಲಕ ಧರ್ಮದ ಹೆಸರಿನಲ್ಲಿ ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು” ಎಂದು ಉಲ್ಲೇಖಿಸಿದ್ದಾರೆ.
ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಕೂಡಾ ಟ್ವೀಟ್ ಮಾಡಿದ್ದು, ಉದಯಪುರದಲ್ಲಿ ನಡೆದ ಅಮಾನುಷ ಕೃತ್ಯದಿಂದ ತೀವ್ರ ನೊಂದಿದ್ದೇನೆ. ಧಾರ್ಮಿಕ ಉಗ್ರವಾದ ಕೇವಲ ಯಾವುದೇ ಸಮುದಾಯವನ್ನು ಮಾತ್ರವಲ್ಲ ಅವರ ಆಲೋಚನಾ ಸಾಮರ್ಥ್ಯವನ್ನು ಕೂಡಾ ಕುರುಡರನ್ನಾಗಿ ಮಾಡಿಸುತ್ತದೆ. ಈ ಕೃತ್ಯ ಎಸಗಿದವರಿಗೆ ಕೂಡಲೇ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.
ವರದಿಯ ಪ್ರಕಾರ, ಉದಯ್ ಪುರದ ಸೂರಜ್ ಪೊಲ್ ಪ್ರದೇಶದ ನಿವಾಸಿಗಳಾದ ಗೌಸ್ ಮೊಹಮ್ಮದ್ ಮತ್ತು ಅಬ್ದುಲ್ ಜಬ್ಬಾರ್ ಟೈಲರ್ ಕನ್ನಯ್ಯಲಾಲ್ ಅಂಗಡಿಯೊಳಕ್ಕೆ ನುಗ್ಗಿ ಹರಿತವಾದ ಆಯುಧದಿಂದ ಹಲವಾರು ಬಾರಿ ಚುಚ್ಚಿ ಶಿರಚ್ಛೇದನ ಮಾಡಿದ್ದರು. ನಂತರ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಎಂದು ತಿಳಿಸಿದೆ.