
ಲತಾ ಮಂಗೇಶ್ಕರ್: ಮಂದ ಸ್ವರ ಎಂದು ತಿರಸ್ಕರಿಸಿದವರೇ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದರು
ಕೀರ್ತನ್ ಶೆಟ್ಟಿ ಬೋಳ, Feb 6, 2022, 10:12 AM IST

ಲತಾ ಮಂಗೇಶ್ಕರ್….. ಈ ಹೆಸರನ್ನು ಕೇಳದವರು ಭಾರತದಲ್ಲಿ ಯಾರೂ ಇರಲಿಕ್ಕಿಲ್ಲ ಬಿಡಿ. ಹಿನ್ನಲೆ ಗಾಯಕಿಯಾಗಿ ಲತಾ ಅವರು ಏರಿದ ಎತ್ತರ ಉಳಿದ ಗಾಯಕರಿಗೆ ದಾರಿದೀಪ. ಇಂತಹ ಮಹಾನ್ ಗಾಯಕಿ ಇಂದು ಮುಂಬೈನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಲತಾ ಮಂಗೇಶ್ಕರ್ ಅವರು ಜನಿಸಿದ್ದು ಸೆಪ್ಟೆಂಬರ್ 28 1929ರಂದು ಇಂಧೋರ್ ನಲ್ಲಿ. ತಂದೆ ಶಾಸ್ತ್ರೀಯ ಸಂಗೀತಕಾರ, ರಂಗನಟ ಪಂಡಿತ್ ದೀನನಾಥ್ ಮಂಗೇಶ್ಕರ್. ತಾಯಿ ಶೇವಾಂತಿ (ನಂತರ ಶುಧಮತಿ ಎಂದು ಬದಲಾಯಿಸಲಾಯಿತು). ಮೀನಾ, ಆಶಾ, ಉಶಾ ಇವರು ಲತಾರವರ ತಂಗಿಯವರಾದರೆ ಹೃದಯವಂತ್ ಮಂಗೇಶ್ಕರ್ ತಮ್ಮ.
ಲತಾ ಅವರ ಬಾಲ್ಯದ ಹೆಸರು ಹೇಮಾ. ದೀನನಾಥ್ ಮಂಗೇಶ್ಕರ್ ಅವರ ಭವಬಂಧನ್ ನಾಟಕದಲ್ಲಿ ‘ಲತಿಕ’ ಪಾತ್ರದಲ್ಲಿ ಹೇಮಾ ಅವರ ಹೆಸರು ಲತಾ ಎಂದು ಬದಲಾಯಿತು.
ಇದನ್ನೂ ಓದಿ:ಹಾಡು ನಿಲ್ಲಿಸಿದ ಗಾನಕೋಗಿಲೆ…! ದಿಗ್ಗಜ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಇನ್ನಿಲ್ಲ
ಬಾಲ್ಯದಿಂದಲೇ ತಂದೆಯಿಂದ ಸಂಗೀತಾಭ್ಯಾಸ ಮಾಡಿದ್ದ ಲತಾ ಅವರು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಒಂದು ದಿನ ಲತಾ ಅವರು ತನ್ನೊಂದಿಗೆ ತಂಗಿ ಆಶಾ ಅವರನ್ನು ಶಾಲೆಗೆ ಕರೆದುಕೊಂಡು ಹೋದಾಗ ಅಧ್ಯಾಪಕರು ಗದರಿದ್ದರಂತೆ. ಶಾಲೆಗೆ ಹೋದರೆ ತಂಗಿಯ ಜೊತೆಗೆ ಮಾತ್ರ ಎಂದು ನಿರ್ಧರಿಸಿದ್ದ ಲತಾ ಮುಂದೆಂದೂ ಶಾಲೆಯ ಮೆಟ್ಟಿಲು ತುಳಿಯಲಿಲ್ಲ.
13ನೇ ಹರೆಯದಲ್ಲಿ (1942) ಲತಾ ತಂದೆ ದೀನನಾಥ ಮಂಗೇಶ್ಕರ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಮೃತರಾದರು. ನಂತರ ಲತಾ ಅವರ ಕುಟುಂಬವನ್ನು ನೊಡಿಕೊಂಡಿದ್ದು ನವಯುಗ್ ಚಿತ್ರಪಟ ಮೂವಿ ಕಂಪನಿಯ ಮಾಲಕ ಮಾಸ್ಟರ್ ವಿನಾಯಕ್ ಅವರು. ಅವರೇ ಮುಂದೆ ಲತಾ ಅವರ ಸಿನಿಪಯಣದ ಆರಂಭಕ್ಕೆ ಕಾರಣರಾದರು.
ಇದೇ ವರ್ಷ ಮರಾಠಿ ಚಿತ್ರ ‘ಕಿತಿ ಹಸಾಲ್’ ಚಿತ್ರಕ್ಕೆ ಲತಾ ಮಂಗೇಶ್ಕರ್ ಮೊದಲ ಬಾರಿ ಹಾಡಿದರು. ಆದರೆ ಅಂತಿಮವಾಗಿ ಈ ಹಾಡನ್ನು ಚಿತ್ರದಲ್ಲಿ ಸೇರಿಸಲಿಲ್ಲ. ನಂತರ ‘ಪೆಹಲಿ ಮಂಗಳಾ ಗೌರ್’ ಚಿತ್ರಕ್ಕೆ ಲತಾ ಹಾಡಿದರು.
1945ರಲ್ಲಿ ಇಂಧೋರ್ ನಿಂದ ಮುಂಬೈಗೆ ಬಂದ ಲತಾ, ‘ಆಪ್ ಕಿ ಸೇವಾ ಮೆ’ ಎಂಬ ಹಿಂದಿ ಚಿತ್ರಕ್ಕೆ ಮೊದಲ ಬಾರಿ ಹಾಡಿದರು. ಉಸ್ತಾದ್ ಅಮಾನ್ ಆಲಿ ಖಾನ್ ಅವರಿಂದ ಹಿಂದೂಸ್ಥಾನಿ ಸಂಗೀತ ಅಭ್ಯಾಸ ಆರಂಭಿಸಿದ ಲತಾ, ‘ಭಡೀ ಮಾ’ ಚಿತ್ರದಲ್ಲಿ ಆಶಾ ಅವರೊಂದಿಗೆ ಸಣ್ಣ ಪಾತ್ರವೊಂದರಲ್ಲಿಯೂ ನಟಿಸಿದರು.
ಬಾಲಿವುಡ್ ನಲ್ಲಿ ತನ್ನ ನೆಲೆ ಕಂಡುಕೊಳ್ಳಲು ಇನ್ನೂ ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಸಂಗೀತ ನಿರ್ದೇಶಕರು ಲತಾ ಅವರು ‘ಧ್ವನಿ ತುಂಬಾ ಸಪೂರ’ ಎಂದು ತಿರಸ್ಕರಿಸಿದ್ದರು. ಮುಂದೆ ಅದೇ ನಿರ್ದೇಶಕರು ಲತಾ ಅವರಿಂದ ಒಂದು ಹಾಡು ಹಾಡಿಸಲು ದುಂಬಾಲು ಬೀಳುವಂತೆ ಲತಾ ಮಂಗೇಶ್ಕರ್ ಬೆಳೆದರು.
1948ರಲ್ಲಿ ‘ಮಜಬೂರ್’ ಚಿತ್ರಕ್ಕೆ ಲತಾ ಹಾಡಿದ ‘ಘುಲಾಂ ಹೈದರ್ ಸಂಗೀತದ ‘ದಿಲ್ ಮೇರಾ ತೋಡಾ’ ಹಾಡು ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಹೈದರ್ ಅವರು ನನಲ್ಲಿ ವಿಶ್ವಾಸವಿರಿಸಿ ನನಗೆ ದೊಡ್ಡ ಅವಕಾಶ ನೀಡಿದ್ದರು ಎಂದು ಲತಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ನಂತರದ ದಿನಗಳಲ್ಲಿ ಶಂಕರ್ ಜೈಕಿಶನ್, ನೌಶದ್ ಆಲಿ, ಎಸ್.ಡಿ. ಬರ್ಮನ್, ಹೇಮಂತ್ ಕುಮಾರ್, ಕಲ್ಯಾಣ್ ಜಿ- ಆನಂದ್ ಜಿ, ಮದನ್ ಮೋಹನ್ ಮುಂತಾದ ಪ್ರಸಿದ್ದ ಸಂಗೀತ ನಿರ್ದೇಶಕರ ಹಾಡುಗಳನ್ನು ಲತಾ ತಮ್ಮ ಕಂಠದಿಂದ ಶ್ರೀಮಂತಗೊಳಿಸಿದರು. ಹಿಂದಿ ಚಿತ್ರರಂಗದ ಪ್ರತಿಯೊಬ್ಬ ಗಾಯಕರೊಂದಿಗೆ, ಬಹುತೇಕ ನಟಿಯರಿಗಾಗಿ ಹಾಡಿದ ಕೀರ್ತಿ ಲತಾ ಅವರದ್ದು.
ಹಿಂದಿ ಮಾತ್ರವಲ್ಲದೇ ಮರಾಠಿ, ಕನ್ನಡ, ಬೆಂಗಾಲಿ ಸೇರಿದಂತೆ ದೇಶದ ಸುಮಾರು 25ಕ್ಕೂ ಹೆಚ್ಚು ಭಾಷೆಗಳ 50 ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ.
1962ರ ಚೀನಾ ಭಾರತ ಯದ್ಧದ ಸಮಯದಲ್ಲಿ ಕವಿ ಪ್ರದೀಪ್ ರಚನೆಯ ಸಿ ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ಹಾಡಿದ್ದ ‘ ಏ ಮೇರೆ ವತನ್ ಕೆ ಲೋಗೋಂ’ ಹಾಡು ದೇಶಭಕ್ತಿ ಗೀತೆಯಾಗಿ ಪ್ರಸಿದ್ದವಾಗಿತ್ತು. ಈ ಹಾಡನ್ನು ಕೇಳಿದ್ದ ಅಂದಿನ ಪ್ರಧಾನಿ ಜವಹರಲಾಲ್ ನೆಹರು ‘ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಲತಾ ಅವರಲ್ಲಿ ಹೇಳಿದ್ದರಂತೆ.
‘ಆಪ್ ಕಿ ನಜರೋ ನೆ ಸಮಝಾ ಪ್ಯಾರ್ ಕೆ ಕಾಬಿಲ್ ಮುಝೆ’, ‘ಬಾಹೋಂ ಮೇನ್ ಚಲೇ ಆವೋ’, ಲಗ್ ಗಲೇ ಸೆ ಫಿರ್’, ದೇಖಾ ಏಕ್ ಖ್ವಾಬ್’, ಏ ಕಹಾಂ ಸೇ ಆಗಯೆ ಹಮ್’ ಮುಂತಾದ ಹಾಡುಗಳು ಲತಾ ಅವರು ಹಾಡಿದ ಎವರ್ ಗ್ರೀನ್ ಹಾಡುಗಳು.
ಲತಾ ಅವರ ಸಾಧನೆಗೆ ಸರ್ವೋಚ್ಛ ನಾಗರಿಕ ಪ್ರಶಸ್ತಿ ಭಾರತ ರತ್ನ, ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ನ್ಯೂಯಾರ್ಕ್ ವಿಶ್ವ ವಿದ್ಯಾಲಯ ಸೇರಿದಂತೆ ಒಟ್ಟು ಒಂಬತ್ತು ಗೌರವ ಡಾಕ್ಟರೇಟ್ ಗಳು, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಫ್ರಾನ್ಸ್ ಸರಕಾರ ನೀಡುವ ‘ಆಫಿಸರ್ ಆಫ್ ದಿ ಲಿಜಿಯನ್ ಆಫ್ ಆನರ್’ ಪ್ರಶಸ್ತಿಗಳು ಲತಾ ಅವರ ಸಾಧನೆಗೆ ಒಲಿದ ಗೌರವಗಳು.
ಅವಿವಾಹಿತರಾಗಿರುವ ಲತಾ ಮಂಗೇಶ್ಕರ್ ಅವರು ತಮ್ಮ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟವರು. ಕಳೆದ ಕೆಲವು ದಿನಗಳಿಂದ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆ ಫಲಕಾರಿಯಾಗಿದೆ ಇಂದು (ಫೆ.06) ನಿಧನರಾದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

38 ವರ್ಷಗಳ ನಂತರ,ನಾನು ಚಿತ್ರದ ಮುಖ್ಯ ಪೋಸ್ಟರ್ನಲ್ಲಿದ್ದೇನೆ: ಅನುಪಮ್ ಖೇರ್ ಸಂಭ್ರಮ

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
