ಕುಷ್ಟಗಿ: ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆ ದುರ್ಮರಣ; ಇಬ್ಬರಿಗೆ ಗಂಭೀರ ಗಾಯ
Team Udayavani, Jan 27, 2022, 2:23 PM IST
ಕುಷ್ಟಗಿ: ತಾಲೂಕಿನ ಚಳಗೇರಾ ಗ್ರಾಮದ ಹೊರವಲಯದಲ್ಲಿ ಟ್ರಾಕ್ಟರ್ ಇಂಜಿನ್ ಸಮೇತ ರಾಶಿ ಯಂತ್ರ ಪಲ್ಟಿಯಾಗಿದ್ದು, ಕೂಲಿಕಾರ ಮಹಿಳೆಯೊಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು,ಇನ್ನಿಬ್ಬರು ಮಹಿಳೆಯರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಅನ್ನಕ್ಕ ಯಲ್ಲಪ್ಪ ಚಲವಾದಿ (32) ಮೃತ ದುರ್ದೈವಿ. ಬೆಳಗ್ಗೆ ದುರಗಪ್ಪ ಬಿಂಗಿ ತನ್ನ ಟ್ರಾಕ್ಟರ್ ನಲ್ಲಿ ರಾಶಿಯಂತ್ರ ಜೋಡಿಸಿಕೊಂಡು ರಾಶಿಗಾಗಿ ಹೋಗುತ್ತಿದ್ದರು. ರಾಶಿಯಂತ್ರದಲ್ಲಿ ಮಹಿಳಾ ಕೂಲಿ ಕಾರ್ಮಿಕರು ಕುಳಿತುಕೊಂಡಿದ್ದರು. ಕಡಿದಾದ ರಸ್ತೆಯ ತಗ್ಗಿನಲ್ಲಿ ರಾಶಿಯಂತ್ರದ ಎಕ್ಸೆಲ್ ಕಟ್ ಆಗಿ ಬಿದ್ದಿದೆ. ರಾಶಿ ಯಂತ್ರದಲ್ಲಿ ಕುಳಿತಿದ್ದ ಅನ್ನಕ್ಕ ಯಲ್ಲಪ್ಪ ಚಲವಾದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈರಮ್ಮ ಈರಪ್ಪ ಚಲವಾದಿ ತೀವ್ರ ಗಾಯಗೊಂಡಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ರೇಣುಕಾ ಗೊಲ್ಲರ ಗಾಯವಾಗಿದ್ದು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಟ್ರಾಕ್ಟರ್ ಚಾಲಕ ದುರಗಪ್ಪ ಬಿಂಗಿ ಪರಾರಿಯಾಗಿದ್ದು ಚಾಲಕನ ವಿರುದ್ದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.