ಸ್ಮಾರ್ಟ್ ಸಿಟಿ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಹಸುರು ನಿಶಾನೆ
Team Udayavani, Mar 16, 2021, 5:50 AM IST
ಮಹಾನಗರ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪುನರಾ ರಂಭಿಸಲು ಹೈಕೋರ್ಟ್ ಸೋಮವಾರ ಹಸುರು ನಿಶಾನೆ ತೋರಿಸಿದ್ದು, ಅಲ್ಲಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಮಂಗಳವಾರದಿಂದ ಪ್ರಾರಂಭಗೊಳ್ಳುವ ಸಾಧ್ಯತೆಯಿದೆ.
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜ ನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯಲ್ಲಿ ನಿರ್ಮಾಣ ಹಂತದ ತ್ಯಾಜ್ಯ ನಿರ್ವಹಣೆಯನ್ನು ಸಮ ರ್ಪಕವಾಗಿ ಮಾಡುತ್ತಿಲ್ಲ ಎನ್ನುವ ಆರೋಪದ ಮೇಲೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಯಾಗಿದ್ದು, ಈ ಅರ್ಜಿ ವಿಚಾರಣೆ ವೇಳೆ, ನಿರ್ಮಾಣ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಂಡುಕೊಳ್ಳುವವರೆಗೆ ಪ್ರಗತಿಯಲ್ಲಿರುವ ಕಾಮಗಾರಿಕೆಯನ್ನು ಮುಂದುವರಿಸುವುದು ಬೇಡ ಎನ್ನುವ ಅಭಿಪ್ರಾಯವನ್ನು ನ್ಯಾಯಾ ಲಯ ನೀಡಿತ್ತು. ಅದರಂತೆ, ಹಲವೆಡೆ ಪ್ರಗತಿಯಲ್ಲಿದ್ದ ಒಳಚರಂಡಿ, ರಸ್ತೆ ಕಾಂಕ್ರೀಟ್ ಕಾಮಗಾರಿ ಸಹಿತ ಸುಮಾರು 34 ರೀತಿಯ ಕಾಮಗಾರಿಗಳನ್ನು ಎರಡೂವರೆ ತಿಂಗಳಿನಿಂದ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಅಂದರೆ ಫೆಬ್ರವರಿ ತಿಂಗಳಲ್ಲಿ ಪರಿಣತ ರಾಷ್ಟ್ರೀಯ ಪರಿಸರ ಎಂಜಿನಿಯರ್ ಸಂಸ್ಥೆಯ (ನೀರಿ) ತಂಡವು ಮಂಗಳೂರಿಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಾಸ್ತವಾಂಶವನ್ನು ಪರಿಶೀಲಿತ್ತು. ಅಲ್ಲದೆ, ಈ ಬಗ್ಗೆ ಸಮೀಕ್ಷೆ ನಡೆಸಿದ ತಂಡವು, ಮಂಗಳೂರಿನಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಚಟುವಟಿಕೆಗಳ ತ್ಯಾಜ್ಯ ವಿಲೇವಾರಿ ಅಸಮರ್ಪಕವಾಗಿದೆ ಎಂದು ಅಭಿಪ್ರಾಯಪಟ್ಟು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಮುಂದು ವರಿಸ ಬೇಕಾದರೆ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿತ್ತು.
“ನೀರಿ’ ತಂಡದ ವರದಿಯಲ್ಲಿ ಉಲ್ಲೇಖೀಸಿರುವ ಷರತ್ತು ಪಾಲಿಸಿಕೊಂಡು ಕಾಮಗಾರಿ ಮುಂದುವರಿಸಲು ಸಿದ್ಧವಿರು ವುದಾಗಿ ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ನಿರ್ಮಾಣ ಚಟುವಟಿಕೆಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೆಲವು ಮಾನದಂಡಗಳಿದ್ದು, ಅವುಗಳ ಪ್ರಕಾರವೇ ವಿಲೇವಾರಿ ಮಾಡುವ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕೆಂದು’ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಸ್ಮಾರ್ಟ್ ಸಿಟಿ ವತಿಯಿಂದ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದು ಸಲ್ಲಿಸಲಾಗಿತ್ತು. ಸೋಮವಾರ ಹೈಕೋರ್ಟ್ ಈ ಮುಚ್ಚಳಿಕೆಯಲ್ಲಿನ ವಿವರಗಳನ್ನು ಪರಿಶೀಲಿಸಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುಂದು ವರಿಸಬಹುದೆಂದು ಆದೇಶ ನೀಡಿದೆ.
ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲು ಹೈಕೋರ್ಟ್ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಸರ ಎಂಜಿನಿಯರ್ ಸಂಸ್ಥೆಯ (ನೀರಿ) ಮೂವರು ತಜ್ಞರನ್ನು ಒಳಗೊಂಡ ತಂಡ ಕಳೆದ ಜನವರಿ ಕೊನೆಯ ವಾರದಲ್ಲಿ 3 ದಿನಗಳ ಕಾಲ ಮಂಗಳೂರಿನ 34 ಕಡೆಗಳಲ್ಲಿ ಪರಿಶೀಲನೆ ನಡೆಸಿತ್ತು. ಪಚ್ಚನಾಡಿಗೂ ತಂಡ ಭೇಟಿ ನೀಡಿತ್ತು. ಮಂಗಳೂರು ನಗರದಲ್ಲಿ ಯಾವೆಲ್ಲ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್‌ಸಿಟಿ ಕಾಮಗಾರಿ ಯಾವ ಹಂತದಲ್ಲಿದೆ, ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನೀರಿ ತಂಡದ ಸದಸ್ಯರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಾಸ್ತವ ಸ್ಥಿತಿಯ ವರದಿಯನ್ನು ಫೆಬ್ರವರಿ ಯಲ್ಲಿ ಹೈಕೋರ್ಟಿಗೆ ಸಲ್ಲಿಸಿದ್ದರು.
ಲೋಪ ಸರಿಪಡಿಸಲು ಸೂಚನೆ
ಈ ತನ್ಮಧ್ಯೆ ಫೆ.24 ರಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ) ನಡೆಸಿ ಸ್ಮಾರ್ಟ್‌ಸಿಟಿ ಕಾಮಗಾರಿಯ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಿ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಪುನರಾರಂಭಿಸಲು ಕ್ರಮ ವಹಿಸ ಬೇಕೆಂದು ಸೂಚಿಸಿದ್ದರು.
ಮಳೆಗಾಲ ಪ್ರಾರಂಭಕ್ಕೂ ಮುನ್ನ ಮುಗಿಯಲಿ
ಕಳೆದ ಎರಡೂವರೆ ತಿಂಗಳಿನಿಂದ ನ್ಯಾಯಾಲಯದ ತೀರ್ಮಾನ ಪ್ರಸ್ತಾವಿಸಿ ನಗರದೆಲ್ಲೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಕಾಮಗಾರಿ ಮುಂದು ವರಿಸುವುದಕ್ಕೆ ಅನುಮತಿ ನೀಡಲಾಗಿದ್ದು, ಬಾಕಿಯಾಗಿರುವ ಕಾಮಗಾರಿಗಳು ಶೀಘ್ರ ಪ್ರಾರಂಭವಾಗುವ ನಿರೀಕ್ಷೆಯಿದೆ. ಗಮನಾರ್ಹವೆಂದರೆ, ಇನ್ನು ಮಳೆಗಾಲ ಪ್ರಾರಂಭಕ್ಕೆ ಕೇವಲ ಎರಡೂವರೆ ತಿಂಗಳಷ್ಟೇ ಇದ್ದು, ಅಷ್ಟರೊಳಗೆ ಕೆಲವೊಂದು ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಹುದೊಡ್ಡ ಸವಾಲು ಹಾಗೂ ಹೊಣೆಗಾರಿಕೆ ಸ್ಮಾರ್ಟ್‌ಸಿಟಿ ನಿಗಮದ ಮುಂದೆಯಿದೆ. ಏಕೆಂದರೆ, ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದ 34 ಕಾಮಗಾರಿಗಳ ಪೈಕಿ ಕೆಲವೊಂದನ್ನು ಮಳೆ ಪ್ರಾರಂಭಕ್ಕೂ ಮೊದಲೇ ಮುಗಿಸದೆ ಹೋದರೆ, ನಗರವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಿರುವಾಗ, ಸ್ಮಾರ್ಟ್‌ಸಿಟಿ ನಿಗಮವು ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಸೀಮಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂಬುದು “ಸುದಿನ’ ಕಾಳಜಿಯಾಗಿದೆ.
ತತ್‌ಕ್ಷಣ ಕಾಮಗಾರಿ ಶುರು
“ನೀರಿ’ ತಂಡದ ವರದಿ ಆಧಾರದಲ್ಲಿ ಮುಂದುವರಿಯುತ್ತೇವೆ ಎಂಬುದಾಗಿ ನಾವು ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಸಿದ್ಧಪಡಿಸಿ ನ್ಯಾಯಾ ಲಯಕ್ಕೆ ಸಲ್ಲಿಸಿದ್ದೆವು. ಅದನ್ನು ಪರಿಶೀಲಿಸಿದ ನ್ಯಾಯಾಲಯವು ಇದೀಗ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುಂದುವರಿಸಬಹುದೆಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣದಿಂದ ಕಾಮಗಾರಿ ಆರಂಭಿಸಲಾಗುವುದು. ಮಳೆಗಾಲ ಸಮೀಪಿಸುವುದರ ಒಳಗಾಗಿ ಪ್ರಮುಖ ಕಾಮಗಾರಿಗಳನ್ನು ಮುಕ್ತಾಯ ಮಾಡುವ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ನಡೆಸಲಾಗುವುದು.
-ಪ್ರೇಮಾನಂದ ಶೆಟ್ಟಿ, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂ. 5ರಂದು ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ
ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ
ಜೂ. 1: ಮೂಡುಬಿದಿರೆಗೆ ಮುಖ್ಯಮಂತ್ರಿ ಬೊಮ್ಮಾಯಿ; ವಿದ್ಯಾರ್ಥಿಗಳ ಜತೆಗೆ ಸಂವಾದ