ಪರಿಷತ್ ಅಭ್ಯರ್ಥಿಗಳ ಪಟ್ಟಿ ಕೇಂದ್ರಕ್ಕೆ ರವಾನೆ: ಈಶ್ವರಪ್ಪ
Team Udayavani, Jun 7, 2020, 7:27 PM IST
ಶಿವಮೊಗ್ಗ: ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ ಚುನಾವಣಾ ಕೋರ್ ಕಮಿಟಿಯಲ್ಲಿ ಯಾರಿಗೆ ಸ್ಥಾನ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರದ ನಾಯಕರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ದೊಡ್ಡ ಪಕ್ಷ. ಹಾಗಾಗಿ, ಸ್ವಾಭಾವಿಕವಾಗಿಯೇ ಅಪೇಕ್ಷಿತರ ಪಟ್ಟಿಯೂ ದೊಡ್ಡದಾಗಿರುತ್ತದೆ. ಪಕ್ಷದಲ್ಲಿ ಅಸಮಾಧಾನವಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಬಿಜೆಪಿ ಒಂದು ಕುಟುಂಬ ವ್ಯವಸ್ಥೆ ಇದ್ದಂತೆ. ಕುಟುಂಬಸ್ಥರು ತಮ್ಮ ಭಾವನೆ ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯ ಶಕ್ತಿ ಎಷ್ಟಿದೆ ಎಂದರೆ ಅಸಮಾಧಾನಿತರನ್ನೂ ಕರೆದು ಮಾತನಾಡುವ ಶಕ್ತಿ ಇದೆ. ಅಸಮಾಧಾನಿತರನ್ನು ಕರೆದು ಮಾತನಾಡಲಿದ್ದೇವೆ ಎಂದರು.
ಬಿಜೆಪಿಯೊಳಗಿನ ಸಮಸ್ಯೆಯನ್ನು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ಕುಳಿತು ಬಗೆಹರಿಸುವ ಆತ್ಮವಿಶ್ವಾಸವಿದೆ ಎಂದರು.
ಬಿಜೆಪಿಯಲ್ಲಿನ ಅಸಮಾಧಾನವನ್ನು ಕಾಂಗ್ರೆಸ್-ಜೆಡಿಎಸ್ ಲಾಭ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ನವರು ಅವರ ಪಕ್ಷದ ಸದಸ್ಯರನ್ನೇ ಕಳೆದುಕೊಂಡು ಅಧಿಕಾರ ಕಳೆದುಕೊಂಡರು. ಇನ್ನು ಜೆಡಿಎಸ್ ಮೇಲೇಳುವುದೇ ಕಷ್ಟವಾಗಿದೆ. ಆದರೂ ಇವರು ಲಾಭ ಪಡೆದುಕೊಳ್ಳುತ್ತಾರೆ ಎಂದರೆ ಹಾಸ್ಯಾಸ್ಪದವಾಗಲಿದೆ ಎಂದರು.