ಪೊಲೀಸರ ಮೇಲೆ ಶಾಸಕರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ
Team Udayavani, Jan 28, 2022, 11:42 AM IST
ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸರ ಜತೆಗೆ ಗಲಾಟೆ ಸೃಷ್ಟಿಸಿಕೊಂಡಿರುವ ಘಟನೆ ಗುರುವಾರ ರಾತ್ರಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ನಡೆದಿದೆ.
ರಾತ್ರಿ ಎಂ.ಪಿ. ಕುಮಾರಸ್ವಾಮಿ ಅವರು ಶಾಸಕರ ಭವನಕ್ಕೆ ಬರುವಾಗ ಅವರನ್ನು ಗುರುತಿಸದೇ ಪೊಲೀಸ್ ಕಾನ್ಸ್ಟೇಬಲ್ ತಡೆದಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಶಾಸಕ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಧಾನಸೌಧ ಭದ್ರತಾ ಎಸಿಪಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ನಮ್ಮ ಪೊಲೀಸರನ್ನು ಕುಮಾರಸ್ವಾಮಿ ಬಳಿ ಮಾಹಿತಿ ಪಡೆಯಲು ಕಳಿಸಿದ್ದೇನೆ.ಇವರಿಂದಲೂ ಕಾನ್ಸ್‌ಟೇಬಲ್ ಗೆ ದೌರ್ಜನ್ಯ ಆಗಿದೆ ಅನ್ನೋ ಮಾಹಿತಿಯೂ ಬಂದಿದೆ. ಏನಾಗಿದೆ ಅಂತ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಕುಡಿದ ಮತ್ತಿನಲ್ಲಿ ಕುಮಾರಸ್ವಾಮಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.