ದೇಶ ಶಿವಸೇನೆಯ ಪ್ರಧಾನಿಯನ್ನು ನೋಡುತ್ತಿತ್ತು: ಬಿಜೆಪಿಗೆ ಬಿಟ್ಟು ಕೊಟ್ಟೆವು ಎಂದ ರಾವುತ್
Team Udayavani, Jan 24, 2022, 12:17 PM IST
Image and News Source : ANI News
ಮುಂಬಯಿ : ಉತ್ತರ ಭಾರತದಿಂದ ಬಿಜೆಪಿಗೆ ಸ್ಪರ್ಧಿಸಲು ಬಿಡದಿದ್ದರೆ ಶಿವಸೇನೆಯ ಪ್ರಧಾನಿಯನ್ನು ದೇಶ ನೋಡಬಹುದಿತ್ತು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ.
“ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ದಿದ್ದೇವೆ. ಬಾಬರಿ ಮಸೀದಿ ಪ್ರಕರಣದ ನಂತರ ಉತ್ತರ ಭಾರತದಲ್ಲಿ ಶಿವಸೇನೆಯ ಅಲೆ ಇತ್ತು, ಆ ಸಮಯದಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ದೇಶದಲ್ಲಿ ಶಿವಸೇನೆ ಪ್ರಧಾನಿ ಇರುತ್ತಿದ್ದರು ಆದರೆ ನಾವು ಅದನ್ನು ಬಿಜೆಪಿಗೆ ಬಿಟ್ಟುಕೊಟ್ಟೆವು ” ಎಂದು ಎ ಎನ್ ಐ ಸುದ್ದಿ ಸಂಸ್ಥೆ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿಯ ಭಾಗವಾಗಿ ಶಿವಸೇನೆ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ ನಂತರ ಶಿವಸೇನೆ ಮತ್ತು ಬಿಜೆಪಿ ನಡುವಿನ ವಾಕ್ ಸಮರದ ನಡುವೆ ಸಂಜಯ್ ರಾವುತ್ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕೇವಲ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸುತ್ತದೆ ಎಂದು ರಾವುತ್ ಕಿಡಿ ಕಾರಿದ್ದಾರೆ.
ಬಿಜೆಪಿ ತಿರುಗೇಟು
ಹಿಂದುತ್ವದ ಬಗ್ಗೆ ಉಪನ್ಯಾಸ ನೀಡುವ ಮೊದಲು, ಉದ್ಧವ್ ಠಾಕ್ರೆ ಅವರು ರಾಜಕೀಯ ಮತ್ತು ಜೀವನದಲ್ಲಿ ತಮ್ಮ ಪಕ್ಷ ಎಂದಿಗೂ ಕಾಂಗ್ರೆಸ್ ಸೇರುವುದಿಲ್ಲ,ಅಂತಹ ಸಂದರ್ಭಗಳು ಎದುರಾದರೆ, ಪಕ್ಷದ ಕಚೇರಿಯನ್ನು ಲಾಕ್ ಮಾಡಲು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದ ದಿವಂಗತ ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ಶಿವಸೇನೆ ಅನುಸರಿಸುತ್ತಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕ ರಾಮ್ ಕದಮ್ ತಿರುಗೇಟು ನೀಡಿದ್ದಾರೆ.