ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಪತಿ
Team Udayavani, Dec 6, 2020, 9:27 PM IST
ಹನೂರು (ಚಾಮರಾಜನಗರ): ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಸೌದೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ತಾಲೂಕಿನ ರಾಮಾಪುರ ಸಮೀಪದ ಗೆಜ್ಜಲನತ್ತ ಗ್ರಾಮದಲ್ಲಿ ಜರುಗಿದೆ.
ಗೆಜ್ಜಲನತ್ತ ಗ್ರಾಮದ ಅರವಿಂದ್‍ಕುಮಾರ್(22) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು ಅದೇ ಗ್ರಾಮದ ಮುರುಗೇಶ(41) ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಏನಿದು ಘಟನೆ: ತಾಲೂಕಿನ ಗೆಜ್ಜಲನತ್ತ ಗ್ರಾಮದ ಮುರುಗೇಶ ಎಂಬಾತ ಆದೇ ಗ್ರಾಮದ ಪುಷ್ಪಾ ಎಂಬಾಕೆಯನ್ನು ಕಳೆದ 17 ವರ್ಷದ ಹಿಂದೆ ವಿವಾಹವಾಗಿದ್ದ. ಈ ಇಬ್ಬರಿಗೂ 15 ವರ್ಷದ ಒಂದು ಹೆಣ್ಣು ಮಗಳೂ ಇದ್ದು, ಮುರುಗೇಶ ಚಾಮರಾಜನಗರ ಸಮೀಪದ ಕರಿಕಲ್ಲು ಕ್ವಾರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ಮಧ್ಯೆ ಪುಷ್ಪಾಳಿಗೆ ಅದೇ ಗ್ರಾಮದ ಅರವಿಂದ್ ಕುಮಾರ್ ಎಂಬಾತನ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಅನೈತಿಕ ಸಂಬಂಧ ತಿರುಗಿದೆ.
ಶನಿವಾರ ತಡರಾತ್ರಿ ಮುರುಗೇಶ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಆತನ ಮನೆಯಲ್ಲಿಯೇ ಅರವಿಂದ್ ಕುಮಾರ್ ಮತ್ತು ಪುಷ್ಪಾ ಜೊತೆಗಿರುವುದು ಕಂಡುಬಂದಿದೆ. ಇದರಿಂದ ಕುಪಿತನಾದ ಮುರುಗೇಶ ಸೌದೆಯನ್ನು ತೆಗೆದು ಆತನ ತಲೆ ಮತ್ತು ಕಾಲಿನ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆತ ತೀವ್ರ ಗಾಯಗೊಂಡಿದ್ದು, ಗಲಾಟೆಯ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ಗಾಯಾಳುವಿಗೆ ಹೋಲಿಕ್ರಾಸ್ ಮತ್ತು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪೊಲೀಸರಿಂದ ಸ್ಥಳ ಪರಿಶೀಲನೆ: ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಮನೋಜ್‍ಕುಮಾರ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಳಿಕ ನಾಪತ್ತೆಯಾಗಿರುವ ಆರೋಪಿ ಮುರುಗೇಶನ ಪತ್ತೆಗಾಗಿ ಎಎಸ್‍ಐ ಲಿಂಗರಾಜು ಅವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.