ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ
ವರಿಷ್ಠರ ಅಂಗಣಕ್ಕೆ ಕ್ಯಾಬಿನೆಟ್, ಆಕಾಂಕ್ಷಿಗಳು ಕೇಳುವುದು ಸಹಜ ಎಂದ ಸಿಎಂ
Team Udayavani, Jan 24, 2022, 11:13 AM IST
ಬೆಂಗಳೂರು : ಸಂಪುಟ ವಿಸ್ತರಣೆ ವಿಚಾರ ಪಕ್ಷದ ವರಿಷ್ಠರ ಗಮನದಲ್ಲಿ ಇದ್ದು, ಅವರು ಕರೆದಾಗ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಕೆಲ ಶಾಸಕರು ಸಂಪುಟ ವಿಸ್ತರಣೆಯನ್ನು ತಕ್ಷಣ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸಂಪುಟ ವಿಸ್ತರಣೆ ವಿಚಾರಣೆಯನ್ನು ಹೈಕಮಾಂಡ್ ಅಂಗಳಕ್ಕೆ ದಾಟಿಸುವ ಮೂಲಜ ಸಿಎಂ ಬೊಮ್ಮಾಯಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.
ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದೆ. ಇದು ನನ್ನ ಗಮನದಲ್ಲಿದೆ. ವರಿಷ್ಠರೂ ಇದನ್ನು ಗಮನಿಸಿದ್ದಾರೆ. ಅವರು ಕರೆದಾಗ ದಿಲ್ಲಿಗೆ ತೆರಳಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಬೊಮ್ಮೆಯಿ ಅವರ ಈ ಹೇಳಿಕೆಯಿಂದ ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎಂಬುದು ಖಾತ್ರಿಯಾದಂತಾಗಿದೆ. ಫೆಬ್ರುವರಿ ತಿಂಗಳಲ್ಲಿ ಸಿಎಂ ಬಜೆಟ್ ಸಿದ್ದತೆಯಲ್ಲಿ ತೊಡಗಿಕೊಂಡರೆ, ವರಿಷ್ಠರು ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಲಿದ್ದಾರೆ. ಹೀಗಾಗಿ ಏಪ್ರೀಲ್ ಬಳಿಕವೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ.
ನಿರಾಸೆ
ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಬೇಕಿದ್ದ ಬಿಜೆಪಿ ವರಿಷ್ಠರು ಈಗ ಉತ್ತರ ಪ್ರದೇಶ, ಉತ್ತರ ಖಂಡ,ಮಣಿಪುರ, ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ. ಫೆಬ್ರವರಿ ಮೊದಲ ವಾರದಿಂದ ಚುನಾವಣಾ ಕಸರತ್ತು ತಾರಕಕ್ಕೆ ಏರುತ್ತದೆ. ಹೀಗಾಗಿ ಸಹಜ ಸ್ಥತಿಯಲ್ಲಿರುವ ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕೊಸರಾಟಕ್ಕೆ ಇಂಬು ನೀಡದೇ ಇರಲು ವರಿಷ್ಠರು ನಿರ್ಧರಿಸಿದ್ದಾರೆ.
ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರಕ್ರಿಯೆ ಏಪ್ರೀಲ್ ಮೊದಲವಾರ ನಡೆಯಬಹುದು ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸದ್ಯಕ್ಕೆ ದಿಲ್ಲಿ ಪ್ರವಾಸ ಇಲ್ಲ ಎಂದು ಸಿಎಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲಿಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಸದ್ಯಕ್ಕೆ ನನೆಗುದಿಗೆ ಬಿದ್ದಂತಾಗಿದೆ.
ಉತ್ಸಾಹವಿಲ್ಲ
ಕುತೂಹಲಕಾರಿ ಸಂಗತಿ ಎಂದರೆ ಸಂಪುಟ ಸೇರ್ಪಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಆಕಾಂಕ್ಷಿಗಳಿಗೆ ಈಗ ಮೊದಲಿನ ಉತ್ಸಾಹ ಉಳಿದಿಲ್ಲ. ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಶ್ರೀಮಂತರಾವ್ ಪಾಟೀಲ್ ಹೊರತುಪಡಿಸಿ ಹಳೆಯ ಆಕಾಂಕ್ಷಿಗಳು ಈಗ ಹೊಸ ಬೇಡಿಕೆ ಇಟ್ಟಿಲ್ಲ. ಚುನಾವಣಾ ವರ್ಷ ನಿಧಾನಕ್ಕೆ ಪ್ರವೇಶವಾಗುತ್ತಿದೆ. ಹೀಗಾಗಿ ಕ್ಷೇತ್ರ ಗಟ್ಟಿ ಮಾಡಿಕೊಳ್ಳುವುದಕ್ಕೆ ಎಲ್ಲರೂ ಗಮನ ನೀಡುತ್ತಿದ್ದಾರೆ. ಸಂಪುಟಕ್ಕೆ ಸೇರ್ಪಡೆ ಅವಕಾಶ ಅದಾಗಿಯೇ ಸಿಕ್ಕರೆ ನೋಡೋಣ. ಇಲ್ಲವಾದರೆ ಲಾಬಿ ಮಾಡುವುದು ಬೇಡ ಎಂಬ ಮನಸ್ಥಿತಿಗೆ ಹೆಚ್ಚಿನ ಶಾಸಕರು ಬಂದಿದ್ದಾರೆ. ಬೆಳಗಾವಿ ಶಾಸಕ ಅಭಯ ಪಾಟೀಲ್ ಬಹಿರಂಗವಾಗಿಯೇ ಈ ಹೇಳಿಕೆ ನೀಡಿದ್ದಾರೆ. ಮಾಡುವುದಿದ್ದರೆ ಈಗಲೇ ಸಂಪುಟ ವಿಸ್ತರಣೆಯಾಗಲಿ. ಒಬ್ಬರು ಸಚಿವರಾಗಿ ಸಾಮರ್ಥ್ಯ ತೋರುವುದಕ್ಕೆ ಕನಿಷ್ಠ ಎರಡು ವರ್ಷ ಬೇಕು ಎಂದು ಹೇಳಿದ್ದಾರೆ.