ಹೋಟೆಲ್ ಉದ್ಯಮ ಪಾಲುದಾರಿಕೆ: ಸ್ನೇಹಿತನ ಕೊಲೆ
Team Udayavani, May 14, 2022, 10:52 AM IST
ಬೆಂಗಳೂರು: ಸಾಲದ ಕಂತಿನ ಇಎಂಐ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಥಣಿಸಂದ್ರ ನಿವಾಸಿ ಜಯಕುಮಾರ್ (31) ಕೊಲೆಯಾದವ. ಕೃತ್ಯ ಎಸಗಿದ ರಾಯಿಲ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜಯಕುಮಾರ್ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ರಾಯಿಲ್ ಬೇರೆ ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದಾರೆ. ಈ ಹಿನ್ನೆಲೆ ಪಾಲುದಾರಿಕೆಯಲ್ಲಿ ಹೋಟೆಲ್ ಉದ್ಯಮ ನಡೆಸಲು ಸಿದ್ಧತೆ ನಡೆಸಿದ್ದರು. ಹೀಗಾಗಿ ಜಯಕುಮಾರ್, ಬ್ಯಾಂಕ್‌ವೊಂದರಲ್ಲಿ 19.60 ಲಕ್ಷ ರೂ. ಸಾಲ ಕೊಡಿಸಿದ್ದ. ಏಳು ತಿಂಗಳಿಂದ ಇಎಂಐ ಪಾವತಿಸಿದ್ದ ರಾಯಿಲ್ ಏಪ್ರಿಲ್ ತಿಂಗಳ ಇಎಂಐ ಪಾವತಿ ಮಾಡಿರಲಿಲ್ಲ.
ಇದನ್ನೂ ಓದಿ:ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ : ಇಬ್ಬರ ಬಂಧನ
ಈ ವಿಚಾರ ಸಂಬಂಧ ಗುರುವಾರ ಸಂಜೆ ಕಾಚರಕನಹಳ್ಳಿಯ ಸಿಎಂಆರ್ ಕಾಲೇಜು ಸಮೀಪದಲ್ಲಿ ಜಯಕುಮಾರ್ ಮತ್ತು ರಾಯಿಲ್ ನಡುವೆ ಗಲಾಟೆಯಾಗಿದೆ. ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ರಾಯಿಲ್, ಚಾಕುವಿನಿಂದ ಜಯ ಕುಮಾರ್ ಎದೆಗೆ ಇರಿದು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.