ಸೋಂಕು ದೂರವಾದರೂ ಹತ್ತಿರವಾಗದ ಕೆಎಸ್‌ಆರ್‌ಟಿಸಿ ಸೇವೆ
Team Udayavani, Feb 17, 2021, 4:40 AM IST
ಕಾರ್ಕಳ: ಕೊರೊನಾ ಲಾಕ್‌ಡೌನ್ ವೇಳೆ ಬಂದ್ ಆಗಿದ್ದ ಇಲ್ಲಿನ ಬಂಡಿಮಠ ಹೊಸ ಬಸ್ ನಿಲ್ದಾಣ ಬಳಿ ಪುರಸಭೆ ಕಟ್ಟಡದಲ್ಲಿದ್ದ ಕೆಎಸ್‌ಆರ್‌ಟಿಸಿ ಕಚೇರಿ ಈ ವರೆಗೂ ತೆರೆದಿಲ್ಲ. ಇದರಿಂದ ಪ್ರಯಾಣಿಕರು ತ್ರಾಸಪಡುವಂತಾಗಿದೆ.
ಅಲೆದಾಡಿ ವಿಚಾರಿಸಬೇಕು!
ಘಟಕ ಬಾಗಿಲು ಮುಚ್ಚಿರುವುದರಿಂದ ಪ್ರಯಾಣಿಕರಿಗೆ ಸರಿಯಾದ ಮಾಹಿತಿಗಳು ದೊರೆಯುತ್ತಿಲ್ಲ. ಇದಕ್ಕಾಗಿ ಅವರು ಅಲೆದಾಟ ನಡೆಸಬೇಕಿದೆ. ಪ್ರವಾಸಿ ತಾಣವಾಗಿರುವ ಕಾರ್ಕಳ ಅಭಿವೃದ್ಧಿ ಹೊಂದುತ್ತಿದೆ. ಕೊರೊನಾದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ವಿವಿಧೆಡೆಗಳಿಗೆ ತೆರಳಲು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿರುತ್ತಾರೆ. ವಿವಿಧ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳಲು ಕೂಲಿ ಕಾರ್ಮಿಕರು, ಸಹಿತ ಪ್ರಯಾಣಿಕರು ಬಸ್ಸಿಗಾಗಿ ಕಾದು ನಿಂತಿರುತ್ತಾರೆ. ಲಭ್ಯವಿರುವ ಬಸ್‌ಗಳ ಕುರಿತು ಮಾಹಿತಿ ಪಡೆಯಲು ಯಾವುದೇ ವ್ಯವಸ್ಥೆಗಳಿಲ್ಲ.
ವ್ಯವಸ್ಥೆ ಇಲ್ಲ
ಪಕ್ಕದ ಅಂಗಡಿಯವರು, ಆಟೋ ರಿಕ್ಷಾ ಚಾಲಕರು ಮುಂತಾದವರ ಜತೆ ಬಸ್ಸಿನ ರೂಟ್, ಸಮಯ ಕೇಳುವ ಪರಿಸ್ಥಿತಿ ಬಂದಿದೆ. ಬಸ್ಸುಗಳ ವೇಳಾ ಪಟ್ಟಿ ಕುರಿತು ಮಾಹಿತಿ ಸಿಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಂಡಿಮಠ ಕಚೇರಿಯಲ್ಲಿ ಟಿಸಿ (ಟ್ರಾಫಿಕ್ ಕಂಟ್ರೋಲರ್)ಯೊಬ್ಬರು ಹಿಂದೆ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚಿನ ದಿನ ಅವರು ಇರುತ್ತಿರಲಿಲ್ಲ. ಶಾಖಾ ಕಚೇರಿ ಇದ್ದರೂ ಅಗತ್ಯವಾಗಿ ಅಲ್ಲಿರಬೇಕಿದ್ದ ಸ್ಥಿರ ದೂರವಾಣಿ, ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆಗಳು ಸಮ ರ್ಪಕವಾಗಿರುತ್ತಿರಲಿಲ್ಲ. ಊರುಗಳಿಗೆ ತೆರಳುವ ಬಸ್ ಗಳ, ವೇಳಾಪಟ್ಟಿ ಬಸ್ ವೇಳಾಪಟ್ಟಿ ತಿಳಿಸುವ ಪಿಎಎಸ್ (ಪಬ್ಲಿಕ್ ಅನೌಂನ್ಸ್‌ಮೆಂಟ್ ಸಿಸ್ಟಂ) ಕೂಡ ಕಚೇರಿಯಲ್ಲಿಲ್ಲ. ಬಸ್ ನಿಲ್ದಾಣ ಪರಿಸರದ ಅಳವಡಿಸಿದ್ದ ಹೈಮಾಸ್ಟ್ ಲೈಟ್‌ಗಳು ಕೂಡ ಸರಿಯಾಗಿ ಉರಿಯುತ್ತಿಲ್ಲ.
ಸಿಬಂದಿಗೆ ವಿಶ್ರಾಂತಿಗೆ ಸೀಮಿತ
ಕೊರೊನಾ ಆವರಿಸುವ ಮುಂಚಿತವೂ ಶಾಖೆ ಹೆಚ್ಚಿನ ದಿನಗಳಲ್ಲಿ ಕಚೇರಿ ತೆರೆಯದೆ ಮುಚ್ಚಲ್ಪಡುತಿತ್ತು. ಇದರಿಂದ ರಾತ್ರಿ ವೇಳೆ ಬಸ್ ಚಾಲಕ- ನಿರ್ವಾಹಕರು ಇದರಲ್ಲಿ ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆಯಲಷ್ಟೆ ಮಾತ್ರವೇ ಕಚೇರಿ ಬಳಕೆಯಾಗುತ್ತಿತ್ತು.
ಜಿಲ್ಲಾ ಕೇಂದ್ರವೇ ಗತಿ!
ನಗರದಲ್ಲಿ ಸೂಕ್ತವಾದ ಕೆಎಸ್‌ಆರ್‌ಟಿಸಿ ಕಚೇರಿ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಬಸ್ ಪಾಸ್ ಹಿರಿಯ ನಾಗರಿಕರ ಬಸ್ ಪಾಸ್ ಇತ್ಯಾದಿಗಳಿಗೆ ಸಂಬಂಧಿಸಿ ಸಮಸ್ಯೆಯಾಗುತ್ತಿದೆ. ಈ ಕಾರಣ ದೂರದ ಉಡುಪಿ ಜಿಲ್ಲಾ ಕೇಂದ್ರವನ್ನು ಅವಲಂಬಿಸಬೇಕಿದೆ.
ನಿಂತು ಕಾಲ ಕಳೆಯಬೇಕು
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಕೂಡ ಸರಿಯಾದ ವ್ಯವಸ್ಥೆಗಳಿಲ್ಲ. ಅಗಲ ಕಿರಿದಾದ ಸಣ್ಣ ವಿಶ್ರಾಂತಿ ಕೊಠಡಿಯಿದ್ದು, ಅದರಲ್ಲಿ ಸಾಕಷ್ಟು ಆಸನ ವ್ಯವಸ್ಥೆಗಳಿಲ್ಲ. ಹೆಚ್ಚು ಮಂದಿ ಬಸ್ಸಿಗೆ ಕಾಯುವ ವೇಳೆ ನಿಂತುಕೊಂಡೇ ಕಾಲ ಕಳೆಯಬೇಕಿದೆ.
ವಾರದೊಳಗೆ ತೆರೆಯಲಿದೆ
ಇಲಾಖೆಯಲ್ಲಿ ಸಿಬಂದಿ ಕೊರತೆಯಿದೆ. ಬಂಡಿಮಠದಲ್ಲಿ ಕಚೇರಿ ಬಂದ್ ಆಗಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಬಗ್ಗೆ ದೂರುಗಳು ಇರುವ ಹಿನ್ನೆಲೆಯಲ್ಲಿ ವಾರದೊಳಗೆ ಕಚೇರಿ ತೆರೆಯಲು ವ್ಯವಸ್ಥೆ ಕಲ್ಪಿಸಲಾಗುವುದು.
-ಉದಯ ಶೆಟ್ಟಿ, ಡಿಪೋ ಮ್ಯಾನೇಜರ್‌ಉಡುಪಿ
ಯಾರಲ್ಲಿ ಕೇಳಲಿ?
ಗುಲ್ಬರ್ಗಾ ಜಿಲ್ಲೆಗೆ ಹೋಗಬೇಕಿದೆ. ನಾನು ಅನಕ್ಷರಸ್ಥೆ§. ಎಷ್ಟು ಹೊತ್ತಿಗೆ ಬಸ್ ನಮ್ಮೂರಿಗೆ ಇದೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಕೇಳ್ಳೋಣ ಎಂದರೆ ಇಲ್ಲಿ ಯಾರು ಇಲ್ಲ.
-ಗಂಗಮ್ಮ, ಕೂಲಿ ಕಾರ್ಮಿಕರು