ಶಿರಸಿ ಪ್ರತ್ಯೇಕ ಜಿಲ್ಲೆಗೆ ನನ್ನ ಅಭ್ಯಂತರವಿಲ್ಲ : ಸಚಿವ ಶಿವರಾಮ ಹೆಬ್ಬಾರ್
Team Udayavani, Oct 4, 2021, 3:35 PM IST
ಶಿರಸಿ: ದೊಡ್ಡ ಜಿಲ್ಲೆ ಉತ್ತರ ಕನ್ನಡವನ್ನು ಇಬ್ಭಾಗ ಮಾಡುವ ಬಗ್ಗೆ ನನ್ನ ಅಭ್ಯಂತರವಿಲ್ಲ. ಆದರೆ, ಎಲ್ಲರ ಜೊತೆ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹೆಬ್ಬಾರ್ ,ಆವತ್ತೂ ಹೇಳಿದ್ದೇನೆ, ಇವತ್ತೂ ಹೇಳುತ್ತೇನೆ. ಜಿಲ್ಲೆಯನ್ನು ಇಬ್ಭಾಗ ಮಾಡುವಾಗ ಪಕ್ಷದ ಪ್ರಮುಖರ ಜೊತೆ, ಜಿಲ್ಲೆಯ ಚಿಂತಕರ ಜೊತೆ, ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಸಮಾಲೋಚಿಸಿ, ಪಕ್ಷಾತೀತ ನೆಲೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಈ ತನಕ ಯಾವ ಶಾಸಕರು, ಸಂಸದರ ಜೊತೆಯೂ ಚರ್ಚೆ ಮಾಡಿಲ್ಲ. ಸರಕಾರದ ವೆಚ್ಚ ಕೂಡ ನೋಡಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ವಿಂಗಡನೆ ಮಾಡುವಾಗ ಸಮಾಲೋಚಿಸಬೇಕು. ವೈಯಕ್ತಿಕ ವಾಗಿ ಬೇರೆ ಭಿನ್ನಾಭಿಪ್ರಾಯ ಇಲ್ಲ. ಜಿಲ್ಲೆಯ ರಾಜಕಾರಣಿಗಳ ಇಚ್ಛಾ ಶಕ್ತಿ ಕೊರತೆಯೂ ಇಲ್ಲ, ಜಿಲ್ಲೆಯ ಹಿತದೃಷ್ಟಿಯಿಂದ ಏನು ಬೇಕು ಸಮಾಲೋಚನೆ ಮಾಡುತ್ತೇವೆ. ಶಿರಸಿಯಲ್ಲಿ ಸಾರಿಗೆ, ತೋಟಗಾರಿಕೆ, ಕೆಇಬಿ, ಕೃಷಿ, ಅರಣ್ಯ ಅಧಿಕಾರಿಗಳ ಜಿಲ್ಲಾ ಕಚೇರಿ ಇದೆ. ಜಿಲ್ಲೆ ಮಾಡುವದರಿಂದ ಸಾಧಕ ಬಾಧಕ ಕುರಿತು ಪ್ರಾಮಾಣಿಕ ಚರ್ಚೆ ಮಾಡುತ್ತೇವೆ ಎಂದರು.
ಪಕ್ಕದ ಹಾನಗಲ್ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಉಸ್ತುವಾರಿ ಜವಬ್ದಾರಿ ಕೂಡ ನನಗೆ ನೀಡಿದ್ದಾರೆ. ನನ್ನ ಪಕ್ಕದ ಕ್ಷೇತ್ರ. ಅಭ್ಯರ್ಥಿ ಆಯ್ಕೆಯ ಬಳಿಕ ಚುನಾವಣಾ ರಣತಂತ್ರ ಮಾಡುತ್ತೇವೆ ಎಂದರು.
ಕುಮಟಾ, ಶಿರಸಿಗೆ ಇಎಸ್‌ಐ ಆಸ್ಪತ್ರೆ ಬರಲಿದೆ. ಇನ್ನೂ ಎರಡು ಆಸ್ಪತ್ರೆ ಸೇವೆ ಸಿಗಲಿದೆ. ಪ್ರತೀ ತಾಲೂಕಿಗೂ ಒಂದೊಂದು ಆಸ್ಪತ್ರೆ ಬೇಕು ಎಂಬ ಬೇಡಿಕೆ ನಮ್ಮದು. ಕೇಂದ್ರ ಸರಕಾರದ ಅಧೀನದ ಸಂಗತಿ ಆಗಿದ್ದರಿಂದ ಸಂಸದರ ಸಹಕಾರ, ನೆರವು ಬೇಕು. ಅವರ ಜೊತೆ ಸಮಾಲೋಚಿಸಿ ಅಭಿವೃದ್ಧಿ ಮಾಡುತ್ತೇವೆ ಎಂದರು.
ಶಿರಸಿ ಕುಮಟಾ ರಸ್ತೆ ಅಭಿವೃದ್ಧಿಗೆ ತಡೆ ಇದ್ದ ನ್ಯಾಯಾಲಯದ ಮೊರೆ ಪ್ರಸಂಗ ಇನ್ನಿಲ್ಲ. ಪ್ರಕರಣ ಖುಲಾಸೆ ಆಗಿದೆ. ಇನ್ನು ಕುಮಟಾ ಶಿರಸಿ ರಸ್ತೆ ಅಭಿವೃದ್ಧಿಗೆ ವೇಗದ ಕೊರತೆ ಆಗದು ಎಂದರು.
ಸಂಸ್ಕಾರ ಹೇಳುತ್ತದೆ
ದೇಶಪಾಂಡೆ ಅವರು ಹಿರಿಯ ರಾಜಕಾರಣಿ. ಅವರ ಮಾತೇ ಅವರ ಸಂಸ್ಕಾರ ಹೇಳುತ್ತದೆ. ಆದರೆ, ತಾಳ್ಮೆ ಇಟ್ಟುಕೊಳ್ಳಬೇಕು. ಚುನಾವಣೆಗೆ ದೂರ ಇದ್ದಾಗಲೇ ತಾಳ್ಮೆ ಕಳೆದುಕೊಂಡರೆ ಹೇಗೆ ಎಂದು ಸಚಿವ ಹೆಬ್ಬಾರ್ ಪ್ರಶ್ನಿಸಿದರು.
ಬಿಜೆಪಿ ಬಗ್ಗೆ ಬಿಡಿ, ಅವರ ಪಕ್ಷದ ಮೇಲೂ ಹರಿಹಾಯ್ದಿದ್ದಾರೆ. ಅದ್ಯಾಕೆ? ಸ್ಥಿಮಿತ ಕಳೆದುಕೊಳ್ಳಬಾರದು. ಈಗಲೇ ಸ್ಥಿಮಿತ ಕಳೆದುಕೊಂಡರೆ ಸಾವಿರ ಪಟ್ಟು ಸವಾಲು ಚುನಾವಣೆ ಸಂದರ್ಭದಲ್ಲಿ ಬರಲಿವೆ. ಅವುಗಳನ್ನೂ ಪ್ರೀತಿಯಿಂದ ಎದುರಿಸಬೇಕಾಗುತ್ತದೆ ಎಂದೂ ಸಲಹೆ ನೀಡಿದರು.