ಕೋವಿಡ್-19 ಕಾಲದಲ್ಲಿ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಸಂಕಷ್ಟ
ಪ್ರಾಯೋಗಿಕ ಅನುಭವ ಸಿಗದವರಿಗೆ ಪರೀಕ್ಷೆಯೂ ಆನ್‌ಲೈನ್!
Team Udayavani, Nov 28, 2020, 6:40 AM IST
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದು ದಿನವೂ ಕಾಲೇಜು ಮತ್ತು ಕಾಲೇಜು ಆಸ್ಪತ್ರೆಗೆ ಕಾಲಿಡದೆ ಪ್ರಾಯೋಗಿಕ ತರಗತಿಗಳಿಂದ ಪೂರ್ಣ ವಂಚಿತರಾಗಿರುವ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಯು ಜನವರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಮುಂದಿನ ವರ್ಷದಿಂದ ವೃತ್ತಿ ಆರಂಭಿಸಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ವಿ.ವಿ.ಯು ಜ. 19ರಿಂದ ವಾರ್ಷಿಕ ಪರೀಕ್ಷೆ ನಡೆಸಲು ಮುಂದಾಗಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಕೂಡ ಆನ್‌ಲೈನ್‌ನಲ್ಲೇ ಕೇಸ್ ಸ್ಟಡಿ ಮೂಲಕ ನಡೆಸಲು ತೀರ್ಮಾನಿಸಿದೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವ ಇಲ್ಲದೆ ಪದವಿ ಪಡೆ ಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಪರೀಕ್ಷೆ ಫಲಿತಾಂಶದಲ್ಲಿಯೂ ವ್ಯತ್ಯಾಸವಾಗಿ ಸ್ನಾತಕೋತ್ತರ ಪದವಿ ಸೀಟು ಪಡೆಯಲು ಸಮಸ್ಯೆಯಾಗಬಹುದು.
ಕಳೆದ 9 ತಿಂಗಳುಗಳಿಂದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಮಾತ್ರ ನಡೆಯುತ್ತಿವೆ. ಇದರಿಂದಾಗಿ ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಈ ವರ್ಷ ಕಾಲೇಜು ಅಥವಾ ಆಸ್ಪತ್ರೆಗೆ ಆಗಮಿಸಿಲ್ಲ. ರೋಗಿಗಳನ್ನು ಮುಖಾಮುಖೀಯಾಗಿ ತಪಾಸಣೆ ನಡೆಸಿಲ್ಲ.
ತಿಂಗಳಲ್ಲಿ ಪ್ರಾಯೋಗಿಕ ಕಲಿಕೆ ಕಷ್ಟ ಸಾಧ್ಯ
ಡಿಸೆಂಬರ್ ಒಂದರಿಂದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿದ್ದು, ಪ್ರಾಯೋಗಿಕ ತರಗತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ರಾಜೀವ್ ಗಾಂಧಿ ವಿ.ವಿ. ಹೇಳಿದೆ. ಆದರೆ ಬಹುತೇಕ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಒಂದು ತಿಂಗಳ ಅವಧಿ ಮಾತ್ರ ಇದ್ದು, ಶೇ. 10ರಷ್ಟು ಕೂಡ ಪ್ರಾಯೋಗಿಕ ಅನುಭವ ಸಾಧ್ಯವಾಗುವುದಿಲ್ಲ ಎಂದು ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ.
ವಿಕ್ಟೋರಿಯಾ ಪಿ.ಜಿ. ವಿದ್ಯಾರ್ಥಿಗಳಿಗೂ ಸಮಸ್ಯೆ
ರಾಜ್ಯದ ಪ್ರತಿಷ್ಠಿತ ಸರಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಪೀಡಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಾಲೇಜು ಡೀನ್ ಡಾ| ಜಯಂತಿ ತಿಳಿಸಿದ್ದಾರೆ.
– ಜಯಪ್ರಕಾಶ್ ಬಿರಾದಾರ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444