ದಾರಿ ತೋರಿಸುತ್ತಲೇ ಆತ ದೇವರ ಸೇವೆ ಮಾಡಿದ!


Team Udayavani, Nov 6, 2022, 6:15 AM IST

ದಾರಿ ತೋರಿಸುತ್ತಲೇ ಆತ ದೇವರ ಸೇವೆ ಮಾಡಿದ!

ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ದಿನದಿನಕ್ಕೂ ಆರೋಗ್ಯ ಹದಗೆಡುತ್ತಾ ಹೋಗುತ್ತಿರುತ್ತದೆ. ವೈದ್ಯರು ‘ಸಾರಿ’ ಅಂದಿರುತ್ತಾರೆ. ಇಷ್ಟಾದರೂ ಒಂದು ಜೀವವನ್ನು ಕಳೆದುಕೊಳ್ಳಲು ಯಾರೂ ತಯಾರಿರುವುದಿಲ್ಲ. ಏನಾದರೂ ಪವಾಡ ನಡೆದುಬಿಡಲಿ. ಈ ವ್ಯಕ್ತಿ ಬದುಕುಳಿಯಲಿ ಎಂದೇ ಜನ ಆಸೆ ಪಡುತ್ತಾರೆ. ವೈದ್ಯರೂ-“ನಮ್ಮ ಪ್ರಯತ್ನವನ್ನೆಲ್ಲ ನಾವು ಮಾಡಿದ್ದಾಯ್ತು. ಇನ್ನೇ ನಿದ್ರೂ ದೈವೇಚ್ಛೆ. ದೇವರಲ್ಲಿ ಪ್ರಾರ್ಥಿಸುವುದಷ್ಟೇ ಈಗ ಉಳಿದಿರುವ ಮಾರ್ಗ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಜನ ಪೂಜೆಗೆ ಕೂರುತ್ತಾರೆ. ಉಪವಾಸ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಪರಿಚಿತರು, ಬಂಧುಗಳನ್ನು ಭೇಟಿಯಾಗಿ “ನೀವೂ ದೇವರಲ್ಲಿ ಪ್ರಾರ್ಥಿಸಿ. ಪ್ರಾರ್ಥನೆಗೆ ಜೀವ ಉಳಿಸುವ ಶಕ್ತಿಯಿದೆ’ ಅನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಪ್ರಾರ್ಥನೆ ಫ‌ಲಿಸಿದ ಉದಾಹರಣೆಗಳಿವೆ. ಹಾಗೆ ಬದುಕುಳಿದ ವ್ಯಕ್ತಿಯೊಬ್ಬ, ವಿಶಿಷ್ಟ ರೀತಿಯಲ್ಲಿ ಸಮಾಜದ ಋಣ ತೀರಿಸಲು ಮುಂದಾಗಿ “ಎಲ್ಲರಿಗೂ ಮಾದರಿಯಾದ’ ಕಥೆಯೊಂದು ಇಲ್ಲಿದೆ. ಅಂದಹಾಗೆ, ಇದು- “ಹೃದಯಸ್ಪರ್ಶಿ ಪ್ರಸಂಗ’ವೆಂಬ ಶೀರ್ಷಿಕೆಯಡಿ “ರೀಡರ್ಸ್‌ ಡೈಜೆಸ್ಟ್‌’ನಲ್ಲಿ ಪ್ರಕಟವಾದ ಸೈಯದ್‌ ಮಂಜೀರ್‌ ಇಮಾಮ್‌ ಅವರ ಬರೆಹದ ಭಾವಾನುವಾದ.
***
“ಎಂಟು ವರ್ಷಗಳ ಹಿಂದಿನ ಮಾತು. ನಾನವತ್ತು ದಿಲ್ಲಿಗೆ ತುಂಬ ಸಮೀಪದಲ್ಲಿರುವ ಗುರ್ಗಾಂವ್‌ ಸಿಟಿಯಲ್ಲಿದ್ದೆ. ಕಾರ್ಯನಿಮಿತ್ತ ಅಲ್ಲಿಂದ ನೋಯ್ಡಾಕ್ಕೆ ಹೋಗಬೇಕಿತ್ತು. ದಿಲ್ಲಿ ಮತ್ತು ಅದರ ಸುತ್ತಮುತ್ತಲಿನ ಊರುಗಳನ್ನು ಅದೇ ಮೊದಲ ಬಾರಿಗೆ ನೋಡುತ್ತಿದ್ದೆ. ಆ ದಿನಗಳಲ್ಲಿ ರೈಲು ಯಾವ ನಿಲ್ದಾಣದಲ್ಲಿ ನಿಲ್ಲುತ್ತದೆ ಎಂಬುದನ್ನು ಈಗಿನಂತೆ ಡಿಜಿಟಲ್‌ ಅಕ್ಷರಗಳಲ್ಲಿ ತೋರಿಸುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ ನೋಯ್ಡಾಕ್ಕೆ ಹೋಗುವ ರೈಲು ಎಲ್ಲಿ ನಿಲ್ಲುತ್ತದೆ ಎಂಬುದು ಖಚಿತವಾಗಿ ಗೊತ್ತಿರಲಿಲ್ಲ. ರೈಲುಗಳ ಆಗಮನ-ನಿರ್ಗಮನದ ಬೋರ್ಡ್‌ ಮೇಲೆ ಒಮ್ಮೆ ಕಣ್ಣಾಡಿಸಿದೆ. ರೈಲು ಬರಲು ಇನ್ನೂ 35 ನಿಮಿಷಗಳ ಸಮಯವಿದೆ ಎಂದು ಗೊತ್ತಾಯಿತು. ಇನ್ನೂ ಸಾಕಷ್ಟು ಟೈಂ ಇದೆ. ರೈಲು ನಿಲ್ಲುವ ಪ್ಲಾಟ್‌ಫಾರ್ಮ್ ಯಾವುದು ಎಂದು ಯಾರಲ್ಲಾದರೂ ವಿಚಾರಿಸಿದರಾಯ್ತು ಎಂದುಕೊಂಡೇ ರೈಲುಗಳ ಓಡಾಟದ ವೇಳಾಪಟ್ಟಿ ಇರುವ ಬೋರ್ಡ್‌ ಕಡೆಗೆ ಹೆಜ್ಜೆ ಹಾಕುತ್ತಿದ್ದೆ.

ಹೀಗಿರುವಾಗಲೇ- “ಹಲೋ ಮಿಸ್ಟರ್‌, ನೀವು ಎಲ್ಲಿಗೆ ಹೋಗಬೇಕು?’ ಎಂದು, ಅಷ್ಟು ದೂರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಪ್ರಶ್ನಿಸಿದ. ಊರಿಗೆ ಹೊಸಬನಾಗಿದ್ದ ನನಗೆ ಯಾರ ಪರಿಚಯವೂ ಇಲ್ಲದಿದ್ದುದರಿಂದ ಬಹುಶಃ ಆತ ಕೂಗಿದ್ದು ನನ್ನನ್ನಲ್ಲ ಎಂದು ಭಾವಿಸಿ ಹೆಜ್ಜೆ ಮುಂದಿಟ್ಟೆ. ಆಗಲೇ ಅದೇ ವ್ಯಕ್ತಿ ಮತ್ತೂಮ್ಮೆ ಕೇಳಿತು. “ಹಲೋ, ನಿಮಗೇ ಕಣ್ರೀ ಕೇಳ್ತಿರೋದು, ಎಲ್ಲಿಗೆ ಹೋಗ್ಬೇಕು ನೀವು?’ ಆತ ಪ್ರಶ್ನಿಸುತ್ತಿರುವುದು ನನ್ನನ್ನೇ ಎಂದು ಈಗ ಪಕ್ಕಾ ಆಯಿತು. ಅವನನ್ನೇ ನೋಡುತ್ತಾ’- ನಾನು ನೋಯ್ಡಾಕ್ಕೆ ಹೋಗಬೇಕು…’ ಅಂದೆ. ನೋಯಿಡಾದ ರೈಲು ನಾಲ್ಕನೇ ಫ್ಲಾಟ್‌ಫಾರ್ಮ್ನಲ್ಲಿ ನಿಲ್ಲುತ್ತೆ. ನೀವು ಹೀಗೇ ಮುಂದೆ ಹೋಗಿ ಎಡಕ್ಕೆ ತಿರುಗಿಕೊಳ್ಳಿ. ಅಲ್ಲಿ ಎಸ್ಕಲೇಟರ್‌ ಇದೆ. ಅದನ್ನು ಹತ್ತಿಹೋದ್ರೆ ನಾಲ್ಕನೇ ಫ್ಲಾಟ್‌ಫಾರ್ಮ್ ಕಾಣುತ್ತೆ’ ಎಂದನಾತ. ಥ್ಯಾಂಕ್ಸ್ ಎಂದು ಹೇಳಿ ನಾನು ನಾಲ್ಕು ಹೆಜ್ಜೆ ಇಡುವುದರೊಳಗೆ ಮತ್ತೆ ಅದೇ ದನಿ ಕೇಳಿಸಿತು. ಮೇಡಂ, ಗಾಬರಿಯಿಂದ ಹಾಗೆ ನೋಡ್ತಾ ಇದ್ದೀರಲ್ಲ ಯಾಕೆ? ಹೇಳಿ, ನೀವು ಎಲ್ಲಿಗೆ ಹೋಗಬೇಕು?’ ಈ ಮನುಷ್ಯನಿಗೆ, ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ದಾರಿ ತೋರಿಸುವ ಕೆಲಸ ಸಿಕ್ಕಿದೆಯಾ? ರೈಲ್ವೇ ಇಲಾಖೆ ಈಚೆಗೆ ಅಂಥದೊಂದು ಸೇವೆಯನ್ನು ಆರಂಭಿಸಿದೆಯೋ ಹೇಗೆ ಎಂಬ ಅನುಮಾನ ಬಂತು. ಈ ವಿಷಯವಾಗಿ ಯಾರನ್ನಾದರೂ ಕೇಳ್ಳೋಣ ಅಂದರೆ ನನಗೆ ಯಾರೆಂದರೆ ಯಾರೂ ಗೊತ್ತಿರಲಿಲ್ಲ. ಪತ್ರಿಕೆ ಅಥವಾ ಟಿವಿಯಲ್ಲಿ ಈ ಸಂಬಂಧವಾಗಿ ಏನಾದರೂ ಸುದ್ದಿ ಬಂದಿತ್ತಾ ಎಂದು ಯೋಚಿಸಿದೆ. ಏನೂ ನೆನಪಾಗಲಿಲ್ಲ. ನನ್ನ ರೈಲು ಬರಲು ಇನ್ನೂ 35 ನಿಮಿಷ ಸಮಯವಿತ್ತಲ್ಲ, ಅದೂ ಒಂದು ಕಾರಣವಾಗಿ ನಾನು ಅಲ್ಲಿಯೇ ನಿಂತು ನೋಡುತ್ತಿದ್ದೆ. ನಾಲ್ಕು ನಿಮಿಷಗಳಲ್ಲಿ ಆತ ಐದಾರು ಮಂದಿಗೆ ದಾರಿ ತೋರಿಸಿದ. ಅದೇ ವೇಳೆಗೆ ಅವನಿಂದ ಸಹಾಯ ಪಡೆದವರೊಬ್ಬರು “ಥ್ಯಾಂಕ್‌ ಯೂ ಮಿಸ್ಟರ್‌ ದಿಲ್ಭಾಗ್‌’ ಅಂದರು. ಆ ಮನುಷ್ಯನ ಹೆಸರು ದಿಲ್ಭಾಗ್‌ ಎಂದು ಆಗ ಗೊತ್ತಾಯಿತು. ಈ ಸಂದರ್ಭದಲ್ಲಿ ಮತ್ತೂಂದಷ್ಟು ಜನ ಯಾವ ರೈಲು ಯಾವ ಫ್ಲಾಟ್‌ಫಾರ್ಮ್ನಲ್ಲಿ ನಿಲ್ಲುತ್ತದೆ ಎಂಬುದು ಗೊತ್ತಾಗದೆ ಗೊಂದಲದಲ್ಲಿದ್ದರು. ಅದನ್ನು ಗಮನಿಸಿದ ಈತ, ಸರಸರನೆ ಹೋಗಿ ಅವರಿಗೂ ಸೂಕ್ತ ಮಾರ್ಗದರ್ಶನ ಮಾಡಿದ.

ಇದನ್ನೆಲ್ಲ ಕಂಡು ನನ್ನ ಕುತೂಹಲ ದುಪ್ಪಟ್ಟಾಯಿತು. ಬಹುಶಃ ಇದೊಂದು ಹೊಸ ಸೇವೆಯಿರಬೇಕು. ಪ್ರಯಾಣಿಕರಿಗೆ ಮಾರ್ಗದರ್ಶನ’ ಮಾಡಲು ಆಯ್ದ ನಿಲ್ದಾಣಗಳಲ್ಲಿ ಮಾತ್ರ ಇಂಥದೊಂದು ಸೇವೆಯನ್ನು ರೈಲ್ವೇ ಇಲಾಖೆ ಆರಂಭಿಸಿರ ಬಹುದು ಅನ್ನಿಸಿತು. ಈ ವಿವರವನ್ನೆಲ್ಲ ದಿಲ್ಭಾಗ್‌ನಿಂದಲೇ ತಿಳಿಯೋಣ, ಹೇಗೂ ಅರ್ಧ ಗಂಟೆ ಬಿಡುವಿದೆ. ಸುಮ್ಮನೇ ಪ್ಲಾಟ್‌ಫಾರ್ಮ್ ನಲ್ಲಿ ಕುಳಿತು ಮಾಡುವುದೇನು ಅಂದು ಕೊಂಡು ಆತನನ್ನು ಸಮೀಪಿಸಿ ಕೇಳಿದೆ. ಈ ಸೇವೆಯನ್ನು ರೈಲ್ವೇ ಡಿಪಾರ್ಟ್ಮೆಂಟ್ ಯಾವಾಗಿಂದ ಶುರು ಮಾಡಿತು?’

ದಿಲ್ಭಾಗ್‌ ಒಮ್ಮೆ ನಸುನಕ್ಕು ಹೇಳಿದ. ಇದು ಸರಕಾರಿ ಸೇವೆಯಲ್ಲ. ನಾನು ಮನಸ್ಸಂತೋಷಕ್ಕಾಗಿ, ಈ ಸಮಾಜದ ಋಣ ತೀರಿಸುವುದಕ್ಕಾಗಿ ಮಾಡ್ತಾ ಇರುವ ಕೆಲಸ…’

ನಿಮ್ಮ ಮಾತು ಅರ್ಥವಾಗಲಿಲ್ಲ ಎಂಬಂತೆ ಅವರನ್ನೇ ನೋಡಿದೆ. ಆಗ ದಿಲ್ಭಾಗ್‌ ಹೇಳಿದ. ‘ಸಾರ್‌, ನಾನು ಕ್ಯಾನ್ಸರ್‌ ಪೇಶೆಂಟ್‌. ಮೂರು ವರ್ಷಗಳ ಹಿಂದೆಯೇ ನನ್ನನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ ವೈದ್ಯರು-“ಕಾಯಿಲೆ ಬಿಗಡಾಯಿಸಿ ಬಿಟ್ಟಿದೆಯಪ್ಪಾ. ಮಾತ್ರೆ-ಇಂಜೆಕ್ಷನ್‌ನಿಂದ ವಾಸಿಯಾಗುವ ಸ್ಟೇಜ್‌ ದಾಟಿ ಮುಂದಕ್ಕೆ ಹೋಗಿಬಿಟ್ಟಿದೆ. ನಾವು ಈಗ ಅಸಹಾಯಕರು. ಮೆಡಿಕಲ್‌ ರಿಪೋರ್ಟ್‌ಗಳ ಪ್ರಕಾರ, ಇನ್ನು ಆರು ತಿಂಗಳು ಬದುಕ್ತೀಯ ನೀನು. ಹಾಗಂತ ಹೇಳ್ಳೋಕೆ ಸಂಕಟವಾಗುತ್ತೆ. ಆದ್ರೆ ರೋಗಿಗೆ ವಿಷಯ ತಿಳಿಸಬೇಕಾದದ್ದು ನಮ್ಮ ವೃತ್ತಿ ಧರ್ಮ. ಜಾಸ್ತಿ ಯೋಚಿಸಬೇಡ. ಅದರಿಂದ ಪ್ರಯೋಜನವಿಲ್ಲ. ಇರುವಷ್ಟು ದಿನ ಖುಷಿಯಿಂದ ಇರು. ಆಹಾರದಲ್ಲಿ ಪಥ್ಯ ಅನುಸರಿಸು. ವಿಲ್‌ ಪವರ್‌ ಒಂದಿದ್ರೆ ಎಲ್ಲ ಅಂದಾಜುಗಳನ್ನೂ ತಲೆಕೆಳಗು ಮಾಡಬಹುದು. ಜಾಸ್ತಿ ದಿನ ಬದುಕಬಹುದು. ನಿನಗೋಸ್ಕರ ಯಾರಾದ್ರೂ ದೇವರಲ್ಲಿ ಪ್ರಾರ್ಥಿಸಿ ಆ ಪ್ರಾರ್ಥನೆ ಫ‌ಲ ನೀಡಿದರೆ ನಿನ್ನ ಆಯಸ್ಸು ಒಂದಷ್ಟು ದಿನ ಹೆಚ್ಚುವ ಸಾಧ್ಯತೆ ಕೂಡ ಇದೆ. ಗೊತ್ತಲ್ಲ; ಪ್ರಾರ್ಥನೆಗೆ ಜೀವ ಉಳಿಸುವ ಶಕ್ತಿ ಇದೆ’ ಅಂದರು.
ಬದುಕುವ ಆಸೆ ಯಾರಿಗಿರಲ್ಲ ಹೇಳಿ? ಒಂದಷ್ಟು ದಿನ ಹೆಚ್ಚುವರಿ’ ಎಂಬಂತೆ ಬದುಕಬೇಕು ಅನ್ನಿಸಿತು. ಮರುದಿನದಿಂದಲೇ ನನ್ನ ಪರಿಚಿತರು, ಗೆಳೆಯರು ಹಾಗೂ ಬಂಧುಗಳನ್ನು ಭೇಟಿ ಮಾಡಿ ಎಲ್ಲವನ್ನೂ ಹೇಳಿಕೊಂಡೆ. ಪ್ರಾರ್ಥನೆಗೆ ಜೀವ ಉಳಿಸುವ ಶಕ್ತಿ ಇದೆಯಂತೆ. ಹಾಗಂತ ಡಾಕ್ಟರ್‌ ಕೂಡ ಹೇಳಿದ್ದಾರೆ. ನಿಮ್ಮ ಪ್ರಾರ್ಥನೆ ನನ್ನನ್ನು ಕಾಪಾಡುತ್ತೆ. ದಯವಿಟ್ಟು ನನಗಾಗಿ ಪ್ರಾರ್ಥಿಸಿ. ಬದುಕಿರುವವರೆಗೂ ನಿಮಗೆ ಋಣಿಯಾಗಿತೇìನೆ…’ ಎಂಬ ಸಂದೇಶವಿದ್ದ ಪಾಂಪ್ಲೇಟ್‌ ಹಂಚಿದೆ. ಸಾಯುವುದಂತೂ ಖಚಿತ. ನಾಲ್ಕಾರು ತಿಂಗಳು ತಡವಾಗಿ ಸಾಯುವಂಥ ಯೋಗ ನನ್ನದಾಗಲಿ ಎಂದು ಪ್ರಾರ್ಥಿಸಿದೆ. ಅಗತ್ಯವಿದ್ದ ಎಲ್ಲ ಚಿಕಿತ್ಸೆಗೂ ದೇಹವನ್ನು ಒಡ್ಡಿಕೊಂಡೆ. ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಿದೆ. ಪಥ್ಯ ಅನುಸರಿಸಿದೆ.

ಅನಂತರದ ದಿನಗಳಲ್ಲಿ ಪವಾಡವೇ ನಡೆದುಹೋಯಿತು. ನೋಡ ನೋಡು ತ್ತಲೇ ವೈದ್ಯರು ನೀಡಿದ್ದ ಗಡುವು ಮುಗಿದುಹೋಯಿತು. ಆಶ್ಚರ್ಯ; ನಾನು ಸಾಯಲಿಲ್ಲ. ಕ್ಯಾನ್ಸರ್‌ ಇದ್ದುದು ನಿಜವಾದರೂ ಹಾಸಿಗೆ ಹಿಡಿದು ನರಳುತ್ತಾ ಬದುಕುವಂಥ, ನೋಡನೋಡುತ್ತಲೇ ಕೃಶದೇಹಿ ಯಾಗು ವಂಥ ದುರವಸ್ಥೆ ನನಗೆ ಬರಲಿಲ್ಲ. ಆಗಲೇ ಕೂತು ಯೋಚಿಸಿದೆ. ಹೆಸರು, ಗುರುತು, ಪರಿಚಯವೇ ಇಲ್ಲದ ಸಾವಿರಾರು ಮಂದಿ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಅದರ ಫ‌ಲವಾಗಿಯೇ ನಾನು ಬದುಕಿ ಉಳಿದಿದ್ದೇನೆ. ಪ್ರಾರ್ಥನೆಯ ಮೂಲಕ ಈ ಸಮಾಜ ನನಗೆ ಆಯಸ್ಸು ಕೊಟ್ಟಿದೆ. ಹೊಸ ಬದುಕು ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ, ಈ ಸಮಾಜಕ್ಕೆ ನಾನು ಏನಾದರೂ ಕೊಡಬೇಕು. ಅದು ನಿಸ್ವಾರ್ಥ ಸೇವೆ ಆಗಿರಬೇಕು…’

ಹೀಗೆಲ್ಲ ಅಂದುಕೊಂಡಾಗಲೇ ನಮ್ಮ ಮನೆ ರೈಲು ನಿಲ್ದಾಣಕ್ಕೆ ಹತ್ತಿರದಲ್ಲೇ ಇರುವುದರಿಂದ, ಇಲ್ಲಿ “ಮಾರ್ಗದರ್ಶಕ’ನಾಗಿ ಸೇವೆ ಮಾಡಬಹುದು ಅನ್ನಿಸಿತು. ಮರುದಿನವೇ ರೈಲ್ವೇ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಬದುಕಿನ ಕಥೆ ಮತ್ತು ಇನ್ನು ಮುಂದೆ ನಾನು ಮಾಡಬೇಕು ಅಂದುಕೊಂಡಿರುವ ಸೇವೆಯ ಕುರಿತು ಹೇಳಿಕೊಂಡೆ. ಅವರು ಸಂಭ್ರಮದಿಂದಲೇ ಒಪ್ಪಿಗೆ ನೀಡಿದರು. ಆವತ್ತಿನಿಂದ, ಅಂದರೆ ಕಳೆದ ಮೂರು ವರ್ಷಗಳಿಂದ ಹೀಗೆ, ಅಪರಿಚಿತ ಪ್ರಯಾಣಿಕರಿಗೆ “ದಾರಿ ತೋರಿಸುವ’ ಮೂಲಕ ಸಮಾಜದ ಋಣ ತೀರಿಸ್ತಾ ಇದೀನಿ. ಕ್ಯಾನ್ಸರ್‌ ಈಗಲೂ ನನ್ನೊಂದಿಗಿದೆ. ಇವತ್ತಲ್ಲ ನಾಳೆ ನಾನು ಸತ್ತು ಹೋಗಬಹುದು. ಆದರೆ ಇಷ್ಟು ದಿನಗಳ ಅವಧಿಯಲ್ಲಿ ಸಾಧ್ಯ ವಾದ ಮಟ್ಟಿಗೆ ಸಮಾಜದ ಋಣ ತೀರಿಸಿದೆ ಎಂಬ ಆತ್ಮತೃಪ್ತಿ ನನಗಿದೆ…’

ನಿರಂತರವಾಗಿ ಮಾತಾಡಿದ್ದರಿಂದ ಆಯಾಸವಾಯೆನೋ. ದಿಲ್ಭಾಗ್‌ ಒಮ್ಮೆ ದೀರ್ಘ‌ವಾಗಿ ಉಸಿರೆಳೆದುಕೊಂಡು ಸುಮ್ಮನೇ ನಿಂತ. ಸೇವೆಯೇ ಜೀವನ ಎಂದು ನಂಬಿರುವ ಜನ ಹೇಗೆಲ್ಲ ಇರುತ್ತಾರಲ್ಲವೇ? ಅಂದು  ಕೊಳ್ಳುತ್ತಲೇ ದಿಲ್ಭಾಗ್‌ನ ಪಕ್ಕದಲ್ಲಿದ್ದ ಬ್ಯಾಗನ್ನೊಮ್ಮೆ ನೋಡಿದೆ. ಅದು ಹಣ್ಣು, ಬಿಸ್ಕತ್‌- ಬ್ರೆಡ್‌ಗಳಿಂದ ತುಂಬಿತ್ತು. ಓಹೋ, ಈತ ಸಣ್ಣ ಮಟ್ಟದ ವ್ಯಾಪಾರಿಯಿರಬೇಕು. ಸೇವೆಯ ಜತೆಗೇ ನಾಲ್ಕು ಕಾಸು ಸಂಪಾದನೆ ಮಾಡುವುದು ಈತನ ಉದ್ದೇಶವಿರಬೇಕು ಅಂದುಕೊಂಡೇ ಕೇಳಿದೆ. “ಇಡೀ ದಿನ ಅವರಿವರಿಗೆ ದಾರಿ ತೋರಿಸುವುದರಲ್ಲೇ ಕಳೆದು ಹೋಗುತ್ತಲ್ಲ ನೀವು ಈ ಬ್ರೆಡ್‌, ಬಿಸ್ಕತ್‌, ಹಣ್ಣನ್ನೆಲ್ಲ ಮಾರಾಟ ಮಾಡುವುದು ಯಾವಾಗ?’ಈ ಮಾತು ಕೇಳಿ ಅವರು ಮುಗುಳ್ನಕ್ಕು, ಇದು ಮಾರುವುದ ಕ್ಕಲ್ಲ. ಹಂಚಲಿಕ್ಕೆ ತಂದಿರೋದು. ರೈಲ್ವೇ ನಿಲ್ದಾಣದ ಸ್ವತ್ಛತಾ ಕೆಲಸ ಮಾಡುವ ಕಾರ್ಮಿಕರು ಇದ್ದಾ ರಲ್ಲ, ಅವರು ಸಂಜೆಯಾಗು ತ್ತಿದ್ದಂತೆಯೇ ಮನೆಗೆ ಹೊರಡುತ್ತಾರೆ. ಮನೆಗಳಲ್ಲಿರುವ ಮಕ್ಕಳು, ಅಮ್ಮಂದಿರು ಬರುವುದನ್ನೇ ಕಾಯುತ್ತಾ ಇರುತ್ತವೆ. ಮಕ್ಕಳು ದೇವರ ಸಮಾನ ತಾನೆ? ನನಗೆ ಹೆಚ್ಚಿನ ಆಯಸ್ಸು ಕರುಣಿಸಿದವನು ಭಗವಂತ. ಹಸಿದು ಕುಳಿತ ಮಕ್ಕಳಿಗೆ, ಅಮ್ಮಂದಿರಿಂದ ಸಿಹಿ ತಿನ್ನಿಸುವ ಮೂಲಕ ಆ ದೇವರ ಋಣವನ್ನೂ ಕಿಂಚಿತ್ತಾದರೂ ತೀರಿಸಬಹುದು ಅನ್ನಿಸಿದೆ. ಹಾಗಾಗಿ ನನ್ನ ಉಳಿತಾಯದ ಹಣದಲ್ಲಿ ಹಣ್ಣು, ಬ್ರೆಡ್‌ ಖರೀದಿಸಿ ಕೂಲಿ ಕೆಲಸದವರ ಮಕ್ಕಳಿಗೆ ಕೊಟ್ಟು ಕಳಿಸ್ತೇನೆ…’

ಇದಿಷ್ಟು ವಿವರಣೆ ಕೇಳಿದ ಬಳಿಕ ದಿಲ್ಭಾಗ್‌ನ ಕುರಿತು ಹೆಮ್ಮೆ ಯುಂಟಾಯಿತು. ಈತ ಅಸಾಮಾನ್ಯ ವ್ಯಕ್ತಿ ಅನ್ನಿಸಿತು. ನನ್ನ ಪರಿಚಯ ಹೇಳಿಕೊಂಡೆ. ನಿಮ್ಮ ನಿಸ್ವಾರ್ಥ ಸೇವೆ, ಅದರ ಹಿಂದಿ ರುವ ಉದ್ದೇಶ ಇಡೀ ಸಮಾಜಕ್ಕೆ ಮಾದರಿ ಆಗುವಂಥದು. ನೀವು ನಿಜವಾದ ಹೀರೋ ಎಂದು ಅಭಿನಂದಿಸಿದೆ. ಸಾಧ್ಯವಾದರೆ ಮತ್ತೂಮ್ಮೆ ಸಿಗೋಣ ಸಾರ್‌ ಅನ್ನುತ್ತಾ ಫ್ಲಾಟ್‌ಫಾರ್ಮ್ ಕಡೆ ಹೆಜ್ಜೆ ಹಾಕಿದೆ…

-ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.