ಕೋವಿಡ್ ಸೋಂಕು ಹೆಚ್ಚಳ; ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ
ನಾಲ್ಕು ಜಿಲ್ಲೆ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಮಧ್ಯಪ್ರದೇಶ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿತ್ತು.
Team Udayavani, Apr 3, 2021, 11:45 AM IST
ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಚಿಂದ್ವಾರ, ರಟ್ಲಾಮ್ ನಗರ, ಬೇತುಲ್ ಮತ್ತು ಖಾರ್ಗಾಂವ್ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಮಧ್ಯಪ್ರದೇಶ ಸರ್ಕಾರ ಶನಿವಾರ (ಏಪ್ರಿಲ್ 03) ಲಾಕ್ ಡೌನ್ ಘೋಷಿಸಿದೆ.
ಚಿಂದ್ವಾರ ನಗರ ಪ್ರದೇಶದಲ್ಲಿ ಮತ್ತು ರಟ್ಲಾಮ್ ನಗರದಲ್ಲಿ ಏಪ್ರಿಲ್ 1ರಿಂದ ರಾತ್ರಿ 10ಗಂಟೆಯಿಂದ, ಬೇತುಲ್ ಜಿಲ್ಲೆಯಲ್ಲಿ ರಾತ್ರಿ 10ಗಂಟೆಯಿಂದ, ಖಾರ್ಗಾಂವ್ ಜಿಲ್ಲೆಯಲ್ಲಿ ಶುಕ್ರವಾರದಿಂದ ರಾತ್ರಿ 8ಗಂಟೆಯಿಂದ ಲಾಕ್ ಡೌನ್ ಜಾರಿಯಾಗಿದ್ದು, ಎಲ್ಲಾ ನಾಲ್ಕು ಜಿಲ್ಲೆಗಳಲ್ಲಿ ಬೆಳಗ್ಗೆ 6ಗಂಟೆವರೆಗೆ ಏಪ್ರಿಲ್ 5ರ ತನಕ ಲಾಕ್ ಡೌನ್ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಕೋವಿಡ್ ಹೆಚ್ಚಳವಾಗಿದ್ದ ನಾಲ್ಕು ಜಿಲ್ಲೆ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಮಧ್ಯಪ್ರದೇಶ ಸರ್ಕಾರ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿತ್ತು.
ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ನಾಲ್ಕು ಜಿಲ್ಲೆಗಳಿಗೆ ಹಿರಿಯ ಆರೋಗ್ಯ ಅಧಿಕಾರಿಗಳ ಪ್ರತ್ಯೇಕ ತಂಡವನ್ನು ಕಳುಹಿಸಿದ್ದು, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಕೋವಿಡ್ ಸೋಂಕು ನಿಗ್ರಹಿಸಲು ಸ್ಥಳೀಯ ಅಧಿಕಾರಿಗಳಿಗೆ ನೆರವು ನೀಡುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.