ಕ್ರಿಮಿನಲ್ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್
Team Udayavani, Dec 2, 2022, 9:00 PM IST
ಬೆಂಗಳೂರು: ಭಯೋತ್ಪಾದನೆ, ಕ್ರಿಮಿನಲ್ ಚಟುವಟಿಕೆ ಮತ್ತು ಗೂಂಡಾ ರಾಜಕೀಯದಂಥ ದೇಶವಿರೋಧಿ ಚಟುವಟಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಮೊನ್ನೆ ಯಾವುದೋ ಕಾರ್ಯಕ್ರಮದ ವೇದಿಕೆಯಲ್ಲಿ ನಮ್ಮವರು ಪಾಲ್ಗೊಂಡಿದ್ದನ್ನು ಗಮನಿಸಿದ್ದೇನೆ. ಆ ಕುರಿತಂತೆ ವಿವರಣೆ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಯಾರ ಶಿಷ್ಯ. ಎಲ್ಲಿಂದ ರಾಜಕಾರಣಕ್ಕೆ ಬಂದರು ಎಂದು ನಾನೇನೂ ಬಹಿರಂಗಪಡಿಸಬೇಕಿಲ್ಲ. ಡಿ.ಕೆ.ಶಿವಕುಮಾರ್ ಇತಿಹಾಸ, ವ್ಯವಸ್ಥೆಗಳು, ರಕ್ತಸಿಕ್ತ ಕಾಂಗ್ರೆಸ್‌ನ ಚಟುವಟಿಕೆಗಳು ನನಗಿಂತ ಹೆಚ್ಚಾಗಿ ಬೆಂಗಳೂರಿನ ಜನರಿಗೆ ತಿಳಿಸಿದೆ ಎಂದು ಹೇಳಿದರು.
ರಾಜಕೀಯ ವ್ಯವಸ್ಥೆಯಲ್ಲಿ ಸಹಜವಾಗಿ ಕೆಲ ಅಚಾತುರ್ಯಗಳಾಗುತ್ತವೆ. ಇಂಥ ಘಟನೆಗಳು, ಕ್ರಿಮಿನಲ್ ಕೇಸುಗಳ ಕಾರಣವನ್ನೂ ಗಮನಿಸುತ್ತೇವೆ. ಎಲ್ಲ ಪ್ರಕರಣಗಳನ್ನೂ ಒಂದೇರೀತಿ ನೋಡಲು ಸಾಧ್ಯವಿಲ್ಲ. ನಮ್ಮ ಸಂಘಟನೆಯ ಎಲ್ಲರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಿಂದುತ್ವದ ಪರವಾದ ಹೋರಾಟ ಮಾಡಿದ್ದರ ವಿರುದ್ಧ ಕೇಸುಗಳೂ ಇವೆ ಎಂದು ತಿಳಿಸಿದರು.