ಅಂಬಾನಿ ನಿವಾಸದ ಬಳಿ ಜಿಲೆಟಿನ್ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್-ಉಲ್-ಹಿಂದ್
ಇಸ್ರೇಲ್ ರಾಯಭಾರ ಕಚೇರಿ ಬಳಿಯ ಸ್ಫೋಟವೂ ನಮ್ಮದೇ ಎಂದ ಸಂಘಟನೆ
Team Udayavani, Feb 28, 2021, 8:15 PM IST
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ತುಂಬಿದ್ದ ಎಸ್‌ಯುವಿ ಕಾರನ್ನು ತಂದು ನಿಲ್ಲಿಸಿದ್ದು ನಾವೇ ಎಂದು ನಿಷೇಧಿತ ಜೈಶ್-ಉಲ್-ಹಿಂದ್ ಸಂಘಟನೆ ಹೇಳಿದೆ.
ಮುಂಬೈ ಪೊಲೀಸರಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಕಳುಹಿಸಲಾಗಿರುವ ಸಂದೇಶದಲ್ಲಿ ಈ ವಿಚಾರವನ್ನು ಸಂಘಟನೆ ತಿಳಿಸಿದ್ದು, “ಇದು ಕೇವಲ ಟ್ರಯಲ್ ಅಷ್ಟೇ. ದೊಡ್ಡ ಚಿತ್ರ ಮುಂದೆ ಬರಲಿದೆ’ ಎಂಬ ಬೆದರಿಕೆಯನ್ನು ಹಾಕಿದೆ. ಅಲ್ಲದೆ, ಅಂಬಾನಿ ಮನೆಯ ಬಳಿ ಎಸ್‌ಯುವಿ ತಂದು ನಿಲ್ಲಿಸಿದ ನಮ್ಮ ಸಹೋದರ, ಈಗ ಸುರಕ್ಷಿತ ಸ್ಥಳಕ್ಕೆ ತಲುಪಿಯಾಗಿದೆ ಎಂದು ಹೇಳಲಾಗಿದೆ.
ರಾಯಭಾರಿ ಕಚೇರಿ ಬಳಿಯ ಸ್ಫೋಟವೂ ನಮ್ಮದೇ!
ಸಂದೇಶದಲ್ಲಿ, ಜ. 29ರಂದು ಸಂಭವಿಸಿದ್ದ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿನ ಸ್ಫೋಟ ಕೂಡ ನಮ್ಮದೇ ಕೆಲಸ ಎಂದು ಜೈಶ್-ಉಲ್-ಹಿಂದ್ ಹೇಳಿದ್ದು, ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಇಸ್ರೇಲ್‌ನ ಗುಪ್ತಚರ ಸಂಸ್ಥೆ (ಮೊಸ್ಸಾದ್) ಜಂಟಿಯಾಗಿ ಆ ಪ್ರಕರಣದ ತನಿಖೆ ನಡೆಸಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅವು ಸಫಲವಾಗಲಿಲ್ಲ ಎಂದು ಅಣಕಿಸಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಸಂದೇಶದ ಮೂಲವನ್ನು ಕೆದಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಟಿ ಶುಭಾ ಪೂಂಜಾ ಜತೆ ಎಂಟ್ರಿ ಕೊಟ್ರು ಕನ್ನಡದ ನಟ…ಯಾರವರು ?
ಈ ನಡುವೆ, ಕಾರಿನಲ್ಲಿ ಪತ್ತೆಯಾಗಿದ್ದ ಜಿಲೆಟಿನ್ ಕಡ್ಡಿಗಳು ನಾಗ್ಪುರದ ಸೋಲಾರ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ತಯಾರಾದವೆಂದು ಪೊಲೀಸರು ತಿಳಿಸಿದ್ದಾರೆ.
ಗಸ್ತು ಹೆಚ್ಚಳ
ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಮೇಲಿನ ದಾಳಿಯ ಹೊಣೆಯನ್ನು ಜೈಶ್-ಉಲ್-ಹಿಂದ್ ಸಂಘಟನೆ ಹೊತ್ತುಕೊಂಡಿರುವ ಹಿನ್ನೆಲೆಯಲ್ಲಿ, ಇಸ್ರೇಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿಮಾಚಲ ಪ್ರದೇಶದ ಧರಮ್‌ಕೋಟ್ ಹಾಗೂ ಮೆಕ್ಲೋಗಂಜ್ ಪ್ರಾಂತ್ಯಗಳಲ್ಲಿ ಭದ್ರತಾ ಪಡೆಗಳ ಗಸ್ತು ಹೆಚ್ಚಿಸಲಾಗಿದೆ.